2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯಲ್ಲಿ ಬೆನ್ ಸ್ಟೋಕ್ಸ್ ಆಡುವುದಿಲ್ಲ. ಮಿನಿ ಹರಾಜಿಗೂ ಮುನ್ನವೇ ಅವರು ಈ ಮಾಹಿತಿ ನೀಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಅವರನ್ನು 2024ರ ಋತುವಿನ ಮೊದಲು ಬಿಡುಗಡೆ ಮಾಡಿದೆ.
2023ರಲ್ಲಿ ಸಿಎಸ್‌ಕೆ ಫ್ರಾಂಚೈಸಿ ಬೆನ್ ಸ್ಟೋಕ್ಸ್ ಅವರನ್ನು 16.25 ಕೋಟಿ ರೂಪಾಯಿಗೆ ಖರೀದಿಸಿತ್ತು. ಸಿಎಸ್‌ಕೆ ಪರ ಬೆನ್ ಸ್ಟೋಕ್ಸ್ ಕೇವಲ 2 ಪಂದ್ಯಗಳನ್ನು ಆಡಿದ್ದರು. ಗಾಯದ ಕಾರಣ, ಅವರು ಋತುವಿನ ಮಧ್ಯದಲ್ಲೇ ತಮ್ಮ ದೇಶಕ್ಕೆ ಮರಳಿದರು.

ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಇದೀಗ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇತ್ತೀಚಿಗೆ ಸಾಮಾಜಿಕ ತಾಣದಲ್ಲಿ ತಮ್ಮ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಸ್ಟೋಕ್ಸ್ ಈ ಮಾಹಿತಿಯನ್ನು ನೀಡಿದ್ದಾರೆ.
ಪೋಸ್ಟ್‌ನಲ್ಲಿ ಅವರು ತಮ್ಮ ಮೊಣಕಾಲಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಮತ್ತು ಈಗ ತಮ್ಮ ಪುನರ್ವಸತಿ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ. ಫೋಟೋದಲ್ಲಿ ಅವರು ಆಸ್ಪತ್ರೆಯ ಮುಂದೆ ಊರುಗೋಲುಗಳ ಸಹಾಯದಿಂದ ನಿಂತಿರುವ ಫೋಟೋ ವೈರಲ್ ಆಗಿದೆ.
ಬೆನ್ ಸ್ಟೋಕ್ಸ್‌ಗೆ ದೀರ್ಘಕಾಲದವರೆಗೆ ಮೊಣಕಾಲು ಸಮಸ್ಯೆ ಇತ್ತು. ಈ ಕಾರಣದಿಂದಾಗಿ, ಅವರು ಐಪಿಎಲ್ 2023ರ ಹೆಚ್ಚಿನ ಪಂದ್ಯಗಳನ್ನು ಆಡಲು ಸಾಧ್ಯವಾಗಿರಲಿಲ್ಲ. ಅವರು ತಮ್ಮ ಎಡ ಮೊಣಕಾಲಿನ ಸ್ನಾಯು ಸೆಳೆತದಿಂದ ಬಳಲುತ್ತಿದ್ದರು.
ಇಂಗ್ಲೆಂಡ್ ಟೆಸ್ಟ್ ನಾಯಕ ಚೇತರಿಸಿಕೊಳ್ಳಲು 6ರಿಂದ 7 ವಾರಗಳನ್ನು ಬೇಕಾಗಬಹುದು ಎಂದು ವೈದ್ಯರು ಸೂಚಿಸಿದ್ದಾರೆ. ಭಾರತ ಪ್ರವಾಸದ ವೇಳೆ ಅವರು ಫಿಟ್ ಆಗುತ್ತಾರೆ ಎಂಬ ನಂಬಿಕೆ ಇದೆ. ಇಂಗ್ಲೆಂಡ್ ತಂಡದ ಭಾರತ ಪ್ರವಾಸವು 25 ಜನವರಿ 2024ರಿಂದ ಪ್ರಾರಂಭವಾಗಲಿದೆ.
ಬೆನ್ ಸ್ಟೋಕ್ಸ್ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು. ಆದರೆ ಈ ಬಾರಿ ಅವರು ವಿಶ್ವಕಪ್ ಆಡಲು ನಿವೃತ್ತಿ ವಾಪಸ್ ಪಡೆದು ತಂಡಕ್ಕೆ ಮರಳಿದರು. ಹಾಲಿ ಚಾಂಪಿಯನ್ ಇಂಗ್ಲೆಂಡ್ ನಿರಾಶಾದಾಯಕ ವಿಶ್ವಕಪ್ ಅಭಿಯಾನವನ್ನು ಎದುರಿಸಿತು ಮತ್ತು 10-ತಂಡಗಳ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನ ಗಳಿಸಿತು.
32ರ ಹರೆಯದ ಬೆನ್ ಸ್ಟೋಕ್ಸ್ ಗಾಯದ ಸಮಸ್ಯೆಯಿಂದಾಗಿ ಲೀಗ್ ಹಂತದ ಮೊದಲ ಮೂರು ಪಂದ್ಯಗಳನ್ನು ಆಡಲಾಗಲಿಲ್ಲ. ಆದರೆ ಕೊನೆಯಲ್ಲಿ ಒಂದು ಶತಕ ಮತ್ತು ಎರಡು ಅರ್ಧ ಶತಕಗಳೊಂದಿಗೆ ಉತ್ತಮ ಪ್ರದರ್ಶನ ನೀಡಿದರು.
ಇಂಗ್ಲೆಂಡ್ ತಂಡ 3 ವರ್ಷಗಳ ನಂತರ ಟೆಸ್ಟ್ ಸರಣಿ ಆಡಲು ಭಾರತಕ್ಕೆ ಬರಲಿದೆ. ಈ ಬಾರಿ ಸರಣಿಯಲ್ಲಿ 5 ಪಂದ್ಯಗಳು ನಡೆಯಲಿವೆ. ಮೊದಲ ಟೆಸ್ಟ್ ಜನವರಿ 25ರಿಂದ 29ರವರೆಗೆ, ಎರಡನೇ ಟೆಸ್ಟ್ ಫೆಬ್ರವರಿ 2ರಿಂದ 6ರವರೆಗೆ, ಮೂರನೇ ಟೆಸ್ಟ್ ಫೆಬ್ರವರಿ 15ರಿಂದ 19ರವರೆಗೆ, ನಾಲ್ಕನೇ ಟೆಸ್ಟ್ ಫೆಬ್ರವರಿ 23ರಿಂದ 27ರವರೆಗೆ ಮತ್ತು ಐದನೇ ಟೆಸ್ಟ್ ಮಾರ್ಚ್ 7ರಿಂದ 11ರವರೆಗೆ ನಡೆಯಲಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಕೊನೆಯ ಟೆಸ್ಟ್ ಸರಣಿಯು ಆಗಸ್ಟ್ 2021ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿತ್ತು. 5 ಟೆಸ್ಟ್‌ಗಳ ಸರಣಿ 2-2ರಲ್ಲಿ ಸಮಬಲಗೊಂಡಿತು. ಭಾರತದಲ್ಲಿ ಇಬ್ಬರ ನಡುವಿನ ಕೊನೆಯ ಸರಣಿಯು ಫೆಬ್ರವರಿ 2021ರಲ್ಲಿ ನಡೆಯಿತು, ಈ 4-ಟೆಸ್ಟ್ ಸರಣಿಯನ್ನು ಭಾರತ 3-1 ಅಂತರದಿಂದ ಗೆದ್ದುಕೊಂಡಿತ್ತು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ದೃಷ್ಟಿಯಿಂದ ಎರಡೂ ತಂಡಗಳಿಗೆ ಟೆಸ್ಟ್ ಸರಣಿ ಅತ್ಯಂತ ಮಹತ್ವದ್ದಾಗಿದೆ. ತವರು ನೆಲದಲ್ಲಿ ಭಾರತ 2012ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 1-2 ಅಂತರದಿಂದ ಸೋತಿತ್ತು. ಬೆನ್ ಸ್ಟೋಕ್ಸ್ ನಾಯಕರಾದ ಬಳಿಕ ಇಂಗ್ಲೆಂಡ್ ತಂಡ ಯಾವುದೇ ಟೆಸ್ಟ್ ಸರಣಿ ಸೋತಿಲ್ಲ, ಹೀಗಾಗಿ ಸರಣಿ ಭಾರತಕ್ಕೆ ದೊಡ್ಡ ಸವಾಲಾಗಲಿದೆ.