
ಗುರುವಾರ, ಫೆಬ್ರವರಿ 9ರಂದು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಮೊದಲ ಪಂದ್ಯಕ್ಕೆ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ತಂಡ ಸಜ್ಜಾಗಿದೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡು ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ. ಇದೀಗ ಭಾರತ ತಂಡದ ಕೋಚ್ ಆಗಿ ರಾಹುಲ್ ದ್ರಾವಿಡ್ ಪ್ರದರ್ಶನದ ಬಗ್ಗೆ ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದಾರೆ.
ರಾಹುಲ್ ದ್ರಾವಿಡ್ ಅವರು ತಮ್ಮ ಮಾಜಿ ಸಹ ಆಟಗಾರ ಮತ್ತು ಭಾರತ ತಂಡದ ನಾಯಕರಾಗಿದ್ದ ಸೌರವ್ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾಗಿದ್ದಾಗ ನವೆಂಬರ್ 2021ರಲ್ಲಿ ಮುಖ್ಯ ಕೋಚ್ ಆಗಿ ನೇಮಕಗೊಂಡರು.
ರಾಹುಲ್ ದ್ರಾವಿಡ್ ಭಾರತದ ತಂಡದ ಕೋಚ್ ಜವಾಬ್ದಾರಿ ವಹಿಸಿಕೊಂಡಾಗ ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿದ್ದವು. ಏಕೆಂದರೆ, ಅದಕ್ಕೂ ಮುನ್ನ ಅವರು ಎನ್‌ಸಿಎ ಮುಖ್ಯಸ್ಥ ಮತ್ತು ಭಾರತ ಎ ತಂಡದ ಯಶಸ್ವಿ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.
ಆದರೆ, ಭಾರತ ಹಿರಿಯರ ತಂಡ ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತದಲ್ಲಿ ಸೋತು ಹಿಂದಿರುಗಿತು. ಒಂಬತ್ತು ವರ್ಷಗಳ ನಂತರದ ಐಸಿಸಿ ಟ್ರೋಫಿ ಕನಸು ನನಸಾಗಲಿಲ್ಲ.

ಇದೀಗ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಪ್ರದರ್ಶನದ ಬಗ್ಗೆ ಮಾತನಾಡಿದ್ದಾರೆ. "ಟಿ 20 ವಿಶ್ವಕಪ್ ಹೊರತುಪಡಿಸಿ ದ್ರಾವಿಡ್ ಉತ್ತಮ ಪ್ರದರ್ಶನ ನೀಡಿದ್ದಾರೆ. ತಂಡವು ಸೆಮಿಫೈನಲ್‌ಗೆ ಹೋಗಿದೆ ಮತ್ತು ಫೈನಲ್‌ನಿಂದ ಕೇವಲ ಒಂದು ಪಂದ್ಯದ ಅಂತರದಲ್ಲಿತ್ತು. ಇನ್ನು ಒಂದು ವರ್ಷವಾಗಿದೆ, ರಾಹುಲ್ ದ್ರಾವಿಡ್ ಅವರಿಗೆ ಸಮಯ ನೀಡಬೇಕು," ಎಂದರು.
ತಂಡದ ಕೋಚ್‌ಗೆ ಒಂದು ವರ್ಷ ತುಂಬಾ ಕಡಿಮೆ ಸಮಯ. ಶುಭ್ಮನ್ ಗಿಲ್, ಇಶಾನ್ ಕಿಶನ್ ಉತ್ತಮ ಬ್ಯಾಟ್ಸ್‌ಮನ್‌ಗಳಾಗಿ ಹೊರಹೊಮ್ಮಿರುವುದನ್ನು ನೋಡಬಹುದು ಮತ್ತು ಚುಟುಕು ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಸೂರ್ಯಕುಮಾರ್ ಯಾದವ್ ಇದ್ದಾರೆ. ಹೀಗಾಗಿ ರಾಹುಲ್ ದ್ರಾವಿಡ್‌ಗೆ ಸ್ವಲ್ಪ ಸಮಯ ಕೊಡಬೇಕು,'' ಎಂದು ಸೌರವ್ ಗಂಗೂಲಿ ಸ್ಪೋರ್ಟ್‌ಸ್ಟಾರ್ ಜೊತೆ ಮಾತನಾಡುವಾಗ ಹೇಳಿದರು.
ಆಟವು ಕೆಲವೇ ವರ್ಷಗಳಲ್ಲಿ ಕ್ರಿಕೆಟ್ ಹೇಗೆ ವಿಕಸನಗೊಂಡಿತು ಎಂಬುದರ ಕುರಿತು ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದು, "ವರ್ಷಗಳಿಂದ ಕ್ರಿಕೆಟ್ ಮಹತ್ತರವಾಗಿ ಬದಲಾಗಿದೆ. ಕ್ರಿಕೆಟ್ ಮಾತ್ರವಲ್ಲದೆ, ಪ್ರತಿಯೊಂದು ಕ್ರೀಡೆಯೂ ಬದಲಾಗುತ್ತಿದೆ. ಕ್ರಿಕೆಟ್ ಆರ್ಥಿಕವಾಗಿ ಸದೃಢವಾಗಿದೆ. ಗುಣಮಟ್ಟ ಕೂಡ ಸುಧಾರಿಸಿದೆ. ಗುಣಮಟ್ಟ ಮತ್ತು ಹಣಕಾಸು ಒಟ್ಟಿಗೆ ಹೋಗಬಹುದೆಂದು ನನಗೆ ತಿಳಿದಿರಲಿಲ್ಲ," ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅಭಿಪ್ರಾಯಪಟ್ಟರು.
"ಭಾರತ ತಂಡ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ನಂತಹ ದೇಶಗಳಿಗೆ ವರ್ಷಕ್ಕೆ ಹಲವು ಬಾರಿ ಹೋಗುತ್ತಿದೆ. ಆಸ್ಟ್ರೇಲಿಯಾ ತಂಡವನ್ನೇ ತೆಗೆದುಕೊಳ್ಳಿ, ಅವರು ಬಾರ್ಡರ್-ಗವಾಸ್ಕರ್ ಟ್ರೋಫಿಗಿಂತ ಮೊದಲು ಅಭ್ಯಾಸ ಪಂದ್ಯವನ್ನೂ ಆಡುತ್ತಿಲ್ಲ. ಏಕೆಂದರೆ ಅವರಿಗೆ ಭಾರತದ ಪಿಚ್‌ಗಳ ಪರಿಚಯವಿದೆ. ನಮ್ಮ ಕಾಲದಲ್ಲಿ 7-8 ವರ್ಷಗಳಿಗೊಮ್ಮೆ ಆಸ್ಟ್ರೇಲಿಯಾಕ್ಕೆ ಹೋಗುತ್ತಿದ್ದೆವು," ಎಂದು ಸೌರವ್ ಗಂಗೂಲಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.