ಪಾಕ್‌ಗೆ ಶಾಕ್ ನೀಡಿದ ಬಾಂಗ್ಲಾದೇಶ; ಫಾತಿಮಾ ಸನಾ ಪಡೆಗೆ ಹ್ಯಾಟ್ರಿಕ್ ಸೋಲು
ಸೌತಾಂಪ್ಟನ್; ಭರವಸೆಯ ಬೌಲರ್‌ಗಳಾದ ಸಂಜಿದಾ ಅಕ್ಟರ್ ಮೇಘಲಾ, ನಹಿದಾ ಆಖ್ತರ್ ಅವರುಗಳ ಬಿಗುವಿನ ದಾಳಿಯ ನೆರವಿನಿಂದ ಬಾಂಗ್ಲಾದೇಶ ತಂಡವು ಮಹಿಳಾ ಟಿ20 ವಿಶ್ವಕಪ್‌ನಲ್ಲಿ 23 ರನ್‌ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿತು. ಈ ಮೂಲಕ ಪಾಕಿಸ್ತಾನ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲಿನ ಕಹಿಯನ್ನು ಕಂಡಿದ್ದು, ಮುಂದಿನ ಹಂತಕ್ಕೆ ಪ್ರವೇಶಿಸುವ ಆಸೆಗೆ ಪೆಟ್ಟು ಬಿದ್ದಿದೆ. ಈ ಗೆಲುವಿನೊಂದಿಗೆ ಬಾಂಗ್ಲಾದೇಶ ಆಡಿದ 3 ಪಂದ್ಯಗಳಲ್ಲಿ 2 ಜಯ, 1 ಸೋಲು ಕಂಡಿದ್ದು, 4 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡಲು ಮುಂದಾಯಿತು. ಆದರೆ ನಾಯಕಿಯ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಟಾಪ್ ಆರ್ಡರ್ ಬ್ಯಾಟರ್‌ಗಳು ವಿಫಲರಾದರು. ಬಾಂಗ್ಲಾದೇಶದ ದಿಲಾರಾ ಅಕ್ಟರ್, ಜುವೈರಿಯಾ ಫೆರ್ಡೌಸ್, ಶರ್ಮಿನ್ ಅಖ್ತರ್ ಬೇಗನೆ ವಿಕೆಟ್ ಒಪ್ಪಿಸಿದರು. 13 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಿಗರ್ ಸುಲ್ತಾನಾ, ಸೋಭಾನ ಮೊಸ್ತರಿ ಜೋಡಿ ಕೊಂಚ ಆಧಾರವಾಯಿತು.

4ನೇ ವಿಕೆಟ್‌ಗೆ ನಿಗರ್ ಸುಲ್ತಾನಾ ಮತ್ತು ಸೋಭಾನ ಮೊಸ್ತರಿ ಜೋಡಿ 29 ಎಸೆತಗಳಲ್ಲಿ 35 ರನ್ ಕಾಣಿಕೆ ನೀಡಿತು. 22 ರನ್ ಬಾರಿಸಿದ್ದ ಸೋಭಾನ ಮೊಸ್ತರಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಮಧ್ಯಮ ಕ್ರಮಾಂಕದ ಶೋರ್ನಾ ಅಖ್ತರ್ 22 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ ಅಜೇಯ 39 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ನಾಯಕಿ ನಿಗರ್ ಸುಲ್ತಾನಾ 5 ಬೌಂಡರಿ ಸಹಿತ 36 ರನ್ ಸಿಡಿಸಿದರು. ಅಂತಿಮವಾಗಿ ಬಾಂಗ್ಲಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 123 ರನ್ ಸೇರಿಸಿತು.
ಬ್ಯಾಟರ್‌ಗಳ ವೈಫಲ್ಯ
124 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕ ಆಟಗಾರ್ತಿಯರಾದ ಮುನೀಬಾ ಅಲಿ (25 ರನ್, 30 ಎಸೆತ) ಮತ್ತು ಗುಲ್ ಫೆರೋಜಾ (23 ರನ್, 18 ಎಸೆತ) ಮೊದಲ ವಿಕೆಟ್‌ಗೆ 49 ರನ್ ಜೊತೆಯಾಟದ ಕಾಣಿಕೆ ನೀಡಿದರು. ನಂತರ ಬಂದ ಬ್ಯಾಟರ್‌ಗಳು ಬಾಂಗ್ಲಾದೇಶದ ಶಿಸ್ತುಬದ್ಧ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು. ಆಯೆಶಾ ಜಾಫರ್ (11), ನಾಯಕಿ ಫಾತಿಮಾ ಸನಾ (10) ಎರಡಂಕಿ ಮುಟ್ಟಿದರು. ಅಂತಿಮವಾಗಿ ಪಾಕಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 100 ರನ್ ಗಳಿಸಲಷ್ಟೇ ಶಕ್ತವಾಯಿತು.
ಬಾಂಗ್ಲಾದೇಶದ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ನಹಿದಾ ಅಖ್ತರ್ (18ಕ್ಕೆ 3) ಮತ್ತು ಸಂಜಿದಾ ಅಕ್ಟರ್ ಮೇಘಲಾ (21ಕ್ಕೆ 3) ತಲಾ ಮೂರು ವಿಕೆಟ್ ಪಡೆದು ಪಾಕಿಸ್ತಾನದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications