ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ ಸಿಎಸ್‌ಕೆ ತಂಡದ ಆಲ್‌ರೌಂಡರ್ ಬೆನ್‌ಸ್ಟೋಕ್ಸ್ ಈಗಾಗಲೇ ಎರಡು ಪಂದ್ಯವನ್ನು ಕಳೆದುಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಆಡದ ಅವರು, ರಾಜಸ್ಥಾನ ರಾಯಲ್ಸ್ ವಿರುದ್ಧ ಕೂಡ ಕಣಕ್ಕಿಳಿಯಲಿಲ್ಲ. ಫಿಟ್‌ನೆಸ್ ಬಗ್ಗೆ ಗಮನ ನೀಡಿರುವ ಅವರು, ಜೂನ್‌ನಲ್ಲಿ ನಡೆಯುವ ಆಶಸ್ ಸರಣಿಯತ್ತ ಹೆಚ್ಚಿನ ಗಮನ ಹರಿಸಿದ್ದಾರೆ.
ನಾಲ್ಕು ಬಾರಿ ಚಾಂಪಿಯನ್‌ಗಳಾದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬೆನ್ ಸ್ಟೋಕ್ಸ್ ಅಲಭ್ಯವಾಗಿರುವುದು ದೊಡ್ಡ ಹಿನ್ನಡೆಯಾಗಿದೆ. ತಮ್ಮ ಫಿಟ್‌ನೆಸ್ ಬಗ್ಗೆ ಮಾತನಾಡಿರುವ ಅವರು, ತಾನು ಅವಸರದಲ್ಲಿ ಪಂದ್ಯಗಳನ್ನು ಆಡುವುದಿಲ್ಲ, ಜೂನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿರುವ ಆಶಸ್ ಸರಣಿಯಲ್ಲಿ ಆಡುವ ಬಗ್ಗೆ ಗಮನ ಹರಿಸುವುದಾಗಿ ಹೇಳಿದ್ದಾರೆ.

"ಕಳೆದ ಐದು ವಾರಗಳಲ್ಲಿ ತುಂಬಾ ಶ್ರಮ ವಹಿಸಿದ ಬಳಿಕ ಫಿಟ್ ಆಗಿದ್ದೇನೆ, ಸದ್ಯ ಮೊಣಕಾಲಿನ ನೋವಿಲ್ಲದೆ ಬೌಲಿಂಗ್ ಮಾಡುತ್ತಿದ್ದೇನೆ. ನಾನು ಬೌಲಿಂಗ್ ಮಾಡಿದಾಗ ಒಂದೇ ಓವರ್ ನಲ್ಲಿ 18 ರನ್‌ಗಳನ್ನು ಬಿಟ್ಟುಕೊಟ್ಟೆ, ಮೊಣಕಾಲು ಸಮಸ್ಯೆಯಿಂದ ಸದ್ಯ ಚೇತರಿಸಿಕೊಳ್ಳುತ್ತಿದ್ದೇನೆ. ಅತ್ಯುತ್ತಮವಾಗಿ ಫಿಟ್ ಆಗುತ್ತಿದ್ದೇನೆ, ಈ ಸಮಯದಲ್ಲಿ ಅವಸರ ಮಾಡುವುದಿಲ್ಲ. ಆಶಸ್‌ನಲ್ಲಿ ನಾಲ್ಕನೇ ಬೌಲರ್ ಆಗಿ ನಾನು ಆಡುವುದು ಮೊದಲ ಆದ್ಯತೆಯಾಗಿದೆ" ಎಂದು ಅವರು ಹೇಳಿದರು.
ಪ್ಲೇಯಿಂಗ್ 11 ಸಿದ್ಧವಾಗಿದೆ ಎಂದ ಸ್ಟೋಕ್ಸ್
ಜೂನ್ 16ರಂದು ಆರಂಭವಾಗಲಿರುವ ಆಶಸ್ ಸರಣಿಯಲ್ಲಿ ಈಗಾಗಲೇ ಇಂಗ್ಲೆಂಡ್ ತಂಡ ಸಿದ್ಧವಾಗಿದೆ ಎಂದು ಬೆನ್ ಸ್ಟೋಕ್ಸ್ ದೃಢಪಡಿಸಿದರು. "ಆರಂಭಿಕ ಪ್ಲೇಯಿಂಗ್ 11 ಏನಾಗಲಿದೆ ಎಂದು ಈಗಾಗಲೇ ನನಗೆ ತಿಳಿದಿದೆ, ಮೊದಲನೇ ಪಂದ್ಯದಲ್ಲೇ ನಾನು ಬೌಲಿಂಗ್ ಮಾಡುವುದು ತಂಡಕ್ಕೆ ಮುಖ್ಯವಾಗಿದೆ, ನಾಯಕನಾಗಿ ಬೌಲಿಂಗ್ ವಿಭಾಗದಲ್ಲಿ ಹೆಚ್ಚಿನ ಆಯ್ಕೆ ಹೊಂದಿರುವುದು ಮುಖ್ಯ, ಮೊದಲ ಪಂದ್ಯಕ್ಕೆ ಉತ್ತಮ ತಂಡವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ" ಎಂದು ಹೇಳಿದರು.
"ಆಶಸ್ ಸರಣಿಗಾಗಿ ಯಾವ ರೀತಿಯ ಪಿಚ್‌ಗಳು ಬೇಕು ಎಂದು ಈಗಾಗಲೇ ಮನವಿ ಮಾಡಿದ್ದೇನೆ, ಕ್ರೀಡಾಂಗಣದ ಆಡಳಿತ ಮಂಡಳಿ ಕೂಡ ಅದಕ್ಕೆ ಸ್ಪಂದಿಸುತ್ತಿದ್ದಾರೆ. ಗ್ರೌಂಡ್ ಸಿಬ್ಬಂದಿಗೆ ಈಗಾಗಲೇ ಸ್ಪಷ್ಟವಾಗಿ ಸೂಚನೆ ನೀಡಿದ್ದೇವೆ. ಟೆಸ್ಟ್ ಸರಣಿಗೆ ಫ್ಲಾಟ್ ಮತ್ತು ವೇಗದ ವಿಕೆಟ್‌ಗಳನ್ನು ಕೇಳಿದ್ದೇವೆ" ಎಂದು ಹೇಳಿದರು.

ಟೆಸ್ಟ್ ಸರಣಿಗೆ ಹೆಚ್ಚಿನ ಪ್ರಾಮುಖ್ಯತೆ
ಬೆನ್ ಸ್ಟೋಕ್ಸ್ ಇಂಗ್ಲೆಂಡ್‌ನ ಟೆಸ್ಟ್ ತಂಡದ ನಾಯಕರಾಗಿದ್ದಾರೆ. ಬ್ರೆಂಡನ್ ಮೆಕಲಮ್ ತಂಡದ ಕೋಚ್ ಆದ ನಂತರ, ಬೆನ್ ಸ್ಟೋಕ್ಸ್ ನಾಯಕನಾಗಿ ಆಯ್ಕೆಯಾದರು. ಈ ಜೋಡಿ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದೆ. ಟೆಸ್ಟ್ ಎಂದರೆ ನೀರಸವಲ್ಲ ಎಲ್ಲದಕ್ಕಿಂತ ಹೆಚ್ಚಿನ ರೋಚಕತೆ ಇದೆ ಎಂದು ತೋರಿಸಿಕೊಟ್ಟಿದ್ದಾರೆ. ಟೆಸ್ಟ್ ಪಂದ್ಯವನ್ನೇ ಟಿ20 ಪಂದ್ಯದಂತೆ ಆಡುವ ಮೂಲಕ ಜನಪ್ರಿಯತೆ ಹೆಚ್ಚಿಸಿದ್ದಾರೆ. ಈ ಮೂಲಕ ಮೊದಲು ಟೆಸ್ಟ್ ಕ್ರಿಕೆಟ್‌ಗೆ ಇದ್ದ ಪ್ರಾಮುಖ್ಯತೆಯನ್ನು ವಾಪಸ್ ತರುವಲ್ಲಿ ಶ್ರಮಿಸುತ್ತಿದ್ದಾರೆ.
ಆಸ್ಟ್ರೇಲಿಯಾ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಎಂದರೆ ಅಲ್ಲಿ ಸಾಕಷ್ಟು ರೋಚಕತೆ ಇರುತ್ತದೆ. ಬದ್ದ ವೈರಿಗಳಂತೆ ಕಾದಾಡುವುದರಿಂದ ಆಶಸ್ ಸರಣಿ ಮೇಲೆ ಕುತೂಹಲ ಹೆಚ್ಚಾಗಿದೆ. ಏಕದಿನ ಮಾದರಿಗೆ ನಿವೃತ್ತಿ ಘೋಷಿಸಿರುವ ಬೆನ್‌ಸ್ಟೋಕ್ಸ್ ಸದ್ಯ ಟೆಸ್ಟ್ ಮತ್ತು ಟಿ20 ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಅವರ ಫಿಟ್‌ನೆಸ್ ಸಮಸ್ಯೆ ಕೂಡ ಇದಕ್ಕೆ ಕಾರಣ ಎನ್ನಬಹುದು.