ಮಂಗಳವಾರ, ಏಪ್ರಿಲ್ 11ರಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2023-24ರ ಭಾರತದ ದೇಶೀಯ ಕ್ರಿಕೆಟ್ ಋತುವಿನ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಋತುವಿನಲ್ಲಿ ಜೂನ್ 2023ರ ಕೊನೆಯ ವಾರ ಮತ್ತು ಮಾರ್ಚ್ 2024ರ ನಡುವೆ ಒಟ್ಟು 1846 ಪಂದ್ಯಗಳನ್ನು ಆಡಲಾಗುತ್ತದೆ.
ಪೂರ್ಣ ಪ್ರಮಾಣದ ದೇಶೀಯ ಋತುವು ದುಲೀಪ್ ಟ್ರೋಫಿಯೊಂದಿಗೆ ಚಾಲನೆ ಸಿಗಲಿದ್ದು, ದುಲೀಪ್ ಟ್ರೋಫಿ ಪಂದ್ಯಾವಳಿಯನ್ನು 2023ರ ಜೂನ್ 28ರಿಂದ 2023ರ ಜುಲೈ 16ರವರೆಗೆ ಆಡಲಾಗುತ್ತದೆ. ಇದರ ನಂತರ ಪ್ರೊ. ದೇವಧರ್ ಟ್ರೋಫಿಯು ಜುಲೈ 24, 2023ರಿಂದ ಆಗಸ್ಟ್ 3, 2023ರವರೆಗೆ ಆಡಲಾಗುತ್ತದೆ.

ದುಲೀಪ್ ಟ್ರೋಫಿ ಮತ್ತು ದೇವಧರ್ ಟ್ರೋಫಿ ಈ ಎರಡೂ ಪಂದ್ಯಾವಳಿಗಳನ್ನು ಮಧ್ಯ, ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಮತ್ತು ಈಶಾನ್ಯ ಸೇರಿ ಆರು ವಲಯಗಳಲ್ಲಿ ಆಡಲಾಗುತ್ತದೆ. 2023ರ ಅಕ್ಟೋಬರ್ 1ರಿಂದ ಪ್ರಾರಂಭವಾಗುವ ಇರಾನಿ ಕಪ್‌ನಲ್ಲಿ ಸೌರಾಷ್ಟ್ರ ತಂಡ ಶೇಷ ಭಾರತ ತಂಡವನ್ನು ಎದುರಿಸಲಿದೆ.
ಈ ಮೂರು ಪಂದ್ಯಾವಳಿಗಳ ನಂತರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಗಳು ನಡೆಯಲಿವೆ. ಅಕ್ಟೋಬರ್ 16, 2023ರಿಂದ ನವೆಂಬರ್ 06, 2023ರವರೆಗೆ ಮುಷ್ತಾಕ್ ಅಲಿ ಟ್ರೋಫಿ ನಡೆಯಲಿದ್ದರೆ, ಇನ್ನು ವಿಜಯ್ ಹಜಾರೆ ಟ್ರೋಫಿ ಟೂರ್ನಿ ನವೆಂಬರ್ 23, 2023ರಿಂದ ಡಿಸೆಂಬರ್ 15, 2023ರ ಅವಧಿಯಲ್ಲಿ ಆಡಲಾಗುತ್ತದೆ.
ಎರಡೂ ವೈಟ್-ಬಾಲ್ ಪಂದ್ಯಾವಳಿಗಳು 38 ತಂಡಗಳಿಗೆ ಸಾಕ್ಷಿಯಾಗಲಿದ್ದು, 7 ತಂಡಗಳ ಎರಡು ಗುಂಪುಗಳು ಮತ್ತು 8 ತಂಡಗಳ ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ.

ಇನ್ನು ಕ್ರಿಕೆಟ್ ಜಗತ್ತಿನ ಪ್ರಮುಖ ದೇಶೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಒಂದಾದ ರಣಜಿ ಟ್ರೋಫಿ ಪಂದ್ಯಾವಳಿಯು ಜನವರಿ 05, 2024ರಂದು ಪ್ರಾರಂಭವಾಗಿ ಮಾರ್ಚ್ 14, 2024ರವರೆಗೆ ನಡೆಯಲಿದೆ. 38 ತಂಡಗಳನ್ನು ಐದು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಅಲ್ಲಿ ನಾಲ್ಕು ಎಲೈಟ್ ಗುಂಪುಗಳಲ್ಲಿ ತಲಾ ಎಂಟು ತಂಡಗಳು ಇರಲಿದ್ದು ಮತ್ತು ಪ್ಲೇಟ್ ಗ್ರೂಪ್ ಆರು ತಂಡಗಳನ್ನು ಒಳಗೊಂಡಿರುತ್ತದೆ.
ಎಲೈಟ್ ಗುಂಪಿನಲ್ಲಿರುವ ತಂಡಗಳು ತಲಾ ಏಳು ಲೀಗ್ ಪಂದ್ಯಗಳನ್ನು ಆಡುತ್ತವೆ. ಪ್ರತಿ ಗುಂಪಿನಿಂದ ಎರಡು ತಂಡಗಳು ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸುತ್ತವೆ. ಪ್ಲೇಟ್ ಗ್ರೂಪ್‌ನಲ್ಲಿರುವ ಆರು ತಂಡಗಳು ತಲಾ ಐದು ಲೀಗ್ ಹಂತದ ಪಂದ್ಯಗಳನ್ನು ಆಡಲಿದ್ದು, ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ.

ಮಹಿಳೆಯರ ದೇಶೀಯ ಕ್ರಿಕೆಟ್ ಋತುವು ಸೀನಿಯರ್ ಮಹಿಳಾ ಟಿ20 ಟ್ರೋಫಿಯೊಂದಿಗೆ ಪ್ರಾರಂಭವಾಗುತ್ತದೆ. ಇದು ಅಕ್ಟೋಬರ್ 19, 2023ರಿಂದ ನವೆಂಬರ್ 09, 2023ರವರೆಗೆ ನಡೆಯಲಿದೆ.
ಇದರ ನಂತರ ಹಿರಿಯ ಮಹಿಳಾ ಅಂತರ ವಲಯ ಟ್ರೋಫಿಯನ್ನು ನವೆಂಬರ್ 24, 2023ರಿಂದ ಡಿಸೆಂಬರ್ 04, 2023ರವರೆಗೆ ಆಡಲಾಗುತ್ತದೆ. 2024ರ ಸೀನಿಯರ್ ಮಹಿಳಾ ಏಕದಿನ ಟ್ರೋಫಿಯೊಂದಿಗೆ ಪ್ರಾರಂಭವಾಗಲಿದ್ದು, ಇದು ಜನವರಿ 4, 2024ರಂದು ಪ್ರಾರಂಭವಾಗುತ್ತದೆ ಮತ್ತು ಅಂತಿಮ ಪಂದ್ಯವನ್ನು ಜನವರಿ 26, 2024ರಂದು ಆಡಲಾಗುತ್ತದೆ.