
ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ 2022ರ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ ಪ್ರದರ್ಶನದ ಕುರಿತಾಗಿ ಈಗಾಗಲೇ ಹಲವು ವಿಮರ್ಷೆಗಳು ನಡೆದಿವೆ. ಅನೇಕ ಮಾಜಿ ಆಟಗಾರರು ಟೀಂ ಇಂಡಿಯಾ ಸ್ಕ್ವಾಡ್ ಜೊತೆಗೆ ಪ್ಲೇಯಿಂಗ್ ಇಲೆವೆನ್ ಕುರಿತಾಗಿ ಬೊಟ್ಟು ಮಾಡಿ ತೋರಿಸಿದ್ದಾರೆ.
ಭಾರತದ ಮಾಜಿ ಆಟಗಾರ ವಾಸಿಂ ಜಾಫರ್ ಕೂಡ ಟೀಂ ಇಂಡಿಯಾ ಸ್ಕ್ವಾಡ್ ಆಯ್ಕೆ ಕುರಿತಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಹೆಚ್ಚಿನ ಪ್ರತಿಭೆಗಳಿರುವುದರಿಂದಲೇ ಆಯ್ಕೆ ಸಮಿತಿಗೆ ಗೊಂದಲವುಂಟಾಗಿ ಸರಿಯಾದ ಸ್ಕ್ವಾಡ್ ರಚನೆ ಆಗಿಲ್ಲ ಎಂದು ವಾಸಿಂ ಜಾಫರ್ ಹೇಳಿದ್ದಾರೆ. ದೊಡ್ಡ ಮಟ್ಟದ ಟೂರ್ನಮೆಂಟ್‌ಗಳಲ್ಲಿ ಉತ್ತಮ ಸ್ಕ್ವಾಡ್ ರೂಪಿಸುವಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಎಡವಿದೆ ಎಂದು ಹೇಳಿದ್ದಾರೆ.
ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಚುಟುಕು ಫಾರ್ಮೆಟ್‌ನಲ್ಲಿ ಟೀಂ ಇಂಡಿಯಾ ಸಾಕಷ್ಟು ಪ್ರಯೋಗಗಳನ್ನು ನಡೆಸಿತು. ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ರವಿ ಬಿಷ್ಣೋಯಿ, ಅವೇಶ್ ಖಾನ್ ವಿಶ್ವಕಪ್ ಸ್ಕ್ವಾಡ್‌ನಲ್ಲಿ ಅವಕಾಶ ಪಡೆಯಲು ಪೈಪೋಟಿ ನಡೆಸಿದರು. ಜೊತೆಗೆ ಈ ಪ್ರಯೋಗಗಳಲ್ಲಿ ಓಪನರ್ ಆಗಿ ಸೂರ್ಯಕುಮಾರ್ ಯಾದವ್ ಹಾಗೂ ರಿಷಭ್ ಪಂತ್ ಆಡಿದ್ದನ್ನು ಕಾಣಬಹುದು.
'' ನಾವು ತುಂಬಾ ಗೊಂದಲಕ್ಕೆ ಒಳಗಾದೆವು (ಸರಿಯಾದ ತಂಡದ ಆಯ್ಕೆ ಕುರಿತಾಗಿ) ಮತ್ತು ಈಗದು ಪುನಾರಾವರ್ತನೆಗೊಂಡಿದೆ. 2019ರ ವಿಶ್ವಕಪ್ ಆಗಲಿ, ಕಳೆದ ಟಿ20 ವಿಶ್ವಕಪ್ ಆಗಲಿ, ಏಷ್ಯಾಕಪ್‌ನಲ್ಲೂ ಕೂಡ ನಾವು ಯಾರನ್ನು ಆಡಿಸಬೇಕು, ಯಾರನ್ನು ಕೈ ಬಿಡಬೇಕು ಎಂಬ ಗೊಂದಲದಲ್ಲಿಯೇ ಸ್ಕ್ವಾಡ್ ರಚನೆ ಮಾಡಿದ್ದೇವೆ'' ಎಂದು ವಾಸಿಂ ಜಾಫರ್ ಕ್ರಿಕ್‌ಕ್ರ್ಯಾಕರ್‌ನ ರನ್ ಕೀ ರಣನೀತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಟೀಂ ಇಂಡಿಯಾದ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಇಂಜ್ಯುರಿಯಿಂದಾಗಿ ಟೀಂ ಇಂಡಿಯಾ ಆಯ್ಕೆಯಲ್ಲಿ ಗೊಂದಲ ಶುರುವಾಯಿತು. ಟಿ20 ವಿಶ್ವಕಪ್‌ಗೆ ಆತನ ಬದಲಿ ಆಯ್ಕೆ ಸರಿಯಾಗಿ ಇರದೇ ಇದ್ದಿದ್ದೂ ಕೂಡ ತೊಂದರೆಯಾಗಿದೆ. ಅದ್ರಲ್ಲೂ ಆತನ ಬದಲಿ ಆಯ್ಕೆಯಾಗಿ ಬಂದಂತಹ ಮೊಹಮ್ಮದ್ ಶಮಿ ಕಳೆದೊಂದು ವರ್ಷದಲ್ಲಿ ಟಿ20 ಕ್ರಿಕೆಟ್ ಆಡಿರಲಿಲ್ಲ ಮತ್ತು ಯುಎಇನಲ್ಲಿ ನಡೆದ 2021ರ ಟಿ20 ವಿಶ್ವಕಪ್‌ನಲ್ಲೂ ಅವಕಾಶ ಪಡೆಯಲಿಲ್ಲ.
ಟಿ20 ಅಂತರಾಷ್ಟ್ರೀಯ ತಂಡದಲ್ಲಿ ಅವಕಾಶವನ್ನೇ ಪಡೆಯದ ರವಿಚಂದ್ರನ್ ಅಶ್ವಿನ್‌ರನ್ನು ಭಾರತದ ಸ್ಕ್ವಾಡ್‌ನಲ್ಲಿ ಆಯ್ಕೆ ಮಾಡಿದ್ದು ನಿಜಕ್ಕೂ ಅಚ್ಚರಿಯಾಗಿತ್ತು. ಯುವ ಬೌಲರ್ ರವಿ ಬಿಷ್ಣೋಯಿಗೆ ಸ್ಕ್ವಾಡ್‌ನಲ್ಲಿ ಅವಕಾಶ ಸಿಗದಿರುವುದು ದುರದೃಷ್ಟಕರ. ಏಷ್ಯಾಕಪ್ ಬಳಿಕ ಭಾರತದ ಅತ್ಯಂತ ಯಶಸ್ವಿ ಸ್ಪಿನ್ನರ್ ಯುಜವೇಂದ್ರ ಚಹಾಲ್‌ಗೆ ಒಂದೇ ಒಂದು ಪಂದ್ಯದಲ್ಲೂ ಅವಕಾಶ ನೀಡಲಿಲ್ಲ. ಇಡೀ ವಿಶ್ವಕಪ್‌ನಲ್ಲಿ ಚಹಾಲ್ ಬೆಂಚ್ ಕಾದರು. ಆದ್ರೆ ಅದೇ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಮೇಲೆ ನಂಬಿಕೆ ತೋರಿದ್ದು ಕೂಡ ಭಾರತದ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ.