'ನನಗೆ ಸರಿಯಾದ ಪೈಪೋಟಿ ನೀಡಿದ್ದು ನೀವು ಮಾತ್ರ': ತಾನು ಎದುರಿಸಿದ ಕಠಿಣ ಆಟಗಾರನನ್ನು ಬಿಚ್ಚಿಟ್ಟ ಕೊಹ್ಲಿ

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅತಿ ದೊಡ್ಡ ಮಟ್ಟದ ಟ್ರೋಲ್ ಮತ್ತು ಟೀಕೆಗಳಿಗೆ ಗುರಿಯಾದ ಹಾಗೂ ಅತಿ ಹೆಚ್ಚು ಚರ್ಚೆಗೆ ಒಳಗಾಗಿರುವ ಕ್ರಿಕೆಟಿಗ ಎಂದರೆ ಅದು ವಿರಾಟ್ ಕೊಹ್ಲಿ. ವಿರಾಟ್ ಕೊಹ್ಲಿ ಈ ರೀತಿ ಟೀಕೆಗಳಿಗೆ ಹಾಗೂ ಚರ್ಚೆಗಳಿಗೆ ಒಳಗಾಗಿರುವುದರ ಹಿಂದಿನ ಕಾರಣ ಕೆಟ್ಟ ಫಾರ್ಮ್. ಹೌದು, ವಿರಾಟ್ ಕೊಹ್ಲಿ ಸದ್ಯ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ.
ಸಾಲು ಸಾಲು ಕೆಟ್ಟ ಪ್ರದರ್ಶನಗಳನ್ನು ನೀಡುತ್ತಾ ಬಂದಿರುವ ವಿರಾಟ್ ಕೊಹ್ಲಿ ತಮ್ಮ ಕೊನೆಯ ಶತಕ ಸಿಡಿಸಿ 1000 ದಿನಗಳನ್ನು ಪೂರೈಸುವ ಸನಿಹಕ್ಕೆ ಬಂದಿದ್ದಾರೆ. ಹೀಗಿದ್ದರೂ ಸಹ ವಿರಾಟ್ ಕೊಹ್ಲಿ ಅವರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿಯೇ ಬೆಂಬಲ ವ್ಯಕ್ತವಾಗುತ್ತಿದ್ದು, ಭಾರತ ತಂಡದಲ್ಲಿ ಪದೇಪದೆ ಅವಕಾಶಗಳು ದೊರೆಯುತ್ತಿವೆ. ಕೊಹ್ಲಿಗೆ ಕೆಟ್ಟ ಸಮಯದಲ್ಲಿಯೂ ಸಹ ಇಷ್ಟು ದೊಡ್ಡ ಮಟ್ಟದ ಬೆಂಬಲ ಸಿಗಲು ಕಾರಣ ಆತ ಈ ಹಿಂದೆ ಆಡಿರುವ ಅತ್ಯದ್ಭುತವಾದ ಆಟ. ಹೌದು, ಸಕ್ರಿಯರಾಗಿರುವ ಕ್ರಿಕೆಟಿಗರ ಪೈಕಿ ಅತಿ ಹೆಚ್ಚು ಶತಕ ಹಾಗೂ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಬಾರಿಸಿರುವ ದಾಖಲೆ ಹೊಂದಿರುವ ವಿರಾಟ್ ಕೊಹ್ಲಿ ತಾವಾಡಿರುವ ಉತ್ತಮ ಆಟದ ನೆರವಿನಿಂದ ಇನ್ನೂ ಸಹ ತಂಡದಿಂದ ಹೊರದೂಡಲ್ಪಡದೇ ಉಳಿದುಕೊಂಡಿದ್ದಾರೆ.
ಹೀಗೆ ಕ್ರಿಕೆಟ್ ಇತಿಹಾಸದಲ್ಲಿ ಬೃಹತ್ ದಾಖಲೆ ನಿರ್ಮಿಸಿ ಕಿಂಗ್ ಆಫ್ ಕ್ರಿಕೆಟ್ ಎಂದೇ ಹೆಸರನ್ನು ಮಾಡಿರುವಂತಹ ವಿರಾಟ್ ಕೊಹ್ಲಿ ಅವರಿಂದ ಮೆಚ್ಚುಗೆಯನ್ನು ಪಡೆದುಕೊಳ್ಳುವುದು ಸುಲಭದ ಮಾತಲ್ಲ. ಅದರಲ್ಲಿಯೂ ವಿರಾಟ್ ಕೊಹ್ಲಿಗೆ ಪೈಪೋಟಿ ನೀಡಬಲ್ಲ ಆಟಗಾರ ಎಂಬ ಭಾವನೆ ಮೂಡಿಸುವುದು ತೀರಾ ಕಷ್ಟದ ಕೆಲಸವೇ ಸರಿ. ಆದರೆ ಓರ್ವ ಆಟಗಾರನ ಕುರಿತು ಮಾತ್ರ ವಿರಾಟ್ ಕೊಹ್ಲಿ ಕಾಮೆಂಟ್ ಮಾಡಿದ್ದು, ನೀವು ನಾನು ಕ್ರಿಕೆಟ್ ವೃತ್ತಿ ಜೀವನದಲ್ಲಿ ಎದುರಿಸಿದ ಅತ್ಯಂತ ಪೈಪೋಟಿಯುತ ಆಟಗಾರ ಎಂದು ಬರೆದಿದ್ದಾರೆ. ಈ ಕುರಿತಾದ ಮತ್ತಷ್ಟು ಮಾಹಿತಿ ಮುಂದೆ ಓದಿ.

ಕೊಹ್ಲಿಗೆ ಪೈಪೋಟಿ ನೀಡಿದ ಆಟಗಾರ ಈತ
ಇಂದು ( ಜುಲೈ 18 ) ಇಂಗ್ಲೆಂಡ್‌ನ ವಿಶ್ವಕಪ್ ಹೀರೋ ಎಂದೇ ಖ್ಯಾತಿಯನ್ನು ಪಡೆದಿರುವಂತ ಬೆನ್ ಸ್ಟೋಕ್ಸ್ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿನ ತಮ್ಮ ಅಧಿಕೃತ ಖಾತೆಗಳಲ್ಲಿ ಈ ವಿಷಯದ ಕುರಿತಾಗಿ ಪೋಸ್ಟ್ ಮಾಡಿರುವ ಬೆನ್ ಸ್ಟೋಕ್ಸ್ ತಮ್ಮ ಈ ನಿರ್ಧಾರವನ್ನು ತಿಳಿಸಿದ್ದಾರೆ. ಹೀಗೆ ಬೆನ್ ಸ್ಟೋಕ್ಸ್ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಾಕಿರುವ ಪೋಸ್ಟ್‌ಗೆ ವಿರಾಟ್ ಕೊಹ್ಲಿ ರಿಪ್ಲೈ ಮಾಡಿದ್ದು, ನನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿ ನನಗೆ ಅತಿ ಹೆಚ್ಚು ಪೈಪೋಟಿ ನೀಡಿದ ಆಟಗಾರ ನೀವು ಎಂದು ಉಲ್ಲೇಖಿಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ತಾವು ಎದುರಿಸಿದ ಕಠಿಣ ಆಟಗಾರ ಯಾರೆಂಬುದನ್ನು ಬಿಚ್ಚಿಟ್ಟಿದ್ದಾರೆ.

ಏಕದಿನ ಕ್ರಿಕೆಟ್ ಮಾದರಿಗೆ ನಿವೃತ್ತಿ ಘೋಷಿಸಿದ ಬೆನ್ ಸ್ಟೋಕ್ಸ್
ಇಂಗ್ಲೆಂಡ್ ತಂಡದ ಪ್ರಮುಖ ಆಲ್ ರೌಂಡರ್ ಆಟಗಾರ ಬೆನ್ ಸ್ಟೋಕ್ಸ್ ಇಂದು ( ಜುಲೈ 18 ) ಸಾಮಾಜಿಕ ಜಾಲತಾಣದ ಮೂಲಕ ತಾವು ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕನಾಗಿ ಆಯ್ಕೆಯಾಗಿರುವ ಬೆನ್ ಸ್ಟೋಕ್ಸ್ ಟೆಸ್ಟ್ ಹಾಗೂ ಟಿ ಟ್ವೆಂಟಿ ಕ್ರಿಕೆಟ್ ಮಾದರಿಗಳತ್ತ ಹೆಚ್ಚಿನ ಗಮನ ಹರಿಸಲು ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.

ತಾವು ಆಡಲಿರುವ ಅಂತಿಮ ಏಕದಿನ ಪಂದ್ಯವನ್ನು ತಿಳಿಸಿದ ಸ್ಟೋಕ್ಸ್
ಏಕದಿನ ಕ್ರಿಕೆಟ್ ಮಾದರಿಗೆ ನಿವೃತ್ತಿ ಘೋಷಿಸಿರುವ ಬೆನ್ ಸ್ಟೋಕ್ಸ್ ತಾವು ಆಡಲಿರುವ ಅಂತಿಮ ಏಕದಿನ ಪಂದ್ಯ ಯಾವುದು ಎಂಬುದನ್ನು ಕೂಡ ಬಹಿರಂಗಪಡಿಸಿದ್ದಾರೆ. ಜುಲೈ 19ರ ಮಂಗಳವಾರದಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಪ್ರಥಮ ಏಕದಿನ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಅಂತಿಮವಾಗಿ ಇಂಗ್ಲೆಂಡ್ ಪರ ಕಣಕ್ಕಿಳಿಯಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications