ಭದ್ರತಾ ಕಾರಣಗಳನ್ನು ನೀಡಿ ಬಾಂಗ್ಲಾದೇಶ ಕ್ರಿಕೆಟ್ ತಂಡ ಭಾರತಕ್ಕೆ ಟಿ20 ವಿಶ್ವಕಪ್ 2026 ಪ್ರಯಾಣಿಸದಿರಲು ನಿರ್ಧರಿಸಿದೆ. ಈ ಬಗ್ಗೆ ಈಗಾಗಲೇ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಗೆ ಪತ್ರ ಬರೆದಿದ್ದು, ತಾವಾಡುವ ಪಂದ್ಯಗಳ ಸ್ಥಳಗಳನ್ನು ಬದಲಿಸುವಂತೆ ಮನವಿಯನ್ನು ಸಲ್ಲಿಸಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬಾಂಗ್ಲಾದೇಶದ ಪಂದ್ಯಗಳನ್ನು ಆಯೋಜಿಸಲು ಸಿದ್ಧರಿರುವುದಾಗಿ ಸೂಚಿಸಿದೆ.
ಬಾಂಗ್ಲಾದೇಶ ಭಾರತಕ್ಕೆ ಪ್ರವಾಸ ಮಾಡುವುದಿಲ್ಲ ಎಂದು ಐಸಿಸಿಗೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಐಸಿಸಿ ಹಾಗೂ ಬಿಸಿಬಿ ಅಧಿಕಾರಿಗಳ ನಡುವೆ ಮಾತುಕತೆಗಳು ನಡೆಯುತ್ತಿದೆ.

ಜಿಯೋ ಸೂಪರ್ ವರದಿಯ ಪ್ರಕಾರ, ಟಿ20 ವಿಶ್ವಕಪ್ 2026 ಆಯೋಜಿಸಲು ಶ್ರೀಲಂಕಾದಲ್ಲಿ ಸ್ಥಳಗಳು ಲಭ್ಯವಿಲ್ಲದೇ ಇದ್ದಲ್ಲಿ ಬಾಂಗ್ಲಾದೇಶದ ಪಂದ್ಯಗಳಿಗೆ ಪಾಕಿಸ್ತಾನ ಆತಿಥ್ಯ ವಹಿಸುವುದಾಗಿ ಔಪಚಾರಿಕವಾಗಿ ತಿಳಿಸಿದೆ. ಪಾಕ್‌ನ ಕ್ರೀಡಾಂಗಣಗಳು ಈ ಪಂದ್ಯಗಳಿಗೆ ಕಡಿಮೆ ಸಮಯದಲ್ಲಿ ಸಂಪೂರ್ಣ ಸಿದ್ಧವಾಗಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಬಾಂಗ್ಲಾದೇಶದ ಬೌಲರ್ ಮುಸ್ತಾಫಿಜುರ್ ರಹಾಮನ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಿನಿ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಖರೀದಿಸಿತ್ತು. ಇವರಿಗೆ ಕೆಕೆಆರ್ 9.2 ಕೋಟಿ ನೀಡಿ ಖರೀದಿಸಿತ್ತು. ಆದರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಿಂಸಾಚಾರವನ್ನು ಭಾರತ ತೀವ್ರವಾಗಿ ಖಂಡಿಸಿತ್ತು. ಅಲ್ಲದೆ ದೇಶದಲ್ಲಿ ಹಲವು ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಐಪಿಎಲ್‌ನಿಂದ ಬಾಂಗ್ಲಾ ಆಟಗಾರರನ್ನು ನಿಷೇಧಿಸುವಂತೆ ಒತ್ತಡವನ್ನು ಹೇರಿದವು. ಇದಾದ ಬಳಿಕ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಮುಸ್ತಾಫಿಜುರ್ ರಹಮಾನ್ ಅವರನ್ನು ಕೆಕೆಆರ್ ತಂಡದಿಂದ ಕೈ ಬಿಡುವಂತೆ ಸೂಚಿಸಿತ್ತು. ಅಲ್ಲದೆ ಬದಲಿ ಆಟಗಾರನನ್ನು ಸೇರಿಸಿಕೊಳ್ಳಲು ಅವಕಾಶ ಇರುವುದಾಗಿ ತಿಳಿಸಿತ್ತು.
ಐಪಿಎಲ್‌ನಿಂದ ಮುಸ್ತಾಫಿಜುರ್ ರಹಮಾನ್ ಅವರನ್ನು ಬ್ಯಾನ್ ಮಾಡಿದ ಬೆನ್ನಲ್ಲೆ, ಬಾಂಗ್ಲಾದೇಶ ಐಪಿಎಲ್ ಪಂದ್ಯಗಳ ನೇರ ಪ್ರಸಾರಕ್ಕೆ ಬ್ರೇಕ್ ಹಾಕಿತ್ತು. ಅಲ್ಲದೆ ಭದ್ರತಾ ಕಾರಣಗಳನ್ನು ನೀಡಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಪ್ರಯಾಣ ಬೆಳೆಸದಿರಲು ನಿರ್ಧರಿಸಿತ್ತು.
ಐಸಿಸಿ ಬಾಂಗ್ಲಾದೇಶ ಮಾಡಿಕೊಂಡ ಮನವಿಯನ್ನು ತಿರಸ್ಕರಿಸಿದೆ. ಅಲ್ಲದೆ ಈಗಾಗಲೇ ನಿಗದಿ ಪಡಿಸಲಾದ ವೇಳಾಪಟ್ಟಿಯಂತೆ ಪಂದ್ಯಗಳನ್ನು ನಡೆಸಲು ಉದ್ದೇಶಿಸಿದೆ. ಬಾಂಗ್ಲಾ ಭಾರತದಲ್ಲಿ ಪಂದ್ಯಗಳನ್ನು ಆಡದೇ ಇದ್ದರೆ ಅಂಕಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಭಾರತ ಹಾಗೂ ಶ್ರೀಲಂಕಾ ಟಿ20 ವಿಶ್ವಕಪ್ 2026 ಜಂಟಿಯಾಗಿ ಆಯೋಜಿಸುತ್ತಿವೆ. ಈ ವೇಳೆ ಬಾಂಗ್ಲಾದೇಶ ತನ್ನ ಎಲ್ಲ ಪಂದ್ಯಗಳನ್ನು ಭಾರತದಲ್ಲಿ ಆಡಬೇಕಿದೆ. ಮೂರು ಪಂದ್ಯಗಳನ್ನು ಕೋಲ್ಕತ್ತಾದಲ್ಲಿ ಹಾಗೂ ಒಂದು ಪಂದ್ಯವನ್ನು ಮುಂಬೈನಲ್ಲಿ ಆಡಬೇಕಿದೆ.