ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಗೆದ್ದು ಇತಿಹಾಸ ಸೃಷ್ಟಿಸಿದೆ. ಪಾಕಿಸ್ತಾನ ನೀಡಿದ ಕೇವಲ 30 ರನ್‌ಗಳ ಗುರಿಯನ್ನು ಬಾಂಗ್ಲಾದೇಶ ಸುಲಭವಾಗಿ ಬೆನ್ನಟ್ಟಿ 10 ವಿಕೆಟ್‌ಗಳ ಐತಿಹಾಸಿಕ ಗೆಲುವು ದಾಖಲಿಸಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶದ ಮೊದಲ ಜಯವಾಗಿದೆ. ಈ ಸೋಲಿನೊಂದಿಗೆ ತವರಿನಲ್ಲಿ ಪಾಕಿಸ್ತಾನದ ನಿರಾಶಾದಾಯಕ ಪ್ರದರ್ಶನ ಮುಂದುವರಿದಿದೆ.

ಟೆಸ್ಟ್‌ನಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ತಂಡವನ್ನು ಬಾಂಗ್ಲಾದೇಶ ಸೋಲಿಸಿದೆ. ಇದಕ್ಕೂ ಮುನ್ನ ಉಭಯ ತಂಡಗಳ ನಡುವೆ 14 ಟೆಸ್ಟ್ ಪಂದ್ಯಗಳು ನಡೆದಿದ್ದು, ಇದರಲ್ಲಿ ಪಾಕಿಸ್ತಾನ 12 ಬಾರಿ ಗೆದ್ದಿದ್ದರೆ, ಒಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು.
ಈ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸುವುದರೊಂದಿಗೆ, ಬಾಂಗ್ಲಾದೇಶ ತನ್ನ ತವರು ನೆಲದಲ್ಲಿ ಆತಿಥೇಯ ತಂಡವನ್ನು ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಸೋಲಿಸಿದ ವಿಶ್ವ ದಾಖಲೆ ಸೃಷ್ಟಿಸಿದೆ. ಇದಕ್ಕೂ ಮುನ್ನ ತವರಿನಲ್ಲಿ ನಡೆದ ಟೆಸ್ಟ್‌ನಲ್ಲಿ ಪಾಕಿಸ್ತಾನವನ್ನು 10 ವಿಕೆಟ್‌ಗಳಿಂದ ಸೋಲಿಸಲು ಯಾವ ತಂಡವೂ ಯಶಸ್ವಿಯಾಗಿರಲಿಲ್ಲ.
ಈ ಪಂದ್ಯದಲ್ಲಿ ಆತಿಥೇಯ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಬಾಂಗ್ಲಾ ಆಹ್ವಾನಿಸಿತು. ಸೌದ್ ಶಕೀಲ್ (141) ಮತ್ತು ಮೊಹಮ್ಮದ್ ರಿಜ್ವಾನ್ (ಅಜೇಯ 171) ಅವರ ಜೊತೆಯಾಟದಿಂದಾಗಿ ಪಾಕಿಸ್ತಾನ 6 ವಿಕೆಟ್ ನಷ್ಟಕ್ಕೆ 448 ರನ್ ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಬಾಂಗ್ಲಾದೇಶ ಪರ ಶೋರಿಫುಲ್ ಇಸ್ಲಾಂ ಮತ್ತು ಹಸನ್ ಮಹಮೂದ್ ತಲಾ 2 ವಿಕೆಟ್ ಕಬಳಿಸಿದರೆ, ಮೆಹದಿ ಹಸನ್ ಮಿರಾಜ್ ಮತ್ತು ಶಕೀಬ್ ಅಲ್ ಹಸನ್ ತಲಾ ಒಂದೊಂದು ವಿಕೆಟ್ ಪಡೆದರು.
ಬಾಂಗ್ಲಾದೇಶದ ಪರವಾಗಿ ಅನುಭವಿ ವಿಕೆಟ್‌ಕೀಪರ್- ಬ್ಯಾಟರ್ ಮುಶ್ಫಿಕರ್ ರಹೀಮ್ (191) ಮತ್ತು ಆಲ್ ರೌಂಡರ್ ಮೆಹದಿ ಹಸನ್ ಮಿರಾಜ್ (77) ಅಮೋಘ ಪ್ರದರ್ಶನ ನೀಡಿದರು. ಪಾಕ್ ಬೌಲರ್‌ಗಳ ದಾಳಿಯನ್ನು ಹಿಮ್ಮೆಟ್ಟಿ ಬ್ಯಾಟಿಂಗ್ ಮಾಡಿದರು. ಅಂತಿಮವಾಗಿ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ ಒಟ್ಟು 565 ರನ್ ಗಳಿಸಿ ಆಲೌಟ್ ಆಯಿತು.
ಬಾಂಗ್ಲಾದೇಶ ಪರ ಲಿಟನ್ ದಾಸ್, ಮತ್ತು ಮೊಮಿನುಲ್ ಹಕ್ ಅರ್ಧಶತಕ ಗಳಿಸಿದರೆ, ಪಾಕಿಸ್ತಾನ ಪರ ನಸೀಮ್ ಶಾ 3 ವಿಕೆಟ್ ಪಡೆದರು. ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 117 ರನ್‌ಗಳ ಮುನ್ನಡೆ ಸಾಧಿಸಿತ್ತು. ಪಾಕಿಸ್ತಾನ, ಎರಡನೇ ಇನ್ನಿಂಗ್ಸ್‌ನಲ್ಲಿ 146 ರನ್‌ಗಳಿಗೆ ಆಲೌಟ್ ಆಯಿತು. ಬಾಂಗ್ಲಾದೇಶ ಪರ ಮೆಹದಿ ಹಸನ್ ಮಿರಾಜ್ ನಾಲ್ಕು ವಿಕೆಟ್ ಪಡೆದರು.
ಪಾಕಿಸ್ತಾನ ತಂಡ ಬಾಂಗ್ಲಾದೇಶಕ್ಕೆ 30 ರನ್ ಟಾರ್ಗೆಟ್ ನೀಡಿತ್ತು. ಪ್ರವಾಸಿ ಬಾಂಗ್ಲಾ 30 ರನ್‌ಗಳ ಗುರಿಯನ್ನು ಯಾವುದೇ ವಿಕೆಟ್ ನಷ್ಟವಿಲ್ಲದೆ ಸುಲಭವಾಗಿ ಸಾಧಿಸುವ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.