IND vs AUS Test Series: ಭಾರತ ವಿರುದ್ಧ ಆಸ್ಟ್ರೇಲಿಯಾ ಸರಣಿ ಗೆಲ್ಲಲಿದೆ ಎಂದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2023ರ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯ ಗುರುವಾರ, ಫೆಬ್ರವರಿ 9ರಂದು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈಗಾಗಲೇ ಎರಡೂ ತಂಡಗಳು ನಿರಂತರ ಅಭ್ಯಾಸದಲ್ಲಿ ತೊಡಗಿಸಿಕೊಂಡಿವೆ.
ತವರಿನಲ್ಲಿ ಆಡುತ್ತಿರುವ ಭಾರತ ತಂಡವು ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಮೆಚ್ಚಿನ ತಂಡವಾಗಿದೆ. ಆದರೂ, ಪ್ರವಾಸಿ ಆಸ್ಟ್ರೇಲಿಯಾ ತಂಡ ಆತಿಥೇಯರನ್ನು 2-1 ಅಂತರದಿಂದ ಸೋಲಿಸಬಹುದು ಎಂದು ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಜೆಪಿ ಡುಮಿನಿ ಅಂದಾಜಿಸಿದ್ದಾರೆ.
ರಿಷಭ್ ಪಂತ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಪಂದ್ಯ ವಿಜೇತ ಆಟಗಾರರ ಅನುಪಸ್ಥಿತಿ ಭಾರತ ತಂಡಕ್ಕೆ ಹಿನ್ನಡೆಯಾಗಲಿದೆ. ಇದೇ ವೇಳೆ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಮೊಣಕಾಲಿನ ಶಸ್ತ್ರಚಿಕಿತ್ಸೆಯ ನಂತರ ಮತ್ತೆ ಆಟಕ್ಕೆ ಮರಳಲಿದ್ದಾರೆ.
"ನಾನು ಈ ಸರಣಿ ಅತ್ಯಂತ ಪೈಪೋಟಿಯಿಂದ ಕೂಡಿರಲಿದೆ ಎಂದು ಹೇಳುತ್ತೇನೆ ಮತ್ತು ಸರಣಿ ಗೆಲ್ಲಲು ಆಸ್ಟ್ರೇಲಿಯಾ ತಂಡಕ್ಕೆ ಉತ್ತಮ ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ," ಎಂದು SA ಟಿ20 ಲೀಗ್‌ನಲ್ಲಿ ಪಾರ್ಲ್ ರಾಯಲ್ಸ್ ತಂಡದ ಕೋಚ್ ಆಗಿರುವ ಜೆಪಿ ಡುಮಿನಿ ತಿಳಿಸಿದರು.

ಸಿಡ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 195 ರನ್ ಗಳಿಸಿದ ಆಸ್ಟ್ರೇಲಿಯದ ಎಡಗೈ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜಾ ಅವರನ್ನು ಶ್ಲಾಘಿಸಿದ ಜೆಪಿ ಡುಮಿನಿ, "ಆಸ್ಟ್ರೇಲಿಯಾ ತಂಡ 2-1 ಅಂತರದಲ್ಲಿ ಸರಣಿ ಗೆಲ್ಲಲಿದೆ ಮತ್ತು ಉಸ್ಮಾನ್ ಖವಾಜಾ ಸರಣಿಯ ಆಟಗಾರನಾಗುವ ನಿರೀಕ್ಷೆ ಇದೆ," ಎಂದು ಹೇಳಿದರು.
"ತವರಿನ ಪರಿಸ್ಥಿತಿಯಲ್ಲಿ ಭಾರತವನ್ನು ಎಂದಿಗೂ ದುರ್ಬಲ ಎಂದು ಪರಿಗಣಿಸಲು ಸಾಧ್ಯವಿಲ್ಲ. ಭಾರತ ತಂಡದಲ್ಲಿ ಉತ್ತಮ ಟೆಸ್ಟ್ ದಾಖಲೆಯನ್ನು ಹೊಂದಿರುವ ರವಿಚಂದ್ರನ್ ಅಶ್ವಿನ್ ಅವರು ಪ್ರಮುಖ ಆಟಗಾರನಾಗಿದ್ದಾರೆ. ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿಯಂತಹ ಆಟಗಾರರು ಟೆಸ್ಟ್ ಕ್ರಿಕೆಟ್‌ನಲ್ಲಿ ಪಂದ್ಯದ ಗತಿ ಬದಲಾಯಿಸುವ ಆಟಗಾರರಾಗಿದ್ದಾರೆ," ಎಂದು ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಜೆಪಿ ಡುಮಿನಿ ಅಭಿಪ್ರಾಯಪಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications