ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಇತ್ತೀಚೆಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನರ್ವಸತಿಗೆ ಒಳಗಾಗಿರುವ ಐವರು ಆಟಗಾರರ ವೈದ್ಯಕೀಯ ಮತ್ತು ಫಿಟ್‌ನೆಸ್ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ.
ಭಾರತದ ಸ್ಟಾರ್ ಆಟಗಾರರಾದ ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಪ್ರಸಿದ್ಧ್ ಕೃಷ್ಣ ಮತ್ತು ರಿಷಭ್ ಪಂತ್ ಅವರ ಚೇತರಿಕೆಯ ಪ್ರಗತಿಯ ಅಪ್ಡೇಟ್ ನೀಡಿದೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈ ಆಟಗಾರರು ಮೈದಾನಕ್ಕೆ ಮರಳುವುದನ್ನು ಕುತೂಹಲದಿಂದ ನೋಡುತ್ತಿರುವಾಗ, ಬಿಸಿಸಿಐ ವೈದ್ಯಕೀಯ ತಂಡವು ಅವರ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದೆ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳುವ ಭರವಸೆ ನೀಡಿದೆ.

ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಅವರು ಅತ್ಯುತ್ತಮ ವೇಗದ ಬೌಲರ್‌ಗಳಾಗಿದ್ದು, ತಮ್ಮ ಪುನರ್ವಸತಿ ಪ್ರಕ್ರಿಯೆಯ ಅಂತ್ಯವನ್ನು ತಲುಪಿದ್ದಾರೆ. ಇತ್ತೀಚಿನ ವರದಿ ಪ್ರಕಾರ, ಇವರು ನೆಟ್ಸ್‌ನಲ್ಲಿ ಸಂಪೂರ್ಣ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ತಮ್ಮ ಬಲವಾದ ಪುನರಾಗಮನ ಮಾಡುವಲ್ಲಿ ತಮ್ಮ ಸಮರ್ಪಣೆ ಪ್ರದರ್ಶಿಸಿದ್ದಾರೆ.
ಜಸ್ಪ್ರೀತ್ ಬುಮ್ರಾ ಹಾಗೂ ಪ್ರಸಿದ್ಧ್ ಕೃಷ್ಣ ಅವರ ಫಿಟ್‌ನೆಸ್ ಮಟ್ಟವನ್ನು ಮತ್ತಷ್ಟು ಅಳೆಯಲು, ಇಬ್ಬರೂ ಎನ್‌ಸಿಎ ಆಯೋಜಿಸುವ ಅಭ್ಯಾಸ ಪಂದ್ಯಗಳಲ್ಲಿ ಭಾಗವಹಿಸುತ್ತಾರೆ. ಬಿಸಿಸಿಐ ವೈದ್ಯಕೀಯ ತಂಡವು ಅವರ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಭ್ಯಾಸ ಪಂದ್ಯಗಳಲ್ಲಿ ಅವರ ಪ್ರದರ್ಶನವನ್ನು ಮೌಲ್ಯಮಾಪನ ಮಾಡಿದ ನಂತರ, ಅವರ ಸಿದ್ಧತೆಯ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ.

ಭಾರತದ ಬ್ಯಾಟಿಂಗ್ ವಿಭಾಗದ ಇಬ್ಬರು ಪ್ರಮುಖ ಆಟಗಾರರಾದ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರು ನೆಟ್ಸ್‌ನಲ್ಲಿ ತಮ್ಮ ಬ್ಯಾಟಿಂಗ್ ಅಭ್ಯಾಸವನ್ನು ಆರಂಭಿಸಿದ್ದಾರೆ. ಇದರ ಜೊತೆಎ ಅವರು ತಮ್ಮ ಪಂದ್ಯದ ಫಿಟ್‌ನೆಸ್ ಅನ್ನು ಮರಳಿ ಪಡೆಯಲು ಕಠಿಣ ಶಕ್ತಿ ಮತ್ತು ಫಿಟ್‌ನೆಸ್ ಡ್ರಿಲ್‌ಗಳಿಗೆ ಒಳಗಾಗುತ್ತಿದ್ದಾರೆ.
ಬಿಸಿಸಿಐ ವೈದ್ಯಕೀಯ ತಂಡವು ಇದುವರೆಗಿನ ಅವರ ಬೆಳವಣಿಗೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದೆ. ಮುಂಬರುವ ದಿನಗಳಲ್ಲಿ ಕೌಶಲ್ಯ ಮತ್ತು ಕಂಡೀಷನಿಂಗ್ ಎರಡರಲ್ಲೂ ತಮ್ಮ ತರಬೇತಿಯನ್ನು ಉತ್ತಮಗೊಳಿಸುವ ಯೋಜನೆಗಳನ್ನು ವಿವರಿಸಿದೆ. ಈ ಹಂತದಲ್ಲಿ ಅವರು ತಮ್ಮ ಸಂಪೂರ್ಣವಾಗಿ ಆಟಕ್ಕೆ ಮರಳುವುದನ್ನು ಖಚಿತಪಡಿಸಿಕೊಳ್ಳುವ ಗುರಿ ಹೊಂದಿದೆ.

ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿರುವ ರಿಷಭ್ ಪಂತ್ ಅವರ ಪುನರ್ವಸತಿಯಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದ್ದಾರೆ. ಪಂತ್ ಇದೀಗ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮತ್ತು ವಿಕೆಟ್‌ಕೀಪಿಂಗ್ ಅಭ್ಯಾಸವನ್ನು ಪ್ರಾರಂಭಿಸಿದ್ದಾರೆ. ಅವರ ದೈಹಿಕ ಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಪ್ರದರ್ಶಿಸಿದ್ದಾರೆ.
ಬಿಸಿಸಿಐ ಅವರಿಗೆ ವೈಯಕ್ತಿಕವಾಗಿ ಫಿಟ್‌ನೆಸ್ ಕಾರ್ಯಕ್ರಮವನ್ನು ರೂಪಿಸಿದ್ದು, ಇದು ಶಕ್ತಿ ಮತ್ತು ಓಟದ ವ್ಯಾಯಾಮಗಳನ್ನು ಒಳಗೊಂಡಿದೆ. ಅಪಘಾತದಿಂದ ಚೇತರಿಸಿಕೊಂಡಿರುವ ರಿಷಭ್ ಪಂತ್ ಎನ್‌ಸಿಎನಲ್ಲಿ ಉತ್ತಮ ತರಬೇತಿಯೊಂದಿಗೆ ಮತ್ತೆ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಮರಳಿ ಪಡೆಯಲು ಮತ್ತು ಮುಂದಿನ ಪಂದ್ಯಗಳಲ್ಲಿ ತಂಡದ ಯಶಸ್ಸಿಗೆ ಕೊಡುಗೆ ನೀಡುವ ಗುರಿಯನ್ನು ಹೊಂದಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಈ ಮೇಲಿನ ಐವರು ಆಟಗಾರರ ಪ್ರಗತಿ ಮತ್ತು ಪುನರ್ವಸತಿಗೆ ಅವರ ಸಮರ್ಪಣೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಆಟಗಾರರ ಫಿಟ್‌ನೆಸ್‌ನ ಪ್ರಾಮುಖ್ಯತೆ ಮತ್ತು ಭಾರತ ತಂಡದ ಒಟ್ಟಾರೆ ಪ್ರದರ್ಶನದಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಜಯ್ ಶಾ ಒತ್ತಿ ಹೇಳಿದರು.
ಅಲ್ಲದೆ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಆಟಗಾರರ ಪುನರ್ವಸತಿ ಸಮಯದಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯಗಳು ಮತ್ತು ಬೆಂಬಲವನ್ನು ಒದಗಿಸುವಲ್ಲಿ ಬಿಸಿಸಿಐ ಯಾವುದೇ ಕಾರಣಕ್ಕೂ ಹಿಂದುಮುಂದು ನೋಡುತ್ತಿಲ್ಲ ಎಂದು ಭಾರತೀಯ ಅಭಿಮಾನಿಗಳಿಗೆ ಜಯ್ ಶಾ ಭರವಸೆ ನೀಡಿದರು.