
ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆತಿಥೇಯ ಭಾರತ ತಂಡ ಈಗಾಗಲೇ 2-0 ಅಂತರದ ಮುನ್ನಡೆ ಸಾಧಿಸಿದ್ದು, ಇಂದೋರ್‌ನಲ್ಲಿ ಮೂರನೇ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳಲು ಎದುರು ನೋಡುತ್ತದೆ.
ಬುಧವಾರ, ಮಾರ್ಚ್ 1ರಂದು ಇಂದೋರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ ಇದು ವಿಶೇಷ ಪಂದ್ಯವಾಗಿದೆ. ವಿರಾಟ್ ಕೊಹ್ಲಿ ತವರಿನಲ್ಲಿ ತಮ್ಮ ವೃತ್ತಿಜೀವನದ 200ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುತ್ತಿದ್ದಾರೆ.
IND vs AUS 3rd Test: ಭಾರತ vs ಆಸ್ಟ್ರೇಲಿಯಾ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
ವಿರಾಟ್ ಕೊಹ್ಲಿ 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗಿನಿಂದ ಭಾರತ ತಂಡದ ಆಧಾರಸ್ತಂಭ ಆಟಗಾರನಾಗಿದ್ದಾರೆ. ಇದುವರೆಗೆ 199 ಪಂದ್ಯಗಳ 221 ಇನ್ನಿಂಗ್ಸ್‌ಗಳಲ್ಲಿ 58.22 ಸರಾಸರಿಯಲ್ಲಿ 10,829 ರನ್ ಗಳಿಸಿದ್ದಾರೆ. ಇದೇ ವೇಳೆ ತವರಿನಲ್ಲಿ ವಿರಾಟ್ ಕೊಹ್ಲಿ 34 ಶತಕಗಳು ಮತ್ತು 58 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ ಅಜೇಯ 254 ರನ್ ಆಗಿದೆ.

ಇನ್ನು 2020ರಿಂದ ಟೆಸ್ಟ್ ಕ್ರಿಕೆಟ್ ಸ್ವರೂಪದಲ್ಲಿ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾಗಿರುವ ವಿರಾಟ್ ಕೊಹ್ಲಿ ಮೇಲೆ ಸಹಜವಾಗಿ ಒತ್ತಡವಿದೆ. 2020ರಲ್ಲಿ ಆಡಿದ ಮೂರು ಪಂದ್ಯಗಳ ಆರು ಇನ್ನಿಂಗ್ಸ್‌ಗಳಲ್ಲಿ 19.33 ಸರಾಸರಿಯಲ್ಲಿ 1 ಅರ್ಧಶತಕದೊಂದಿಗೆ 116 ರನ್ ಗಳಿಸಿದ್ದಾರೆ.
2021ರಲ್ಲಿ 11 ಪಂದ್ಯಗಳ 19 ಇನ್ನಿಂಗ್ಸ್‌ಗಳಲ್ಲಿ 28.21ರ ಸರಾಸರಿಯಲ್ಲಿ ನಾಲ್ಕು ಅರ್ಧಶತಕಗಳೊಂದಿಗೆ 536 ರನ್ ಕಲೆಹಾಕಿದ್ದರು. 2022ರಲ್ಲಿ ಆಡಿದ 6 ಪಂದ್ಯಗಳ 11 ಇನ್ನಿಂಗ್ಸ್‌ಗಳಲ್ಲಿ 26.50 ಸರಾಸರಿಯೊಂದಿಗೆ 265 ರನ್ ಗಳಿಸಿದ್ದಾರೆ.
2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಆಡಿದ ಮೂರು ಇನ್ನಿಂಗ್ಸ್‌ಗಳಲ್ಲಿ 25.33 ಸರಾಸರಿಯಲ್ಲಿ 76 ರನ್ ಗಳಿಸಿದ್ದಾರೆ.

ಭಾರತ ತಂಡದ ಬ್ಯಾಟಿಂಗ್ ತಾರೆ ತವರಿನಲ್ಲಿ ತಮ್ಮ ಸ್ಮರಣೀಯ 200ನೇ ಪಂದ್ಯದಲ್ಲಿ ಮೂರು ವರ್ಷಗಳ ನಂತರ ಶತಕದ ಬರವನ್ನು ಕೊನೆಗೊಳಿಸಿಲಿದ್ದಾರೆ ಎಂದು ಭಾರತೀಯ ಅಭಿಮಾನಿಗಳು ಕಾತರರಾಗಿದ್ದಾರೆ. ಇದೇ ವೇಳೆ ಜೂನ್ 7ರಿಂದ ಲಂಡನ್‌ನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯುವ ಭಾರತ ತಂಡದ ಅವಕಾಶಗಳನ್ನು ಹೆಚ್ಚಿಸಿದೆ.
ಭಾರತ vs ಆಸ್ಟ್ರೇಲಿಯಾ ಮೂರನೇ ಪಂದ್ಯದ ವರದಿ
ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಹೀಗಾಗಿ ಸ್ಟೀವನ್ ಸ್ಮಿತ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಮೊದಲು ಬೌಲಿಂಗ್ ಮಾಡುತ್ತಿದೆ.
ಇದೇ ವೇಳೆ ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, ನಿರೀಕ್ಷೆಯಂತೆ ಕಳಪೆ ಫಾರ್ಮ್‌ನಲ್ಲಿದ್ದ ಆರಂಭಿಕ ಬ್ಯಾಟರ್ ಕೆಎಲ್ ರಾಹುಲ್ ಬದಲಿಗೆ ಯುವ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ವೇಗಿ ಮೊಹಮ್ಮದ್ ಶಮಿ ಬದಲಿಗೆ ಉಮೇಶ್ ಯಾದವ್ ಸ್ಥಾನ ಪಡೆದುಕೊಂಡಿದ್ದಾರೆ.