ಮಳೆ ನಿಂತರೂ, ಮರದ ಹನಿ ನಿಲ್ಲಲ್ಲ ಎನ್ನುವ ಹಾಗೆ, 2023ರ ಏಷ್ಯಾ ಕಪ್ ಪಂದ್ಯಾವಳಿಯ ಅರ್ಧಭಾಗ ಮುಗಿದರೂ, ಅದರ ವಿವಾದಗಳು ಇನ್ನೂ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ.
ಪಂದ್ಯಾವಳಿಯ ಆತಿಥ್ಯ ವಹಿಸುವ ವಿವಾದದಿಂದ ಹಿಡಿದು ಮಳೆಯಿಂದಾಗಿ ಪಂದ್ಯದ ತಾಣ ಬದಲಿಸುವವರೆಗೆ ಹೊಸ ಹೊಸ ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಕೊಲಂಬೊದಲ್ಲಿ ನಡೆಯಲಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಪಂದ್ಯಗಳಿಗೆ ಮಳೆ ಭೀತಿ ಎದುರಾಗಿದೆ.

ಇದೇ ವೇಳೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರಮುಖ ಪಂದ್ಯಕ್ಕೆ ಮಾತ್ರ ಮೀಸಲು ದಿನವನ್ನು ನಿಗದಿಪಡಿಸಿದೆ. ಇದು ಕ್ರಿಕೆಟ್ ಲೋಕದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಕ್ರಿಕೆಟ್ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರು ಎಸಿಸಿ ನಿರ್ಧಾರವನ್ನು ಟೀಕಿಸುತ್ತಿದ್ದಾರೆ.
ಉಳಿದ ಸೂಪರ್ 4 ಪಂದ್ಯಗಳಿಗೆ ಇಲ್ಲದ ಮೀಸಲು ದಿನ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಏಕೆ? ಎಂಬ ಪ್ರಶ್ನೆಗಳಿಗೆ, ಇದೀಗ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿಗಳು ಸ್ಪಷ್ಟನೆ ನೀಡುವ ಮೂಲಕ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿವೆ.
ಭಾನುವಾರ, ಸೆಪ್ಟೆಂಬರ್ 10ರಂದು ಕೊಲಂಬೊದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲಾಗಿದೆ ಎಂದು ಸೆಪ್ಟೆಂಬರ್ 8ರಂದು ಎಸಿಸಿ ಪ್ರಕಟಿಸಿತು. ಅಂದರೆ, ಸೆಪ್ಟೆಂಬರ್ 10ರಂದು ನಡೆಯುವ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ಆ ಪಂದ್ಯವನ್ನು ಸೆಪ್ಟೆಂಬರ್ 11ರಂದು ಪೂರ್ಣಗೊಳ್ಳಿಸಲಾಗುತ್ತದೆ.
ಈವರೆಗೆ, ಸೆಪ್ಟೆಂಬರ್ 17ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಮಾತ್ರ ಮೀಸಲು ದಿನವಿತ್ತು. ಆದರೆ ಕೊಲಂಬೊ ಸೇರಿದಂತೆ ಶ್ರೀಲಂಕಾದ ಹಲವೆಡೆ ನಿರಂತರವಾಗಿ ಮಳೆ ಸುರಿಯುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಎಸಿಸಿ ಈ ನಿರ್ಧಾರ ತೆಗೆದುಕೊಂಡಿದೆ.
ಎಸಿಸಿ ನಿರ್ಧಾರದಿಂದ ಹಲವು ಆಶ್ಚರ್ಯಪಟ್ಟಿದ್ದು, ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯ ಮಾತ್ರವಲ್ಲದೆ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಕೂಡ ಕೊಲಂಬೊದಲ್ಲಿ ಆಡಬೇಕಿದೆ. ಆದರೆ, ಆ ತಂಡಗಳ ಸೂಪರ್ 4 ಪಂದ್ಯಗಳಿಗೆ ಮೀಸಲು ದಿನ ನಿಗದಿಯಾಗಿಲ್ಲ.
ಕೇವಲ ಒಂದು ಪಂದ್ಯಕ್ಕಾಗಿ ಪಂದ್ಯಾವಳಿಯ ನಿಯಮ ಬದಲಿಸಲಾಗಿದ್ದು, ಈ ವೇಳೆ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗಳ ಅಭಿಪ್ರಾಯ ಅಥವಾ ಒಪ್ಪಿಗೆ ತೆಗೆದುಕೊಳ್ಳಲಾಗಿದೆಯೇ ಎಂಬ ಅನುಮಾನಗಳು ಕಾಡುತ್ತಿದ್ದವು.
ಇದು ವಿವಾದವಾಗುತ್ತಿದ್ದಂತೆಯೇ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿಗಳು ಈ ಬಗ್ಗೆ ಎಕ್ಸ್(ಟ್ವಿಟ್ಟರ್)ನಲ್ಲಿ ಸ್ಪಷ್ಟನೆ ನೀಡಿವೆ. "ಎಸಿಸಿಯ ತಾಂತ್ರಿಕ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದು ಆಟದ ಪರಿಸ್ಥಿತಿಯನ್ನು ಬದಲಾಯಿಸಿದೆ. ಸೂಪರ್-4 ಪಂದ್ಯಗಳಲ್ಲಿ ಭಾಗವಹಿಸುವ ನಾಲ್ಕು ತಂಡಗಳ ಒಮ್ಮತದ ನಂತರವೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ," ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತಿಳಿಸಿದೆ.
ಇನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಕೂಡ, ಎಲ್ಲ ತಂಡಗಳ ಒಪ್ಪಿಗೆಯ ನಂತರವೇ ಮೀಸಲು ದಿನವನ್ನು ಸೇರಿಸಲಾಗಿದೆ ಎಂದು ಬರೆದುಕೊಂಡಿದೆ.
ಇದೀಗ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿಗಳು ಸ್ಪಷ್ಟನೆ ನೀಡಿದ್ದರೂ, ಅವರೆಡು ತಂಡಗಳ ಕೋಚ್‌ಗಳು ಮಾತ್ರ ಅಸಮಾಧಾನ ಹೊರಹಾಕಿದ್ದಾರೆ.
ಶನಿವಾರ, ಸೆಪ್ಟೆಂಬರ್ 9ರಂದು ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯ ನಡೆಯಲಿದ್ದು, ಅದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎರಡೂ ತಂಡಗಳ ಕೋಚ್‌ಗಳು ಮೀಸಲು ದಿನ ನಿರ್ಧಾರದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು.
ಬಾಂಗ್ಲಾದೇಶ ತಂಡದ ಕೋಚ್ ಚಂಡಿಕಾ ಹತುರುಸಿಂಘ ಅವರು, ನಮ್ಮ ಸೂಪರ್ 4 ಪಂದ್ಯಗಳಿಗೂ ಮೀಸಲು ದಿನ ಬೇಕು ಎಂದು ಹೇಳಿದರೆ, ಶ್ರೀಲಂಕಾ ತಂಡದ ಕೋಚ್ ಕ್ರಿಸ್ ಸಿಲ್ವರ್‌ವುಡ್ ಇದು ಸಂಪೂರ್ಣ ಅನ್ಯಾಯ ಎಂದು ಹೇಳುವ ಮೂಲಕ ಅಸಮಾಧಾನ ಹೊರಹಾಕಿದರು.
ಅಲ್ಲದೆ, ಎಸಿಸಿಯ ತಾಂತ್ರಿಕ ಸಮಿತಿಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಪ್ರತಿನಿಧಿಸುವ ಅಧಿಕಾರಿಯು ಸಹ ಮೀಸಲು ದಿನ ಕಲ್ಪನೆಯನ್ನು ನಿರಾಕರಿಸಿದ್ದಾರೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ.
ಬಿಸಿಬಿ ನಿರ್ದೇಶಕ ಅಕ್ರಮ್ ಖಾನ್ ಅವರನ್ನು ಉಲ್ಲೇಖಿಸಿ, ಎಸಿಸಿ ಈ ನಿರ್ಧಾರವನ್ನು ಸ್ವಂತವಾಗಿ ತೆಗೆದುಕೊಂಡಿದೆ. ಇದರ ಬಗ್ಗೆ ನಮ್ಮೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.