ಮುಂದಿನ ವರ್ಷದ ಆರಂಭದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಈ ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸಲಿದೆ. ಈ ಟೂರ್ನಿಯು ಫೆಬ್ರವರಿ 19, 2025 ರಿಂದ ಮಾರ್ಚ್ 9 ರವರೆಗೆ ನಡೆಯಲಿದೆ. ಈ ಟೂರ್ನಿಗೆ ಇನ್ನು ವೇಳಾಪಟ್ಟಿ ಘೋಷಣೆ ಆಗದೇ ಇದ್ದರೂ, ಪಾಕ್‌ನಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಭಾರತ ತಂಡ, ಈ ಟೂರ್ನಿಯಲ್ಲಿ ಆಡಲು ಪಾಕ್‌ಗೆ ಪ್ರವಾಸ ಬೆಳೆಸುತ್ತದೋ ಇಲ್ಲವೋ ಎಂಬ ಬಗ್ಗೆ ಬಿಸಿಸಿಐ ಯಾವುದೇ ಸ್ಪಷ್ಟತೆ ನೀಡಿರಲಿಲ್ಲ. ಆದರೆ ಈಗ ಬಿಸಿಸಿಐ ಈ ಬಗ್ಗೆ ತನ್ನ ನಿಲುವನ್ನು ಘೋಷಿಸಿದೆ. ಈ ವೇಳೆ ಬಿಸಿಸಿಐ ಸರ್ಕಾರದಿಂದ ಪಡೆದ ಮಾರ್ಗ ಸೂಚಿಗಳನ್ನು ಸಹ ಉಲ್ಲೇಖಿಸಿದೆ.
ಚಾಂಪಿಯನ್ಸ್ ಟ್ರೋಫಿಯನ್ನು ಆಡಲು ಟೀಮ್ ಇಂಡಿಯಾ ಪಾಕಿಸ್ತಾನ ಪ್ರವಾಸ ಬೆಳೆಸುವುದಿಲ್ಲ ಎಂಬುದು ತಿಳಿದು ಬಂದಿದೆ. ಪಾಕಿಸ್ತಾನದ ಕ್ವೆಟ್ಟಾದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಇದರಲ್ಲಿ ಸಾಕಷ್ಟು ಜನ ಪ್ರಾಣವನ್ನು ಕಳೆದುಕೊಂಡಿದ್ದಾರೆ. ವರದಿಗಳನ್ನು ನಂಬುವದಾದರೆ ಭಾರತ, ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದೆ ಎಂದು ತಿಳಿದು ಬಂದಿದೆ. ಭಾರತ ಸರ್ಕಾರ, ಪಾಕ್‌ಗೆ ತಂಡವನ್ನು ಕಳುಹಿಸಿದಂತೆ ಸಲಹೆ ನೀಡಿದೆ ಎಂದು ತಿಳಿದು ಬಂದಿದೆ.

ಈಗ ಈ ಟೂರ್ನಿಯನ್ನು ಹೈಬ್ರೀಡ್ ಮಾದರಿಯಲ್ಲಿ ನಡೆಸುವ ಬಗ್ಗೆ ಐಸಿಸಿ ಚಿಂತನೆಯನ್ನು ನಡೆಸುತ್ತಿದೆ. 2023ರ ಏಷ್ಯಾ ಕಪ್ ಆಡಿದ ರೀತಿಯಲ್ಲೇ ಈ ಟೂರ್ನಿಯನ್ನು ಆಯೋಜಿಸುವ ಸಾಧ್ಯತೆ ಇದೆ. ಕಳೆದ ಬಾರಿಯ ಏಷ್ಯಾಕಪ್ ಪಂದ್ಯಗಳನ್ನು ಭಾರತ ಶ್ರೀಲಂಕಾದಲ್ಲಿ ಆಡಿತ್ತು. ಈ ಬಾರಿಯೂ ಇದೇ ರೀತಿ ತಟಸ್ಥ ಸ್ಥಳದಲ್ಲಿ ಪಂದ್ಯಗಳನ್ನು ನಡೆಸಲು ಐಸಿಸಿ ಚಿಂತನೆ ನಡೆಸಬಹುದು. ಈ ಮೊದಲು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ, ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದರು.
ಭಾರತ, ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂಬ ವರದಿಗಳು ಹೊರ ಬರುತ್ತಿದ್ದಂತೆ ಈಗ ಈ ಟೂರ್ನಿಯನ್ನು ಹೈಬ್ರಿಡ್‌ನಲ್ಲಿ ಆಡಿಸಬಹುದು. ಶ್ರೀಲಂಕಾ ಹಾಗೂ ಯುಎಇನಲ್ಲಿ ಸರಣಿಯನ್ನು ನಡೆಸಬಹುದಾಗಿದೆ. ಈ ಬಗ್ಗೆ ಐಸಿಸಿ ಸಹ ಚಿಂತನೆ ನಡೆಸಲಿದೆ. ಈ ಪರಿಸ್ಥಿತಿಯಲ್ಲಿ, ಯುಎಇ ಉತ್ತಮ ಆಯ್ಕೆಯಾಗಿದೆ ಏಕೆಂದರೆ ಅದು ಎರಡೂ ದೇಶಗಳಿಗೆ ಹತ್ತಿರದಲ್ಲಿದೆ. 100 ದಿನಗಳು ಉಳಿದಿರುವಾಗ ಐಸಿಸಿ ತನ್ನ ಪಂದ್ಯಾವಳಿಯ ವೇಳಾಪಟ್ಟಿಯನ್ನು ಪ್ರಕಟಿಸುತ್ತದೆ. ಆದರೆ ಈಗಿನ ಪರಿಸ್ಥಿತಿಯನ್ನು ನೋಡಿದರೆ, ನವೆಂಬರ್ 11 ರಂದು ವೇಳಾಪಟ್ಟಿ ಪ್ರಕಟಿಸುವುದು ಕಷ್ಟ ಎಂದು ಹೇಳಲಾಗುತ್ತಿದೆ.

ಚಾಂಪಿಯನ್ಸ್ ಟ್ರೋಫಿ 2025 ಅನ್ನು ಪಾಕಿಸ್ತಾನವು ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಆಯೋಜಿಸಲಿದೆ. ಪಂದ್ಯಗಳನ್ನು ಪಾಕಿಸ್ತಾನದ ಮೂರು ಸ್ಥಳಗಳಾದ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ನಡೆಸಲು ಸಿದ್ಧತೆಗಳು ನಡೆದಿವೆ. ಇದೇ ವೇಳೆ ಐಸಿಸಿ ತಂಡವೊಂದು ಪಾಕಿಸ್ತಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ವೇಳಾಪಟ್ಟಿ ಬಿಡುಗಡೆ ಮಾಡಬೇಕಿತ್ತು. ಸದ್ಯ ಭಾರತ ಕೈ ಗೊಂಡಿರುವ ನಿರ್ಧಾರ ಐಸಿಸಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನುಂಗಲಾರದ ತುತ್ತಾಗಿದೆ.