
ಬಾಂಗ್ಲಾದೇಶದ ಸ್ಟಾರ್ ಆಲ್‌ರೌಂಡರ್ ಶಕೀಬ್ ಅಲ್ ಹಸನ್‌ಗೆ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (ಬಿಸಿಬಿ) ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿಶ್ರಾಂತಿ ನೀಡಿದೆ. ಏಪ್ರಿಲ್ 30ರವರೆಗೆ ಶಕೀಬ್ ಅಲ್ ಹಸನ್ ಯಾವುದೇ ಅಂತರಾಷ್ಟ್ರೀಯ ಪಂದ್ಯವನ್ನಾಡದಂತೆ ವಿಶ್ರಾಂತಿ ಘೋಷಿಸಿದೆ.
ಈ ಮೂಲಕ ಶಕೀಬ್ ಮಾರ್ಚ್ 12ರಿಂದ ಏಪ್ರಿಲ್ 8ರವರೆಗೆ ನಡೆಯಲಿರುವ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿಯಲಿದ್ದಾರೆ. ಏಕದಿನ ಸ್ಕ್ವಾಡ್ ಜೊತೆಗೆ ಶಕೀಬ್ ಅಲ್ ಹಸನ್ ಪ್ರಯಾಣಿಸಬಹುದು ಎಂದು ಸುದ್ದಿಯಾಗಿತ್ತು. ಆದ್ರೀಗ ಶಕೀಬ್‌ಗೆ ವಿಶ್ರಾಂತಿ ನೀಡಿದರ ಪರಿಣಾಮ ಆಫ್ರಿಕಾ ವಿರುದ್ಧ ಸರಣಿ ಮಿಸ್ ಆಗಲಿದ್ದಾರೆ.
34 ವರ್ಷದ ಶಕೀಬ್ ಅಲ್ ಹಸನ್ ಈ ಹಿಂದೆ ದೈಹಿಕ ಮತ್ತು ಮಾನಸಿಕ ಒತ್ತಡದ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ವಿಶ್ರಾಂತಿ ಬಯಸಿದ್ದರು. ಇದರ ಜೊತೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಅನ್ನು ಆಡಲು ದೀರ್ಘಾವದಿಯ ಯೋಜನೆ ಅವಶ್ಯಕ ಎಂದಿದ್ದರು.
ಇದಕ್ಕೆ ಉದಾಹರಣೆಯಂತೆ ಕಳೆದ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಲ್ಲಿ ಶಕೀಬ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಮೂರು ಏಕದಿನ ಪಂದ್ಯ ಮತ್ತು ಎರಡು ಟಿ20 ಪಂದ್ಯಗಳಲ್ಲಿ ಶಕೀಬ್ ಅಲ್ ಹಸನ್ ಗಳಿಸಿದ್ದು ಕೇವಲ 74 ರನ್ ಹಾಗೂ 7 ವಿಕೆಟ್‌ಗಳು.
ಇತ್ತೀಚಿನ ಅಫ್ಘಾನಿಸ್ತಾನ ವಿರುದ್ಧ ಸರಣಿಯಲ್ಲಿ ಬಾಂಗ್ಲಾದೇಶದ ಪರ ಕೇವಲ ಬಸ್‌ನಲ್ಲಿ ''ಪ್ರಯಾಣಿಕನಾಗಿ'' ಸಾಗುತ್ತಿರುವ ಆಟಗಾರನಂತೆ ಭಾಸವಾಗುತ್ತಿದೆ ಎಂದು ಶಕೀಬ್ ಹೇಳಿದ್ದರು. ಜೊತೆಗೆ ಯಾರಾದರೂ ಯುವ ಆಟಗಾರರಿಗೆ ಸಿಗಬೇಕಿದ್ದ ಅವಕಾಶದಲ್ಲಿ ನಾನು ಆಡುವುದು ಸರಿಯಲ್ಲ ಎಂದು ಭಾವಿಸಿದ್ದರು.
"ನಾನು ಸಮಯ ಅಥವಾ ಇನ್ನೊಬ್ಬರ ಸ್ಥಳವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ. ಪ್ರಯಾಣಿಕನಾಗಿ ಈ ರೀತಿ ಆಡುವುದು ನನ್ನ ತಂಡದ ಸಹ ಆಟಗಾರರಿಗೆ ಮತ್ತು ದೇಶಕ್ಕೆ ದ್ರೋಹ ಅಥವಾ ಮೋಸ ಮಾಡಿದಂತಾಗುತ್ತದೆ" ಎಂದು ಶಕೀಬ್ ಈ ಹಿಂದೆ ESPNCricinfo ಉಲ್ಲೇಖಿಸಿದಂತೆ ಹೇಳಿದ್ದಾರೆ.
ಶಕೀಬ್ ಅಲ್ ಹಸನ್, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿ ಎರಡರಲ್ಲೂ ಕಾಣಿಸಿಕೊಳ್ಳಬೇಕಿತ್ತು. ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ಪ್ರಕಾರ, ಹಿರಿಯ ಆಟಗಾರನು ಇತ್ತೀಚೆಗೆ ಟೆಸ್ಟ್ ಸರಣಿಗೆ ತನ್ನ ಲಭ್ಯತೆಯನ್ನು ದೃಢಪಡಿಸಿದ್ದರು. ಆದ್ರೆ ಈ ಸರಣಿಯಲ್ಲಿ ಕಾಣಿಸಿಕೊಳ್ಳಲು ಬಯಸುವುದಿಲ್ಲ ಎಂದು ಆರಂಭದಲ್ಲಿ ಮಂಡಳಿಗೆ ತಿಳಿಸಿದ್ದರು.