India vs Australia: ಮೊದಲ ಟೆಸ್ಟ್ ಸೋಲಿಗೆ ಕಂಗೆಟ್ಟ ಆಸ್ಟ್ರೇಲಿಯಾ; ತಂಡವನ್ನು ಮತ್ತಷ್ಟು ಕುಗ್ಗಿಸಿದೆ ಈ ಮೂರು ಅಂಶಗಳು!

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಸರಣಿ ಭಾರೀ ನಿರೀಕ್ಷೆಯೊಂದಿಗೆ ಆರಂಭವಾಗಿದೆ. ಆದರೆ ಮೊದಲ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ ಭಾರತ ತಂಡಕ್ಕೆ ಯಾವ ಹಂತದಲ್ಲಿಯೂ ಸವಾಲಾಗಲೇ ಇಲ್ಲ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫಿಲ್ಡಿಂಗ್ ಎಲ್ಲಾ ವಿಭಾಗದಲ್ಲಿಯೂ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ತಂಡ ಭಾರೀ ಅಂತರದಿಂದ ಸೋಲು ಅನುಭವಿಸುವ ಮೂಲಕ ಮುಖಭಂಗಕ್ಕೆ ಒಳಗಾಗಿದೆ.
ಇದೀಗ ಪ್ಯಾಟ್ ಕಮ್ಮಿನ್ಸ್ ಪಡೆ ಎರಡನೇ ಪಂದ್ಯವನ್ನಾಡಲು ದೆಹಲಿಗೆ ಬಂದಿಳಿದಿದ್ದು ಸರಣಿಯಲ್ಲಿ ಕಮ್‌ಬ್ಯಾಕ್ ಮಾಡಲು ಸರ್ವ ಸಿದ್ಧತೆಯನ್ನು ನಡೆಸುತ್ತಿದೆ. ಆದರೆ ಕಳೆದ ಒಂದು ವರ್ಷದಿಂದೀಚೆಗೆ ಸತತವಾಗಿ ತವರಿ ಹಾಗೂ ವಿದೇಶಿ ನೆಲದಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚುತ್ತಿದ್ದ ಆಸ್ಟ್ರೇಲಿಯಾ ಭಾರತದಲ್ಲಿ ಅನುಭವಿಸಿದ ಒಂದೇ ಸೋಲಿನಿಂದಾಗಿ ಕಂಗೆಟ್ಟಂತೆ ತೋರುತ್ತಿದೆ. ಅದರಲ್ಲೂ ತಂಡದಲ್ಲಿರುವ ಮೂರು ಸಮಸ್ಯೆಗಳು ಆಸ್ಟ್ರೇಲಿಯಾಗೆ ಎರಡನೇ ಟೆಸ್ಟ್ ಪಂದ್ಯಕ್ಕೂ ಆತ್ಮವಿಶ್ವಾಸವನ್ನು ಮತ್ತಷ್ಟು ಕುಗ್ಗಿಸಿದೆ.

ಮತ್ತೆ ಲಯ ಕಳೆದುಕೊಂಡ ವಾರ್ನರ್
ಆಸ್ಟ್ರೇಲಿಯಾ ಪರವಾಗಿ ಮೊದಲ ಟೆಸ್ಟ್ ಪಂದ್ಯದಲ್ಲಿ ಬಹುತೇಕ ಎಲ್ಲಾ ದಾಂಡಿಗರು ಕೂಡ ಅತ್ಯಂತ ನೀರಸ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ತಂಡದ ಆರಂಬಿಕ ಆಟಗಾರ ಡೇವಿಡ್ ವಾರ್ನರ್ ಅವರ ಕಳಪೆ ಪ್ರದರ್ಶನ ತಂಡಕ್ಕೆ ದೊಡ್ಡ ಆಘಾತ ನೀಡಿದೆ. ಟೆಸ್ಟ್ ಮಾದರಿಯಲ್ಲಿ ಭಾರತದ ನೆಲದಲ್ಲಿ ಡೇವಿಡ್ ವಾರ್ನರ್ ಸಂಪೂರ್ಣವಾಗಿ ಆತ್ಮವಿಶ್ವಾಸದ ಕೊರತೆ ಅನುಭವಿಸುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಹೀಗಾಗಿ ವಾರ್ನರ್ ಆಡುವ ಬಳಗದಿಂದ ಹೊರಗುಳಿಯಬೇಕು ಎಂಬ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿದೆ. ಇದರ ಜೊತೆಗೆ ಉಪಖಂಡದ ಪಿಚ್‌ನಲ್ಲಿ ಉತ್ತಮವಾಗಿ ಆಡಿರುವ ದಾಖಲೆ ಹೊಂದಿರುವ ಉಸ್ಮಾನ್ ಖವಾಜ ಕೂಡ ಸುಲಭವಾಗಿ ವಿಕೆಟ್ ಕಳೆದುಕೊಂಡಿರುವುದು ಮ್ಯಾನೇಜ್‌ಮೆಂಟ್‌ನ ಚಿಂತೆ ಹೆಚ್ಚಿಸಿದೆ.

ಕೆಲಸಕ್ಕೆ ಬಾರದ ಆಸಿಸ್ ಯೋಜನೆ!
ಈ ಬಾರಿ ಭಾರತ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿ ಯಶಸ್ಸು ಸಾಧಿಸುವ ಆತ್ಮವಿಶ್ವಾಸದಲ್ಲಿ ಆಸ್ಟ್ರೇಲಿಯಾ ತಂಡ ಭಾರತಕೆ ಬಂದಿಳಿದಿತ್ತು. ಸಾಮಾನ್ಯವಾಗಿ ಮಹತ್ವದ ಸರಣಿಗೂ ಮುನ್ನ ಅಭ್ಯಾಸ ಪಂದ್ಯಗಳನ್ನು ಆಡುವ ಸಂಪ್ರದಾಯವಿದ್ದರೂ ಆಸ್ಟ್ರೇಲಿಯಾ ತಂಡ ತಾನು ಯಾವುದೇ ಅಭ್ಯಾಸ ಪಂದ್ಯದಲ್ಲಿ ಆಡದೆಯೇ ನೇರವಾಗಿ ಪಂದ್ಯದಲ್ಲಿ ಆಡುವುದಾಗಿ ಘೋಷಿಸಿಕೊಂಡು ಭಾರತಕ್ಕೆ ಬಂದಿಳಿದಿತ್ತು. ಬೆಂಗಳುರಿನ ಆಲೂರಿನಲ್ಲಿ ಒಂದು ವಾರಗಳ ಶಿಬಿರದಲ್ಲಿ ಭಾಗಿಯಾದ ಆಸ್ಟ್ರೇಲಿಯಾ ತಂಡ ಭಾರತದ ಸ್ಪಿನ್ನರ್ ಆರ್ ಅಶ್ವಿನ್ ಹಾಗೂ ಇತರ ಸ್ಪಿನ್ನರ್‌ಗಳನ್ನು ಎದುರಿಸಲು ವಿಶೇಷ ರಣತಂತ್ರ ಹೂಡಿತ್ತು. ಅದರಲ್ಲೂ ಆರ್ ಶ್ವಿನ್ ಅವರ ಶೈಲಿಯಂತೆಯೇ ಬೌಲಿಂಗ್ ನಡೆಸುವ ಮಹೇಶ್ ಪಥಿರಣಾ ಅವರನ್ನು ಕರೆಸಿ ಬ್ಯಾಟಿಂಗ್ ಅಭ್ಯಾಸ ನಡೆಸಿತ್ತು ಆಸ್ಟ್ರೇಲಿಯಾ. ಆದರೆ ಮೊದಲ ಪಂದ್ಯದಲ್ಲಿ ಈ ಯಾವ ಯೋಜನೆಗಳು ಕೂಡ ಕಾರ್ಯರೂಪಕ್ಕೆ ಬಾರದಿರುವುದು ಆಸ್ಟ್ರೇಲಿಯಾ ತಂಡದ ನಿದ್ದೆಗೆಡಿಸಿದೆ.

ತಾಳ ತಪ್ಪಿದ ನಾಥನ್ ಲಿಯಾನ್
ಭಾರತದ ನೆಲದಲ್ಲಿ ಆಸ್ಟ್ರೇಲಿಯಾ ತಂಡದ ಬಹುದೊಡ್ಡ ಭರವಸೆಯಾಗಿ ಇದ್ದದ್ದು ಅನುಭವಿ ಸ್ಪಿನ್ನರ್ ನಾಥನ್ ಲಿಯಾನ್. ಭಾರತದ ನೆಲದಲ್ಲಿ ಆಸಿಸ್ ಲೆಗ್ ಸ್ಪಿನ್ನರ್ ಅದ್ಭುತ ಯಶಸ್ಸು ಸಾಧಿಸುವ ವಿಶ್ವಾಸ ಮೂಡಿಸಿದ್ದರು. ಆದರೆ ಲಿಯಾನ್ ಮೊದಲ ಪಂದ್ಯದಲ್ಲಿ ನೀಡಿದ ಪ್ರದರ್ಶನ ಅತ್ಯಂತ ನೀರಸವಾಗಿತ್ತು. ಇದು ಆಸ್ಟ್ರೇಲಿಯಾ ತಂಡದ ಆತ್ಮವಿಶ್ವಾಸಕ್ಕೆ ಮತ್ತೊಂದು ದೊಡ್ಡ ಏಟು ನೀಡಿದೆ. ಹೀಗಾಗಿ ಎರಡನೇ ಪಂದ್ಯದ ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾ ತಂಡ ಮಾನಸಿಕವಾಗಿ ಸಾಕಷ್ಟು ಹಿನ್ನಡೆಗೆ ಒಳಗಾಗಿದೆ. ಇದರಿಂದ ಆಸಿಸ್ ಪಡೆ ಯಾವ ರೀತಿಯಾಗಿ ಕಮ್‌ಬ್ಯಾಕ್ ಮಾಡಲಿದೆ ಎಂಬುದು ಈಗ ಉಳಿದಿರುವ ಕುತೂಹಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications