
ಮುಂಬೈ, ಜೂ. 2: ಐಪಿಎಲ್ ಮ್ಯಾಚ್ ಗೆ ಸಂಬಂಧಿಸಿ ಬೆಟ್ಟಿಂಗ್ ನಲ್ಲಿ ಪಾಲ್ಗೊಂಡಿರುವುದಾಗಿ ಬಾಲಿವುಡ್ ನಟ, ನಿರ್ದೇಶಕ ಮತ್ತು ನಿರ್ಮಾಪಕ ಅರ್ಬಾಜ್ ಖಾನ್ ಅವರು ಒಪ್ಪಿಕೊಂಡಿದ್ದಾರೆ. ಥಾಣೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ವಿಚಾರಣೆ ವೇಳೆ ಬೆಟ್ಟಿಂಗ್ ನಲ್ಲಿ ಪಾಲ್ಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಬೆಟ್ಟಿಂಗ್ ಆರೋಪಕ್ಕೆ ಸಂಬಂಧಿಸಿ ಇಂದು ಅರ್ಬಾಜ್ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ಹೇಳಿಕೆ ದಾಖಲಿಸುವಂತೆ ತಿಳಿಸಲಾಗಿತ್ತು. ಅದರಂತೆ ಅರ್ಬಾಜ್ ತಾನು ಐಪಿಎಲ್ ಬೆಟ್ಟಿಂಗ್ ನಲ್ಲಿ ಭಾಗಿಯಾಗಿರುವುದಾಗಿ ಹೇಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಬೆಟ್ಟಿಂಗ್‌ನಿಂದಾಗಿ ಸುಮಾರಿ ಮೂರು ಕೋಟಿ ರೂಪಾಯಿ ಕಳೆದುಕೊಂಡಿದ್ದಾಗಿಯೂ ಹೇಳಿರುವ ಅರ್ಬಾಜ್ ಖಾನ್ ಅವರು, ಇದೇ ಕಾರಣಕ್ಕೆ ಬುಕ್ಕಿ ಸೋನು ಜಲಾನ್ ತನ್ನನ್ನು ಬೆದರಿಸುತ್ತಿದ್ದಾಗಿಯೂ ಪೊಲೀಸರ ಮುಂದೆ ಹೇಳಿದ್ದಾರೆ.
ಥಾಣೆ ಪೊಲೀಸರು ಅರ್ಬಾಜ್ ಖಾನ್ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ನಡೆದಿದೆ ಎನ್ನಲಾದ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಬಾಜ್ ಖಾನ್ ಅವರಿಗೆ ಈ ಹಿಂದೆ ಥಾಣೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು.
ಇತ್ತೀಚೆಗೆ ಬುಕ್ಕಿ ಸೋನು ಜಹಾನ್ ನನ್ನು ಥಾಣೆ ಪೊಲೀಸರು ವಿಚಾರಣೆಗೊಳಪಡಿಸಿದಾಗ ನಟ ಅರ್ಬಾಜ್ ಖಾನ್ ಅವರ ಹೆಸರನ್ನು ಹೇಳಿದ್ದರು. ಹೀಗಾಗಿ, ಭ್ರಷ್ಟಾಚಾರ ನಿಗ್ರಹ ದಳದ ಮುಂದೆ ಅರ್ಬಾಜ್ ಖಾನ್ ಅವರ ಹೇಳಿಕೆಯನ್ನು ದಾಖಲಿಸಬೇಕಾಗುತ್ತದೆ ಎಂದಿದ್ದರು.
ಮೇ 16ರಂದು ಥಾಣೆ ಕ್ರೈಂ ಬ್ರ್ಯಾಂಚ್ ಪೊಲೀಸರು ಡೊಬಿವಿಲಿಯ ಕಟ್ಟಡವೊಂದರ ಮೇಲೆ ದಾಳಿ ನಡೆಸಿ, ಐಪಿಎಲ್ ಬೆಟ್ಟಿಂಗ್ ಜಾಲವನ್ನು ತುಂಡರಿಸಿ, ಮೂವರನ್ನು ಬಂಧಿಸಿದ್ದರು. ನಂತರ ಜಲಾನ್(41) ಎಂಬಾತನನ್ನು ಕಲ್ಯಾಣ್ ಸೆಷನ್ಸ್ ಕೋರ್ಟ್ ಆವರಣದಲ್ಲಿ ಹಿಡಿಯಲಾಗಿತ್ತು.