ಎಂಎಸ್ ಧೋನಿ ನೀಡಿದ ವಿಶೇಷ ಸಲಹೆಯನ್ನು ಹಂಚಿಕೊಂಡ ಭೂತಾನ್ ಕ್ರಿಕೆಟಿಗ

ಎಂಎಸ್ ಧೋನಿ, ವಿಶ್ವ ಕ್ರಿಕೆಟ್ ಕಂಡ ಯಶಸ್ವಿ ನಾಯಕರಲ್ಲಿ ಪ್ರಮುಖರು. ಕ್ಯಾಪ್ಟನ್ ಕೂಲ್ ಎಂದೇ ಹೆಸರನ್ನು ಮಾಡಿರುವ ಎಂ ಎಸ್ ಧೋನಿ ಟೀಮ್ ಇಂಡಿಯಾಗೆ 2 ಬಾರಿ ವಿಶ್ವಕಪ್ ಟ್ರೋಫಿಯನ್ನು ನಾಯಕನಾಗಿ ತಂದುಕೊಟ್ಟಿರುವ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಹೀಗೆ ಭಾರತ ತಂಡದ ಅಂತರರಾಷ್ಟ್ರೀಯ ನಾಯಕನಾಗಿ ಅತಿ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಿದ ನಾಯಕ ಎಂದು ಹೆಸರನ್ನು ಮಾಡಿರುವ ಎಂಎಸ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಕೂಡ ಓರ್ವ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ.
ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆ ಯಾವುದೇ ತಂಡ ಕಣಕ್ಕಿಳಿದರೂ ಕೂಡ ಪಂದ್ಯ ಮುಗಿದ ನಂತರ ಎದುರಾಳಿ ತಂಡದ ಯುವ ಕ್ರಿಕೆಟಿಗರು ಎಂಎಸ್ ಧೋನಿ ಬಳಿ ತೆರಳಿ ಸಲಹೆಗಳನ್ನು ಪಡೆದುಕೊಳ್ಳುತ್ತಾರೆ. ಹೀಗೆ ಪಂದ್ಯಗಳು ಮುಗಿದ ನಂತರ ಎಂಎಸ್ ಧೋನಿ ಬಳಿ ಯುವ ಕ್ರಿಕೆಟಿಗರು ಸಲಹೆ, ಫೋಟೋಗಳು ಮತ್ತು ಎಂಎಸ್ ಧೋನಿ ಅವರ ಆಟೋಗ್ರಾಫ್ ಪಡೆದುಕೊಳ್ಳುವುದನ್ನು ನಾವು ಸಾಕಷ್ಟು ಬಾರಿ ಕಂಡಿದ್ದೇವೆ. ಕೇವಲ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ದೇಸೀ ಕ್ರಿಕೆಟಿಗರು ಮಾತ್ರವಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟಿಗರು ಕೂಡ ಎಂಎಸ್ ಧೋನಿ ಬಳಿ ಈ ರೀತಿಯ ಸಲಹೆ ಪಡೆದುಕೊಂಡಿದ್ದಾರೆ.
ಇದೀಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದ್ದು ಭೂತಾನ್ ಕ್ರಿಕೆಟಿಗ ಮಿಕ್ಯೋ ಡೋರ್ಜಿ ಎಂಎಸ್ ಧೋನಿ ಅವರನ್ನು ಭೇಟಿಯಾದ ಕ್ಷಣದ ಕುರಿತಾಗಿ ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡು ಬರೆದುಕೊಂಡಿದ್ದಾರೆ. ಹೀಗೆ ಎಂಎಸ್ ಧೋನಿ ಜತೆಗಿನ ಫೋಟೋವನ್ನು ಪೋಸ್ಟ್ ಮಾಡಿರುವ ಮಿಕ್ಯೋ ಡೊರ್ಜಿ ಎಂಎಸ್ ಧೋನಿಯಿಂದ ಕಲಿತ ವಿಶೇಷ ಪಾಠದ ಕುರಿತು ಬರೆದುಕೊಂಡಿದ್ದಾರೆ.
"ಫಲಿತಾಂಶದ ಕಡೆ ಹೆಚ್ಚಿನ ಗಮನ ಕೊಡದೆ ಮಾಡುವ ಕೆಲಸದ ಮೇಲೆ ಹೆಚ್ಚಿನ ಗಮನವನ್ನು ಕೊಡಬೇಕು. ಹೀಗೆ ಕೆಲಸದ ಮೇಲೆ ಸರಿಯಾದ ಗಮನವನ್ನು ನೀಡಿದರೆ ಉತ್ತಮ ಫಲಿತಾಂಶ ಖಂಡಿತಾ ಬರುತ್ತದೆ, ಒತ್ತಡಕ್ಕೊಳಗಾಗದೇ ಉತ್ಸಾಹದಿಂದಿರಬೇಕು ಎಂದು ಎಂ ಎಸ್ ಧೋನಿ ಸಲಹೆ ನೀಡಿದ್ದರು ಹಾಗೂ ಈ ಸಲಹೆ ಜೀವನ ಪೂರ್ತಿ ನನ್ನ ಜತೆಗಿರಲಿದೆ" ಎಂದು ಮಿಕ್ಯೋ ಡೊರ್ಜಿ ಬರೆದುಕೊಂಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುವ ಆಸೆ ವ್ಯಕ್ತಪಡಿಸಿದ ಮಿಕ್ಯೋ ಡೊರ್ಜಿ
ಇನ್ನು ಮುಂಬರುವ ಫೆಬ್ರವರಿ ತಿಂಗಳಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು ವಿವಿಧ ದೇಶಗಳ ಹಲವಾರು ಆಟಗಾರರು ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಹಾಗೆಯೇ ಭೂತಾನ್ ತಂಡದ ಈ ಮಿಕ್ಯೋ ಡೊರ್ಜಿ ಕೂಡ ತನ್ನ ಹೆಸರನ್ನು ಈ ಬಾರಿಯ ಐಪಿಎಲ್ ಹರಾಜಿಗೆ ನೋಂದಾಯಿಸಿಕೊಂಡಿದ್ದು ಭೂತಾನ್ ದೇಶದಿಂದ ಐಪಿಎಲ್ ಮೆಗಾ ಹರಾಜಿನಲ್ಲಿ ಭಾಗವಹಿಸುತ್ತಿರುವ ಏಕೈಕ ಕ್ರಿಕೆಟಿಗ ಎಂಬುದರ ಕುರಿತು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುವುದು ತನ್ನ ಕನಸು ಎಂಬುದನ್ನು ಕೂಡ ಇದೇ ಸಮಯದಲ್ಲಿ ಮಿಕ್ಯೋ ಡೊರ್ಜಿ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications