Breaking: ಏಕದಿನ ಕ್ರಿಕೆಟ್‍ಗೆ ಗುಡ್ ಬೈ ಹೇಳಿದ ಇಂಗ್ಲೆಂಡ್‌ನ ವಿಶ್ವಕಪ್ ಹೀರೋ ಬೆನ್ ಸ್ಟೋಕ್ಸ್; ನಿವೃತ್ತಿಗೆ ಇದೇ ಕಾರಣ

2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಚೊಚ್ಚಲ ವಿಶ್ವಕಪ್ ಗೆದ್ದ ದಾಖಲೆಯನ್ನು ಬರೆದಿತ್ತು. ಇಂಗ್ಲೆಂಡ್ ತಂಡ ಫೈನಲ್ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಟ್ರೋಫಿ ಎತ್ತಿ ಹಿಡಿಯುವಲ್ಲಿ ಪ್ರಮುಖ ಕಾರಣ ತಂಡದ ಆಲ್ ರೌಂಡರ್ ಆಟಗಾರ ಬೆನ್ ಸ್ಟೋಕ್ಸ್. ಹೀಗೆ ಇಂಗ್ಲೆಂಡ್ ತಂಡ ಕಳೆದ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವುದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಬೆನ್ ಸ್ಟೋಕ್ಸ್ ಇದೀಗ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವುದರ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಬೆನ್ ಸ್ಟೋಕ್ಸ್ ಹೀಗೆ ದೊಡ್ಡ ನಿರ್ಧಾರವನ್ನು ಕೈಗೊಂಡದ್ದರ ಹಿಂದೆ ಕಾರಣವೂ ಕೂಡ ಇದೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ತಂಡದ ದೀರ್ಘಾವಧಿ ನಾಯಕನಾಗಿ ಆಯ್ಕೆಯಾಗಿರುವ ಬೆನ್ ಸ್ಟೋಕ್ಸ್ ಟೆಸ್ಟ್ ತಂಡದ ನಾಯಕತ್ವ ಹಾಗೂ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯತ್ತ ಹೆಚ್ಚಿನ ಗಮನ ಹರಿಸುವ ಸಲುವಾಗಿ ಏಕದಿನ ಕ್ರಿಕೆಟ್‍ಗೆ ಗುಡ್ ಬೈ ಹೇಳಿದ್ದಾರೆ.
ಬೆನ್ ಸ್ಟೋಕ್ಸ್ ಈ ವಿಷಯವನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಂದೇಶವೊಂದನ್ನು ಟ್ವೀಟ್ ಮಾಡುವುದರ ಮೂಲಕ ಬಹಿರಂಗಪಡಿಸಿದ್ದಾರೆ. ಸದ್ಯ ನೆಟ್ಟಿಗರು ಹಾಗೂ ಕ್ರಿಕೆಟ್ ಅಭಿಮಾನಿಗಳು ಬೆನ್ ಸ್ಟೋಕ್ಸ್ ಅವರ ಈ ದಿಢೀರ್ ನಿರ್ಧಾರ ಕೇಳಿ ಆಶ್ಚರ್ಯಕ್ಕೊಳಗಾಗಿದ್ದಾರೆ.
❤️🏴 pic.twitter.com/xTS5oNfN2j
— Ben Stokes (benstokes38) July 18, 2022
ನನ್ನಿಂದ ಇನ್ನು ಏಕದಿನ ಮಾದರಿಯಲ್ಲಿ ಆಡಲು ಆಗುವುದಿಲ್ಲ
ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತನ್ನ ಅನುಯಾಯಿಗಳಿಗೆ ವಿಶೇಷ ಬರಹವನ್ನು ಬರೆದಿರುವ ಬೆನ್ ಸ್ಟೋಕ್ಸ್ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿರುವುದು ತೀರಾ ಕಠಿಣವಾದ ನಿರ್ಧಾರ ಎಂದಿದ್ದಾರೆ. ತನ್ನ ಸಹ ಆಟಗಾರರೊಂದಿಗೆ ಈ ಮಾದರಿಯಲ್ಲಿ ಕಳೆದಿರುವ ಪ್ರತಿಯೊಂದು ನಿಮಿಷ ಕೂಡ ಅದ್ಭುತವಾದದ್ದು ಎಂದಿರುವ ಬೆನ್ ಸ್ಟೋಕ್ಸ್ ತಾವು ಏಕದಿನ ಕ್ರಿಕೆಟ್‍ನಲ್ಲಿ ಅಮೋಘ ಪ್ರಯಾಣ ನಡೆಸಿದ್ದಾಗಿ ಬರೆದುಕೊಂಡಿದ್ದಾರೆ. ಇನ್ನೂ ಮುಂದುವರಿದು ಬರೆದಿರುವ ಸ್ಟೋಕ್ಸ್ ಇನ್ನು ಮುಂದೆ ನನ್ನಿಂದ ಈ ಮಾದರಿಯಲ್ಲಿ ಸಂಪೂರ್ಣ ಕೊಡುಗೆ ನೀಡಲಾಗುವುದಿಲ್ಲ ಎಂಬ ಕಾರಣಕ್ಕೆ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದಿದ್ದು, ಇಂಗ್ಲೆಂಡ್ ಏಕದಿನ ಕ್ರಿಕೆಟ್ ಜರ್ಸಿಯನ್ನು ತನಗಿಂತ ಅರ್ಹ ಆಟಗಾರ ಧರಿಸಬೇಕು ಎಂದು ಬರೆದುಕೊಂಡಿದ್ದಾರೆ. ಇನ್ನೂ ಮುಂದುವರೆದು ತನ್ನ ಸಹ ಆಟಗಾರರು ಹಾಗೂ ಇಂಗ್ಲೆಂಡ್ ತಂಡದ ಸಿಬ್ಬಂದಿ ವರ್ಗಕ್ಕೆ ಕೃತಜ್ಞತೆ ಸಲ್ಲಿಸಿರುವ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡದ ಅಭಿಮಾನಿಗಳನ್ನು ವಿಶ್ವದ ಅತ್ಯುತ್ತಮ ಅಭಿಮಾನಿಗಳು ಎಂದು ಹೊಗಳುವುದರ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವೇ ಅಂತಿಮ
ಇತ್ತೀಚೆಗಷ್ಟೇ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಟೀಮ್ ಇಂಡಿಯಾ ವಿರುದ್ಧ ಸೆಣಸಾಟ ನಡೆಸಿದ್ದ ಆಂಗ್ಲರು ಇದೀಗ ತವರಿಗೆ ಬಂದಿರುವ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಇತ್ತಂಡಗಳ ನಡುವೆ 3 ಏಕದಿನ, 3 ಟಿ20 ಮತ್ತು 3 ಟೆಸ್ಟ್ ಪಂದ್ಯಗಳ ಸರಣಿಗಳು ನಡೆಯಲಿವೆ. ಮೊದಲಿಗೆ ಇತ್ತಂಡಗಳ ನಡುವಿನ ಏಕದಿನ ಸರಣಿ ನಡೆಯಲಿದ್ದು, ಮಂಗಳವಾರ ( ಜುಲೈ 19 ) ಡರ್ಹಾಮ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಪ್ರಥಮ ಏಕದಿನ ಪಂದ್ಯವೇ ಬೆನ್ ಸ್ಟೋಕ್ಸ್ ಆಡಲಿರುವ ಅಂತಿಮ ಏಕದಿನ ಪಂದ್ಯವಾಗಲಿದೆ. ಈ ವಿಷಯವನ್ನು ಕೂಡ ತಾವು ಬರೆದಿರುವ ಪತ್ರದಲ್ಲಿ ಬೆನ್ ಸ್ಟೋಕ್ಸ್ ಉಲ್ಲೇಖಿಸಿದ್ದಾರೆ.

ಬೆನ್ ಸ್ಟೋಕ್ಸ್ ಏಕದಿನ ಅಂಕಿ ಅಂಶ
ಇಂಗ್ಲೆಂಡ್ ತಂಡದ ಪ್ರಮುಖ ಆಲ್ ರೌಂಡರ್ ಆಟಗಾರ ಬೆನ್ ಸ್ಟೋಕ್ಸ್ 104 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿದ್ದು, 89 ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿ 2919 ರನ್ ಕಲೆಹಾಕಿದ್ದಾರೆ. ಏಕದಿನ ಕ್ರಿಕೆಟ್ ಮಾದರಿಯಲ್ಲಿ 3 ಶತಕ ಹಾಗೂ 11 ಅರ್ಧಶತಕಗಳನ್ನು ಬಾರಿಸಿರುವ ಬೆನ್ ಸ್ಟೋಕ್ಸ್ ಗಳಿಸಿರುವ ಅತಿ ಹೆಚ್ಚು ರನ್ 102*. ಹಾಗೂ 87 ಏಕದಿನ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಿರುವ ಸ್ಟೋಕ್ಸ್ 74 ವಿಕೆಟ್‍ಗಳನ್ನು ಪಡೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications