ಲಾಹೋರ್‌ನಿಂದ ಆಗಮಿಸಿದ ಬಿನ್ನಿ-ಶುಕ್ಲಾ; ಭಾರತ vs ಪಾಕಿಸ್ತಾನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಪುನರಾರಂಭ?
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ ಅವರು ನೆರೆಯ ಪಾಕಿಸ್ತಾನಕ್ಕೆ ತಮ್ಮ ಅಲ್ಪಾವಧಿಯ ಭೇಟಿಯನ್ನು ಮುಗಿಸಿ ಭಾರತಕ್ಕೆ ವಾಪಸ್ಸಾದರು. ಇದೇ ವೇಳೆ ಪಾಕಿಸ್ತಾನದಲ್ಲಿ ಸ್ವೀಕರಿಸಿದ ಆತ್ಮೀಯ ಮತ್ತು ಸೌಹಾರ್ದ ಆತಿಥ್ಯದ ಬಗ್ಗೆ ಮಾತನಾಡಿದರು.
ಇನ್ನು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಉಭಯ ದೇಶಗಳ ನಡುವೆ ಹದಗೆಟ್ಟಿರುವ ರಾಜತಾಂತ್ರಿಕ ಸಂಬಂಧವನ್ನು ಸುಧಾರಿಸಲು ಕ್ರಿಕೆಟ್ ಸೇತುವೆಯಾಗಬಹುದು ಎಂದು ತಿಳಿಸಿದರು.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಆಹ್ವಾನದ ಮೇರೆಗೆ 2023ರ ಏಷ್ಯಾ ಕಪ್ ಪಂದ್ಯಗಳನ್ನು ವೀಕ್ಷಿಸಿದ ನಂತರ, ರೋಜರ್ ಬಿನ್ನಿ ಮತ್ತು ರಾಜೀವ್ ಶುಕ್ಲಾ ಅವರು ಬುಧವಾರ ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತಕ್ಕೆ ಮರಳಿದರು. 17 ವರ್ಷಗಳ ನಂತರ, ಇಬ್ಬರು ಬಿಸಿಸಿಐ ಪದಾಧಿಕಾರಿಗಳು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದು ಇದೇ ಮೊದಲಾಗಿದೆ.
"ನಾವು ಪಾಕಿಸ್ತಾನದಲ್ಲಿ ಬಹಳ ಒಳ್ಳೆಯ ಸಭೆಯನ್ನು ನಡೆಸಿದ್ದು, ಉತ್ತಮ ಆತಿಥ್ಯವನ್ನು ಸ್ವೀಕರಿಸಿದ್ದೇವೆ. ಅವರು ನಮ್ಮನ್ನು ಚೆನ್ನಾಗಿ ನೋಡಿಕೊಂಡರು. ಕ್ರಿಕೆಟ್ ನೋಡುವುದು ಮತ್ತು ಅವರೊಂದಿಗೆ ಕುಳಿತು ವಿಷಯಗಳನ್ನು ಚರ್ಚಿಸುವುದು ಮುಖ್ಯ ಅಜೆಂಡಾವಾಗಿತ್ತು. ಒಟ್ಟಾರೆ, ಇದು ತುಂಬಾ ಒಳ್ಳೆಯ ಪ್ರವಾಸವಾಗಿತ್ತು," ಎಂದು ರೋಜರ್ ಬಿನ್ನಿ ತಿಳಿಸಿದರು.

ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧಗಳನ್ನು ಸ್ಥಗಿತಗೊಳಿಸಲಾಗಿದ್ದು, ಉಭಯ ತಂಡಗಳು ಐಸಿಸಿ ಅಥವಾ ಎಸಿಸಿ ಪಂದ್ಯಾವಳಿಗಳಲ್ಲಿ ಮಾತ್ರ ಪರಸ್ಪರ ಎದುರಿಸುತ್ತವೆ.
2008ರಲ್ಲಿ ಏಷ್ಯಾ ಕಪ್ ಪಂದ್ಯಾವಳಿಗಾಗಿ ಭಾರತ ತಂಡವು ಕೊನೆಯ ಬಾರಿ ಪಾಕಿಸ್ತಾನಕ್ಕೆ ತೆರಳಿತ್ತು. ಪಾಕಿಸ್ತಾನವು 2006ರಲ್ಲಿ ದ್ವಿಪಕ್ಷೀಯ ಸರಣಿಗಾಗಿ ಭಾರತ ತಂಡದ ವಿರುದ್ಧ ಕೊನೆಯ ಬಾರಿಗೆ ದ್ವಿಪಕ್ಷೀಯ ಸರಣಿ ಆಯೋಜಿಸಿತ್ತು. ಇನ್ನು ಪಾಕಿಸ್ತಾನ ತಂಡ ಕೊನೆಯದಾಗಿ 2012ರಲ್ಲಿ ವೈಟ್ ಬಾಲ್ ಪ್ರವಾಸಕ್ಕಾಗಿ ಭಾರತಕ್ಕೆ ಭೇಟಿ ನೀಡಿತ್ತು.
ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ಪುನರಾರಂಭಿಸುವ ಸಾಧ್ಯತೆಯ ಬಗ್ಗೆ ಕೇಳಿದಾಗ, ರೋಜರ್ ಬಿನ್ನಿ ಅವರು ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
"ಇದನ್ನು ಬಿಸಿಸಿಐ ನಿರ್ಧರಿಸಲು ಸಾಧ್ಯವಿಲ್ಲ. ಇದು ಸರ್ಕಾರದ ಸಮಸ್ಯೆ ಮತ್ತು ಅವರು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ನಾವು ಕಾದು ನೋಡುತ್ತಿದ್ದೇವೆ ಮತ್ತು ಆಶಾದಾಯಕವಾಗಿ ಇದು ಸಂಭವಿಸುತ್ತದೆ. ಏಕೆಂದರೆ, ಭಾರತದಲ್ಲಿ ಏಕದಿನ ವಿಶ್ವಕಪ್ ಆಡಲು ಪಾಕಿಸ್ತಾನ ತಂಡ ಬರುತ್ತಿದೆ," ಎಂದು ರೋಜರ್ ಬಿನ್ನಿ ಹೇಳಿದರು.
ಭಾರತ ಮತ್ತು ಪಾಕಿಸ್ತಾನ ತಂಡಗಳು ಸದ್ಯ ಶ್ರೀಲಂಕಾದಲ್ಲಿ ಏಷ್ಯಾ ಕಪ್‌ನಲ್ಲಿ ಮುಖಾಮುಖಿಯಾಗುತ್ತಿವೆ ಮತ್ತು ಅಕ್ಟೋಬರ್ 14ರಂದು ಅಹಮದಾಬಾದ್‌ನಲ್ಲಿ ನಡೆಯುವ ಬಹು ನಿರೀಕ್ಷಿತ ವಿಶ್ವಕಪ್ ಹಣಾಹಣಿಯಲ್ಲಿ ಮತ್ತೆ ಸೆಣಸಾಡಲಿವೆ.
ವಿಶ್ವಕಪ್ ಪಂದ್ಯಾವಳಿಗಾಗಿ ಭಾರತಕ್ಕೆ ಪ್ರಯಾಣಿಸುವ ಬಗ್ಗೆ ಪಾಕಿಸ್ತಾನ ಹಿಂದಡಿ ಇಟ್ಟಿತ್ತಾದರೂ, ಪಿಸಿಬಿ ಅಂತಿಮವಾಗಿ ಒಪ್ಪಿಕೊಂಡಿತು. ಇನ್ನು ಪಿಸಿಬಿಯ ಆತಿಥ್ಯಕ್ಕಾಗಿ ರಾಜೀವ್ ಶುಕ್ಲಾ ಕೂಡ ಶ್ಲಾಘಿಸಿದರು.
"ಸಭೆ ತುಂಬಾ ಚೆನ್ನಾಗಿತ್ತು. ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಮ್ಮನ್ನು ಬಹಳ ಚೆನ್ನಾಗಿ ನೋಡಿಕೊಂಡಿತು. ಭದ್ರತೆಯು ಅದ್ಭುತವಾಗಿತ್ತು, ಎಲ್ಲಾ ವ್ಯವಸ್ಥೆಗಳು ಅಸಾಧಾರಣವಾಗಿದ್ದವು. ಇದು ಕ್ರಿಕೆಟ್‌ಗೆ ಸೌಹಾರ್ದಯುವ ಭೇಟಿಯಾಗಿದ್ದು, ಅದು ಉತ್ತಮವಾಗಿ ನಡೆಯಿತು," ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅಭಿಪ್ರಾಯಪಟ್ಟರು.
"ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಜಯ್ ಶಾ ಅವರು ಬಿಸಿಸಿಐ ಕಾರ್ಯದರ್ಶಿಯೂ ಆಗಿದ್ದಾರೆ. ಆದ್ದರಿಂದ ನಾವು ಈ ಭೇಟಿಯನ್ನು ಮಾಡಿದ್ದೇವೆ. ಬಿಸಿಸಿಐ ಎಲ್ಲಾ ಎಸಿಸಿ ಸದಸ್ಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ, ಅದಕ್ಕಾಗಿಯೇ ನಾವು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದೇವೆ," ಎಂದು ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications