
ನ್ಯೂಜಿಲೆಂಡ್ ಪ್ರವಾಸ ಕೈಗೊಂಡು ಟೆಸ್ಟ್ ಸರಣಿಯನ್ನು ಆಡುತ್ತಿರುವ ಬಾಂಗ್ಲಾದೇಶ ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ನಾಲ್ಕನೇ ದಿನದಾಟದಲ್ಲಿಯೂ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಮೇಲುಗೈ ಸಾಧಿಸಿರುವ ಬಾಂಗ್ಲಾದೇಶ ತಂಡ ನ್ಯೂಜಿಲೆಂಡ್ ತಂಡವನ್ನು ಅದರದ್ದೇ ನೆಲದಲ್ಲಿ ಮಣಿಸುವ ಅವಕಾಶವನ್ನು ಹೊಂದಿದೆ. ಈ ಸಾಧನೆಯನ್ನು ಮಾಡಿದರೆ ಬಾಂಗ್ಲಾದೇಶ ನ್ಯೂಜಿಲೆಂಡ್ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್ ಪಂದ್ಯವೊಂದನ್ನು ಗೆದ್ದ ಸಾಧನೆ ಮಾಡಿದಂತಾಗುತ್ತದೆ.
ಬಾಂಗ್ಲಾದೇಶ ನ್ಯೂಜಿಲೆಂಡ್ ನೆಲದಲ್ಲಿ ಯಾವ ಮಾದರಿಯಲ್ಲಿಯೂ ಈವರೆಗೆ ಪಂದ್ಯವನ್ನು ಗೆದ್ದಿಲ್ಲ. ಈಗ ಆ ಕೆಟ್ಟ ಸಾಧನೆಯನ್ನು ಅಳಿಸಿಹಾಕುವ ಅವಕಾಶ ಬಾಂಗ್ಲಾದೇಶದ ಮುಂದಿದೆ. ಮೌಂಡ್ ಮೌಂಗನ್ಯೂನಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನದಂತ್ಯಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡ 147 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿದ್ದು ಸಂಕಷ್ಟದಲ್ಲಿದೆ. ಬಾಂಗ್ಲಾದೇಶಕ್ಕಿಂತ ಕೇವಲ 17 ರನ್‌ಗಳ ಮುನ್ನಡೆಯನ್ನು ಪಡೆಯಲು ಮಾತ್ರವೇ ತಂಡಕ್ಕೆ ಸಾಧ್ಯವಾಗಿದೆ.
ಈ ಪಂದ್ಯದ ಆರಂಭದಿಂದಲೇ ಬಾಂಗ್ಲಾದೇಶ ಹಿಡಿತವನ್ನು ಸಾಧಿಸಲು ಆರಂಭಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡದ ಪರವಾಗಿ ಡೆವೋನ್ ಕಾನ್ವೆ ಭರ್ಜರಿ ಶತಕ ಹಾಗೂ ಹೆನ್ರಿ ನಿಕೋಲಸ್ ಮತ್ತು ವಿಲ್ ಯಂಗ್ ಅರ್ಧ ಶತಕದ ಹೊರತಾಗಿಯೂ ನ್ಯೂಜಿಲೆಂಡ್ ತಂಡವನ್ನು 328 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು ಬಾಂಗ್ಲಾದೇಶ.
ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶದ ಬ್ಯಾಟಿಂಗ್ ಪ್ರದರ್ಶನ ನಿಜಕ್ಕೂ ಅಮೋಘವಾಗಿತ್ತು. ತಂಡದ ಎಲ್ಲಾ ಆಟಗಾರರು ಕೂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಯಶಸ್ವಿಯಾದರು. ಸಾಂಘಿಕ ಪ್ರದರ್ಶನ ನೀಡಿದ ಬಾಂಗ್ಲಾದೇಶ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ನೀಡಿದ್ದು ನಾಯಕ ಮಾಮಿನ್ಯುಲ್ ಹಾಗೂ ಲಿಟನ್ ದಾಸ್ ಜೊತೆಯಾಟ. 158 ರನ್‌ಗಳ ಭರ್ಜರಿ ಜೊತೆಯಾಟವನ್ನು ಆಡಿದ ಈ ಜೋಡಿ ಕ್ರಮಾಗಿ 88 ರನ್ ಹಾಗೂ 86 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಹೀಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ 458 ರನ್‌ಗಳಿಸಿದ ಬಾಂಗ್ಲಾದೇಶ ತಂಡ 130 ರನ್‌ಗಳ ಬೃಹತ್ ಮುನ್ನಡೆಯನ್ನು ಸಂಪಾದಿಸಿದೆ.
ಇನ್ನು ಬಾಂಗ್ಲಾದೇಶದ ಬ್ಯಾಟಿಂಗ್ ವಿಭಾಗದ ಪ್ರದರ್ಶನದಿಂದ ಆತ್ಮವಿಶ್ವಾಸ ಪಡೆದುಕೊಂಡ ಬೌಲಿಂಗ್ ವಿಭಾಗ ಕೂಡ ಎರಡನೇ ಇನ್ನಿಂಗ್ಸ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಿದೆ. ನಾಲ್ಕನೇ ದಿನದಾಟದಲ್ಲಿ ಕಿವಿಸ್ ಪಡೆಯ ಪರವಾಗಿ ವಿಲ್ ಯಂಗ್ ಮಾತ್ರವೇ ಅರ್ಧ ಶತಕಗಳಿಸಿದರು. ನಾಲ್ಕನೇ ದಿನದಂತ್ಯಕ್ಕೆ ಕಿವೀಸ್ ತಂಡ ತನ್ನ ಪ್ರಮುಖ ಐದು ವಿಕೆಟ್ ಕಳೆದುಕೊಂಡಿದೆ. ಕೇವಲ 17 ರನ್‌ಗಳ ಮುನ್ನಡೆ ಸಾಧಿಸಿದೆ. ಅಂತಿಮ ದಿನ ಪಂದ್ಯವನ್ನು ನ್ಯೂಜಿಲೆಂಡ್ ಡ್ರಾ ಸಾಧಿಸುವುದು ಕೂಡ ಕಷ್ಟದ ಸ್ಥಿತಿಯಿದೆ. ಹೀಗಾಗಿ ಬಾಂಗ್ಲಾದೇಶ ನ್ಯೂಜಿಲೆಂಡ್ ನೆಲದಲ್ಲಿ ಮೊದಲ ಪಂದ್ಯವನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಲು ಸಜ್ಜಾಗಿದೆ.
ಬಾಂಗ್ಲಾದೇಶ ಪ್ಲೇಯಿಂಗ್ XI: ಟಾಮ್ ಲ್ಯಾಥಮ್ (ನಾಯಕ), ವಿಲ್ ಯಂಗ್, ಡೆವೊನ್ ಕಾನ್ವೇ, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಕೈಲ್ ಜೇಮಿಸನ್, ಟಿಮ್ ಸೌಥಿ, ನೀಲ್ ವ್ಯಾಗ್ನರ್, ಟ್ರೆಂಟ್ ಬೌಲ್ಟ್
ಬೆಂಚ್: ಡ್ಯಾರಿಲ್ ಮಿಚೆಲ್, ಮ್ಯಾಟ್ ಹೆನ್ರಿ
ಶಾದ್ಮನ್ ಇಸ್ಲಾಂ, ಮಹ್ಮುದುಲ್ ಹಸನ್ ಜಾಯ್, ನಜ್ಮುಲ್ ಹೊಸೈನ್ ಶಾಂಟೊ, ಮೊಮಿನುಲ್ ಹಕ್ (ನಾಯಕ), ಮುಶ್ಫಿಕರ್ ರಹೀಮ್, ಲಿಟನ್ ದಾಸ್ (ವಿಕೆಟ್ ಕೀಪರ್), ಯಾಸಿರ್ ಅಲಿ, ಮೆಹಿದಿ ಹಸನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಎಬಾಡೋತ್ ಹೊಸೈನ್
ಬೆಂಚ್: ತೈಜುಲ್ ಇಸ್ಲಾಂ, ಅಬು ಜಾಯೆದ್, ಶೋಹಿದುಲ್ ಇಸ್ಲಾಂ, ಫಜಲ್ ಮಹಮೂದ್, ಖಲೀದ್ ಅಹ್ಮದ್, ಮೊಹಮ್ಮದ್ ನಯಿಮ್, ನೂರುಲ್ ಹಸನ್