
ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರು ಐಸಿಸಿ ಪುರುಷರ ಮಾರ್ಚ್ ತಿಂಗಳ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಯುಎಇ ತಂಡದ ಆಸಿಫ್ ಖಾನ್ ಮತ್ತು ನ್ಯೂಜಿಲೆಂಡ್ ತಂಡದ ಕೇನ್ ವಿಲಿಯಮ್ಸನ್ ಅವರನ್ನು ಹಿಂದಿಕ್ಕಿ ಶಕೀಬ್ ಅಲ್ ಹಸನ್ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಾರ್ಚ್ ತಿಂಗಳ ಆಟಗಾರ ಪ್ರಶಸ್ತಿಗೆ ಮೂವರು ಕ್ರಿಕೆಟಿಗರನ್ನು ನಾಮನಿರ್ದೇಶನ ಮಾಡಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದು ತಿಂಗಳ ಅವಧಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
ಈ ಬಾರಿ ಮಾರ್ಚ್ ತಿಂಗಳ ಐಸಿಸಿ ಪುರುಷರ ತಿಂಗಳ ಆಟಗಾರ ಪ್ರಶಸ್ತಿಗೆ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್, ನ್ಯೂಜಿಲೆಂಡ್ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಮತ್ತು ಯುಎಇ ಬ್ಯಾಟ್ಸ್‌ಮನ್ ಆಸಿಫ್ ಖಾನ್ ನಾಮನಿರ್ದೇಶನಗೊಂಡಿದ್ದರು.

ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ 71 ಎಸೆತಗಳಲ್ಲಿ 75 ರನ್ ಗಳಿಸಿದರೆ, ನಂತರ ಬೌಲಿಂಗ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನಾರಾಗಿದ್ದರು. ಇನ್ನು ಶಕೀಬ್ ಅಲ್ ಹಸನ್ ಅವರು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 38 ರನ್ ಗಳಿಸಿದರು ಮತ್ತು 6.27ರ ಎಕಾನಮಿ ದರದಲ್ಲಿ ಮೂರು ವಿಕೆಟ್ ಪಡೆದರು.
ನಂತರ ಬಾಂಗ್ಲಾದೇಶ ತಂಡ ತವರಿನಲ್ಲಿ ಐರ್ಲೆಂಡ್ ವಿರುದ್ಧ 2-0 ಏಕದಿನ ಸರಣಿ ಗೆಲುವು ಮತ್ತು 2-1 ಅಂತರದ ಟಿ20 ಸರಣಿ ಗೆಲುವಿನಲ್ಲಿ ಶಕೀಬ್ ಅಲ್ ಹಸನ್ ನೆರವಾಗಿದ್ದರು. ಐರ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 93 ರನ್ ಗಳಿಸಿದರು. ಒಟ್ಟಾರೆಯಾಗಿ, ಶಕೀಬ್ ಅಲ್ ಹಸನ್ ಅವರು ಮಾರ್ಚ್‌ನಲ್ಲಿ ಆಡಿದ 12 ಪಂದ್ಯಗಳಲ್ಲಿ 353 ರನ್ ಗಳಿಸಿ 15 ವಿಕೆಟ್ ಪಡೆದಿದ್ದಾರೆ.

"ಐಸಿಸಿ ಪುರುಷರ ಮಾರ್ಚ್ ತಿಂಗಳ ಪ್ರಶಸ್ತಿ ಗೆದ್ದಿರುವುದು ನನಗೆ ಗೌರವ ತಂದಿದೆ. ನನಗೆ ಮತ ಹಾಕಿದ ಪರಿಣಿತ ಪ್ಯಾನೆಲಿಸ್ಟ್‌ಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದು ನಾನು ತುಂಬಾ ಗೌರವದ ಮನ್ನಣೆಯಾಗಿದೆ, ಏಕೆಂದರೆ ಹಲವಾರು ಅದ್ಭುತ ಕ್ರಿಕೆಟಿಗರಿಂದ ಒಂದು ತಿಂಗಳಲ್ಲಿ ಹಲವು ವಿಶೇಷ ಪ್ರದರ್ಶನಗಳು ಬಂದಿವೆ," ಎಂದು ಎಂದು ಶಕೀಬ್ ಅಲ್ ಹಸನ್ ತಿಳಿಸಿದ್ದಾರೆ.
ಶಕೀಬ್ ಅಲ್ ಹಸನ್ ಇತ್ತೀಚೆಗೆ ಐರ್ಲೆಂಡ್ ವಿರುದ್ಧ ಆಡಿದ ಏಕೈಕ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ನಾಯಕತ್ವ ವಹಿಸಿದ್ದರು. 2023ರ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ (ಐಪಿಎಲ್) ಹಿಂದೆ ಸರಿದರು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದರು. ಇದಕ್ಕೂ ಮೊದಲು ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 7000 ರನ್ ಗಳಿಸಿದ ಮತ್ತು 300 ವಿಕೆಟ್ ಪಡೆದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
ಇಂಗ್ಲೆಂಡ್ ಬ್ಯಾಟರ್ ಹ್ಯಾರಿ ಬ್ರೂಕ್ ಅವರು ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತು ವೆಸ್ಟ್ ಇಂಡೀಸ್ ಬೌಲರ್ ಗುಡಾಕೇಶ್ ಮೋಟಿ ಅವರನ್ನು ಹಿಂದಿಕ್ಕಿ ಫೆಬ್ರವರಿ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದರು.