IND vs AUS: 3ನೇ ಟೆಸ್ಟ್ ಪಂದ್ಯದಲ್ಲಿ ನಡೆಯಲಿಲ್ಲ ಪವಾಡ; ಆಸ್ಟ್ರೇಲಿಯಾ ವಿರುದ್ಧ ಸೋಲೊಪ್ಪಿಕೊಂಡ ಭಾರತ!

ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡವು ಆತಿಥೇಯ ಭಾರತ ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದು, ಈ ಮೂಲಕ ನಾಲ್ಕು ಪಂದ್ಯಗಳ ಸರಣಿಯನ್ನು 2-1 ಅಂತರಕ್ಕೆ ತಗ್ಗಿಸಿದೆ.
ಸರಣಿಯಲ್ಲಿ ಕೊನೆಗೂ ಭಾರತ ತಂಡದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಆಸ್ಟ್ರೇಲಿಯಾ, ಸರಣಿ ನಿರ್ಣಾಯಕ ಪಂದ್ಯವನ್ನು 9 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿ, ಭಾರತದ ಸರಣಿ ಗೆಲುವಿನ ಅವಕಾಶಕ್ಕೆ ತಣ್ಣೀರೆರಚಿದೆ.
ಆಸ್ಟ್ರೇಲಿಯಾ ತಂಡ ಮೂರನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು ಯಶಸ್ವಿಯಾದ ಕಾರಣ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಅರ್ಹತೆ ಪಡೆದಿದೆ. ಎರಡನೇ ತಂಡ ಯಾವುದಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಅರ್ಹತೆ ಪಡೆಯಬೆಕಾದರೆ ಸರಣಿಯ ಕೊನೆಯ ಟೆಸ್ಟ್ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಅದಾಗದಿದ್ದರೆ, ಭಾರತ ತಂಡವು ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಟೆಸ್ಟ್ ಸರಣಿಯ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ.
ಭಾರತ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡದ ಗೆಲುವಿಗೆ 76 ರನ್‌ಗಳ ಗುರಿ ನೀಡಿತ್ತು. 3ನೇ ದಿನದಾಟದ ಆರಂಭಿಸಿದ ಪ್ರವಾಸಿ ತಂಡ ಮೂರನೇ ದಿನದ ಮೊದಲ ಅವಧಿಯಲ್ಲಿಯೇ ನಿಗದಿತ ಗುರಿ ತಲುಪಿ ಗೆಲುವಿನ ಕೇಕೆ ಹಾಕಿತು.

ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿ ಉಸ್ಮಾನ್ ಖವಾಜಾ (0) ಅವರ ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ ತಂಡಕ್ಕೆ ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲ್ಯಾಬುಶ್ಚಾಗ್ನೆ ಅವರ ಮುರಿಯದ 78 ರನ್‌ಗಳ ಜೊತೆಯಾಟ ಗೆಲುವಿಗೆ ನೆರವಾಯಿತು.
ಟ್ರಾವಿಸ್ ಹೆಡ್ 53 ಎಸೆತಗಳಲ್ಲಿ ಅಜೇಯ 49 ರನ್ ಗಳಿಸಿದರೆ, ಮಾರ್ನಸ್ ಲ್ಯಾಬುಶ್ಚಾಗ್ನೆ 58 ಎಸೆತಗಳಲ್ಲಿ ಅಜೇಯ 28 ರನ್ ಕಲೆಹಾಕಿದರು ಮತ್ತು ಭಾರತದ ಪರ ರವಿಚಂದ್ರನ್ ಅಶ್ವಿನ್ ಏಕೈಕ ವಿಕೆಟ್ ಪಡೆದರು.
ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ನಿರಾಶಾದಾಯಕವಾಗಿ ಬ್ಯಾಟಿಂಗ್ ಮಾಡಿ 109 ರನ್‌ಗಳಿಗೆ ಸರ್ವಪತನ ಕಂಡಿತು. ಈ ವೇಳೆ ಆಸ್ಟ್ರೇಲಿಯಾ ಪರ ಬೌಲಿಂಗ್‌ನಲ್ಲಿ ಮ್ಯಾಥ್ಯೂ ಕುಹ್ನೆಮನ್ 16 ರನ್‌ಗಳಿಗೆ ಚೊಚ್ಚಲ 5 ವಿಕೆಟ್ ಗೊಂಚಲು ಪಡೆದರು. ನಾಥನ್ ಲಿಯಾನ್ 3 ವಿಕೆಟ್ ಮತ್ತು ಟಾಡ್ ಮರ್ಫಿ 1 ವಿಕೆಟ್ ಪಡೆದಿದ್ದರು.

ಇದಕ್ಕುತ್ತರವಾಗಿ ಪ್ರವಾಸಿ ಆಸ್ಟ್ರೇಲಿಯಾ ತಂಡ ಉಸ್ಮಾನ್ ಖವಾಜಾ (60) ಅವರ ಅರ್ಧಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 197 ರನ್‌ಗಳಿಗೆ ಆಲೌಟ್ ಆಯಿತು. ಇನ್ನು ಭಾರತದ ಪರ ಬೌಲಿಂಗ್‌ನಲ್ಲಿ ರವೀಂದ್ರ ಜಡೇಜಾ 78 ರನ್‌ಗಳಿಗೆ 4 ವಿಕೆಟದ ಪಡೆದರೆ, ರವಿಚಂದ್ರನ್ ಅಶ್ವಿನ್ 44 ರನ್‌ಗಳಿಗೆ 3 ವಿಕೆಟ್ ಮತ್ತು ಉಮೇಶ್ ಯಾದವ್ 12 ರನ್‌ಗಳಿಗೆ 3 ವಿಕೆಟ್ ಪಡೆದು ಮಿಂಚಿದರು.
ನಂತರ 88 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಚೇತೇಶ್ವರ ಪೂಜಾರ (59) ಅವರ ಅರ್ಧಶತಕದೊಂದಿಗೆ ಎರಡನೇ ದಿನದಾಟಂತ್ಯಕ್ಕೆ 163 ರನ್‌ಗಳಿಗೆ ಅಲೌಟ್ ಆಯಿತು. ಆಸೀಸ್ ಸ್ಪಿನ್ನರ್ ನಾಥನ್ ಲಿಯಾನ್ 64 ರನ್‌ಗಳಿಗೆ 8 ವಿಕೆಟ್ ಪಡೆದಯ ಜೀವನಶ್ರೇಷ್ಠ ಪ್ರದರ್ಶನ ನೀಡಿದರು.
ಆಸ್ಟ್ರೇಲಿಯಾದ ಗೆಲುವಿಗೆ 76 ರನ್‌ಗಳು ಬೇಕಿತ್ತು, ಅದನ್ನು ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲ್ಯಾಬುಶ್ಚಾಗ್ನೆ ಸೇರಿಕೊಂಡು ಗೆಲುವಿನ ಗಡಿ ಮುಟ್ಟಿಸಿದರು. ಈ ಪಂದ್ಯದಲ್ಲಿ ಒಟ್ಟು 11 ವಿಕೆಟ್ ಪಡೆದ ನಾಥನ್ ಲಿಯಾನ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications