
ಗುರುವಾರ, ಮಾರ್ಚ್ 23ರಂದು ಸಿಲ್ಹೆಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ ಮತ್ತು ಐರ್ಲೆಂಡ್ ತಂಡಗಳ ನಡುವಿನ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ತಂಡ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ, ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತು.
ಮೂರನೇ ಪಂದ್ಯದಲ್ಲಿ ಆಂಡ್ರ್ಯೂ ಬಲ್ಬಿರ್ನಿ ನಾಯಕತ್ವದ ಐರ್ಲೆಂಡ್ ತಂಡವನ್ನು ಸೋಲಿಸಿದ ತಮೀಮ್ ಇಕ್ಬಾಲ್ ನಾಯಕತ್ವದ ಬಾಂಗ್ಲಾದೇಶ ತಂಡ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ 10 ವಿಕೆಟ್ ಗೆಲುವು ದಾಖಲಿಸಿತು. ಅಲ್ಲದೇ 221 ಎಸೆತಗಳು ಬಾಕಿ ಇರುವಂತೆಯೇ ಗೆದ್ದು, ತಮ್ಮ ಎರಡನೇ ಅತಿದೊಡ್ಡ ಜಯ ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಐರ್ಲೆಂಡ್ ತಂಡ 28.1 ಓವರ್‌ಗಳಲ್ಲಿ 101 ರನ್‌ಗಳಿಗೆ ಸರ್ವಪತನ ಕಂಡಿತು. ವಿಕೆಟ್ ಕೀಪರ್-ಬ್ಯಾಟರ್ ಲೋರ್ಕನ್ ಟಕರ್ ಮತ್ತು ಕರ್ಟಿಸ್ ಕ್ಯಾಂಫರ್ ಅವರನ್ನು ಹೊರತುಪಡಿಸಿ ಐರ್ಲೆಂಡ್ ತಂಡದ ಯಾವುದೇ ಬ್ಯಾಟರ್‌ಗಳು ಎರಡಂಕಿ ಮೊತ್ತ ಗಳಿಸಲು ವಿಫಲರಾದರು.
ಆರಂಭಿಕರಾದ ಸ್ಟೀಫನ್ ಡೋಹೆನಿ 8 ರನ್, ಪಾಲ್ ಸ್ಟ್ರೀಲಿಂಗ್ 7 ರನ್ ಗಳಿಸಿ ಔಟಾದರೆ, ನಾಯಕ ಆಂಡ್ರ್ಯೂ ಬಲ್ಬಿರ್ನಿ 6 ರನ್, ಹ್ಯಾರಿ ಟೆಕ್ಟರ್ ಸೊನ್ನೆ ಸುತ್ತಿದರು.
ಲೋರ್ಕನ್ ಟಕರ್ ಮತ್ತು ಕರ್ಟಿಸ್ ಕ್ಯಾಂಫರ್ ಜೋಡಿ ಐದನೇ ವಿಕೆಟ್‌ಗೆ 42 ರನ್‌ಗಳ ಜೊತೆಯಾಟವಾಡಿದರು. ಇವರ ವಿಕೆಟ್ ಉರುಳುತ್ತಿದ್ದಂತೆಯೇ ಐರ್ಲೆಂಡ್‌ನ ಸ್ಕೋರ್ ಬೋರ್ಡ್ ಮೇಲೆರಲಿಲ್ಲ.

ಲೋರ್ಕನ್ ಟಕರ್ 31 ಎಸೆತಗಳಲ್ಲಿ 28 ರನ್ ಗಳಿಸಿದರೆ, ಕರ್ಟಿಸ್ ಕ್ಯಾಂಫರ್ 48 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ಸಮೇತ 36 ರನ್ ಗಳಿಸಿದರು. ಇವರಿಬ್ಬರ ವಿಕೆಟ್‌ಗಳನ್ನು ಕ್ರಮವಾಗಿ ಹಸನ್ ಮಹಮೂದ್ ಮತ್ತು ಎಬಾಡೋಟ್ ಹೊಸೈನ್ ಪಡೆದುಕೊಂಡರು.
ಹಸನ್ ಮಹಮೂದ್ 8.1 ಓವರ್‌ಗಳಲ್ಲಿ 32 ರನ್ ನೀಡಿ 5 ವಿಕೆಟ್ ಗೊಂಚಲು ಪಡೆದು ಮಿಂಚಿದರು. ಮತ್ತೊಬ್ಬ ವೇಗಿ ತಸ್ಕಿನ್ ಅಹ್ಮದ್ 10 ಓವರ್‌ಗಳಲ್ಲಿ 26 ರನ್ ನೀಡಿ 3 ವಿಕೆಟ್ ಪಡೆದರು. ಎಬಾಡೋಟ್ ಹೊಸೈನ್ 6 ಓವರ್‌ಗಳಲ್ಲಿ 26 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು.
ಐರ್ಲೆಂಡ್ ನೀಡಿದ್ದ 102 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ 13.1 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ ಇನ್ನೂ 36.5 ಓವರ್‌ಗಳು ಬಾಕಿ ಉಳಿದಿರುವಂತೆಯೇ 102 ರನ್ ಗಳಿಸಿ ಗೆಲುವು ಕಂಡರು.
ಬಾಂಗ್ಲಾದೇಶ ತಂಡದ ಆರಂಭಿಕರಾದ ಲಿಟ್ಟನ್ ದಾಸ್ ಮತ್ತು ತಮೀಮ್ ಇಕ್ಬಾಲ್ ಗೆಲುವಿಗೆ ಮುನ್ನುಡಿ ಬರೆದರು. ಲಿಟ್ಟನ್ ದಾಸ್ ತಮ್ಮ ಉತ್ತಮ ಫಾರ್ಮ್ ಮುಂದುವರೆಸಿ 38 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ ಅಜೇಯ 50 ರನ್ ಗಳಿಸಿದರು. ನಾಯಕ ತಮೀಮ್ ಇಕ್ಬಾಲ್ 41 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಮೇತ 41 ರನ್ ಬಾರಿಸಿದರು.
ಇದೇ ವೇಳೆ ಬೌಲಿಂಗ್‌ನಲ್ಲಿ ಐರ್ಲೆಂಡ್ ತಂಡದ ಮಾರ್ಕ್ ಅಡೈರ್, ಗ್ರಹಾಂ ಹ್ಯೂಮ್, ಮ್ಯಾಥ್ಯೂ ಹಂಫ್ರೀಸ್ ಮತ್ತು ಕರ್ಟಿಸ್ ಕ್ಯಾಂಫರ್ ನಾಲ್ವರು ಬೌಲರ್‌ಗಳು ಬೌಲಿಂಗ್ ಮಾಡಿದರೂ, ಅವರಲ್ಲಿ ಯಾರೂ ವಿಕೆಟ್ ಪಡೆಯುವಲ್ಲಿ ಮತ್ತು ರನ್ ನಿಯಂತ್ರಿಸುವಲ್ಲಿ ವಿಫಲರಾದರು.