
ಮುಂಬರುವ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗಾಗಿ ಭಾರತ ತಂಡ ಶುಕ್ರವಾರ, ಫೆಬ್ರವರಿ 3ರಂದು ನಾಗ್ಪುರದಲ್ಲಿ ಅಭ್ಯಾಸ ಆರಂಭಿಸಿದೆ.
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಫೆಬ್ರವರಿ 9ರಂದು ಮುಖಾಮುಖಿಯಾಗಲಿವೆ.
ಹಲವು ಭಾರತೀಯ ಆಟಗಾರರು ಗುರುವಾರವೇ ನಾಗ್ಪುರ ತಲುಪಿದ್ದರು. ಶುಕ್ರವಾರ ಬೆಳಿಗ್ಗೆ ವಿರಾಟ್ ಕೊಹ್ಲಿ ಜಿಮ್‌ನಲ್ಲಿ ಕಸರತ್ತು ನಡೆಸಿದರು. ನಂತರ ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ನೆಟ್‌ನಲ್ಲಿ ಅಭ್ಯಾಸ ನಡೆಸುವುದು ಕಂಡುಬಂದಿದೆ.
ಕಳೆದ ಒಂದು ದಶಕದಿಂದ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು ಸೋತಿಲ್ಲ. 2014-15ರಲ್ಲಿ 1-2ರಿಂದ ಹಿನ್ನಡೆ ಕಂಡ ಭಾರತ, ನಂತರ ಆಸ್ಟ್ರೇಲಿಯಾ ನೆಲದಲ್ಲಿ ಎರಡು ಸರಣಿ, ಭಾರತದಲ್ಲಿ ಒಂದು ಸೇರಿದಂತೆ ಸತತ ಮೂರು ಸರಣಿಗಳನ್ನು ಗೆದ್ದುಕೊಂಡಿದೆ.

ಭಾರತ ತಂಡವು 2000-01ರ ಐಕಾನಿಕ್ ಟೆಸ್ಟ್ ಸರಣಿಯಲ್ಲಿ ಜಯಗಳಿಸಿದ ನಂತರ, ವಿಶೇಷವಾಗಿ ಕಳೆದ ಎರಡು ದಶಕಗಳಲ್ಲಿ, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ರೆಡ್ ಬಾಲ್ ಕ್ರಿಕೆಟ್‌ನಲ್ಲಿ ತೀವ್ರ ಪೈಪೋಟಿಯನ್ನು ನಡೆಸಿವೆ.
ಮತ್ತೊಂದೆಡೆ, ಆಸ್ಟ್ರೇಲಿಯಾ ತಂಡವು ನಾಲ್ಕು ಪಂದ್ಯಗಳ ಹೈ-ವೋಲ್ಟೇಜ್ ಸರಣಿಗಾಗಿ ಬೆಂಗಳೂರಿನ ಅಲೂರಿನಲ್ಲಿ ತರಬೇತಿ ಆರಂಭಿಸಿದೆ. ಸ್ಪಿನ್ನರ್‌ಗಳಿಗೆ ಸಹಾಯ ಮಾಡುವ ಪಿಚ್‌ಗಳಲ್ಲಿ ತಯಾರಿ ನಡೆಸಲು ಆಸ್ಟ್ರೇಲಿಯಾ ಆಲೂರಿಗೆ ಬಂದಿದೆ ಎಂದು ಹೇಳಲಾಗಿದೆ.
ರವಿಚಂದ್ರನ್ ಅಶ್ವಿನ್ ಒಡ್ಡುವ ಬೆದರಿಕೆಯನ್ನು ಎದುರಿಸುವ ಪ್ರಯತ್ನವಾಗಿ ಆಸ್ಟ್ರೇಲಿಯಾವು ಅದೇ ರೀತಿಯ ಬೌಲಿಂಗ್ ಮಾಡುವ ಬೌಲರ್ ಮಹೇಶ್ ಪಿಥಿಯಾ ಆಯ್ಕೆ ಮಾಡಿಕೊಂಡಿದೆ.

2023ರಲ್ಲಿ ಭಾರತ ತಂಡ ಈಗಾಗಲೇ ನಾಲ್ಕು ವೈಟ್‌ಬಾಲ್ ಸರಣಿಗಳನ್ನು ಆಡಿದ್ದು, ಆ ಎಲ್ಲ ಸರಣಿಗಳನ್ನು ಗೆದ್ದುಕೊಂಡಿದೆ. ಆದರೆ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಸವಾಲಿನಿಂದ ಕೂಡಿದೆ. ಈ ಸರಣಿಯಲ್ಲಿ ಗೆದ್ದರೆ ಮಾತ್ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡುವ ಅವಕಾಶ ಸಿಗಲಿದೆ.
ಕಳೆದ ಡಿಸೆಂಬರ್‌ನಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡ ರಿಷಭ್ ಪಂತ್ ಅವರು ಭಾರತ ತಂಡದಲ್ಲಿ ಸ್ಥಾನ ಪಡೆದಿಲ್ಲ. ಅದೇ ರೀತಿ ಬೆನ್ನು ನೋವಿನಿಂದ ಶ್ರೇಯಸ್ ಅಯ್ಯರ್ ಕೂಡ ನಾಗ್ಪುರದ ಮೊದಲ ಟೆಸ್ಟ್ ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ. ಆಲ್‌ರೌಂಡರ್ ರವೀಂದ್ರ ಜಡೇಜಾ ಗುಣಮುಖರಾಗಿದ್ದರೂ, ಪೂರ್ಣಪ್ರಮಾಣದಲ್ಲಿ ಆಗಿದ್ದಾರೆಯೇ ಎಂಬುದು ಖಾತ್ರಿ ಇಲ್ಲ.