
ಮುಂಬರುವ ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿನಗಣನೆ ಆರಂಭವಾಗಿವೆ. ಟೂರ್ನಿ ಸಮೀಪಿಸುತ್ತಿದ್ದಂತೆ ಟೂರ್ನಿಯ ಕುರಿತಾದ ಹಲವಾರು ಚಟುವಟಿಕೆಗಳು ಗರಿಗೆದರಿದ್ದು, ಕಳೆದ ಹಲವಾರು ತಿಂಗಳುಗಳಿಂದಲೂ ದೊಡ್ಡ ಮಟ್ಟದ ಸದ್ದು ಮಾಡುತ್ತಾ ಬಂದಿದೆ. ಇದರ ನಡುವೆಯೇ ಕಳೆದ ಶನಿವಾರ ಹಾಗೂ ಭಾನುವಾರದಂದು ನಡೆದ ಮೆಗಾ ಹರಾಜು ಪ್ರಕ್ರಿಯೆ ಸದ್ಯ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕುರಿತಾದ ಕುತೂಹಲ ಹಾಗೂ ನಿರೀಕ್ಷೆಯ ಮಟ್ಟವನ್ನು ತುಂಬಾ ದೊಡ್ಡ ಮಟ್ಟಕ್ಕೆ ಕೊಂಡೊಯ್ದಿದೆ.
ಈ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 590 ಆಟಗಾರರು ಭಾಗವಹಿಸಿದ್ದು, 203 ಆಟಗಾರರು ಯಶಸ್ವಿಯಾಗಿ ಬಿಕರಿಯಾಗಿದ್ದಾರೆ. ಹೀಗೆ ಯಶಸ್ವಿಯಾಗಿ ಹರಾಜಾದ ಆಟಗಾರರ ಪೈಕಿ 66 ವಿದೇಶಿ ಆಟಗಾರರಿದ್ದರೆ, ಇನ್ನುಳಿದ 137 ಆಟಗಾರರು ಭಾರತೀಯರಾಗಿದ್ದಾರೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಈ ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡ ನಂತರ ತನ್ನ ತಂಡದಲ್ಲಿ ಒಟ್ಟು 25 ಆಟಗಾರರನ್ನು ಹೊಂದಿದ್ದು ತಮ್ಮ ತಂಡದ ಪರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಹಲವಾರು ವರ್ಷ ಉತ್ತಮ ಪ್ರದರ್ಶನವನ್ನು ನೀಡಿದ ಸುರೇಶ್ ರೈನಾ ಮತ್ತು ಫಾಫ್ ಡು ಪ್ಲೆಸಿಸ್ ಅವರನ್ನು ಮೆಗಾ ಹರಾಜಿನಲ್ಲಿ ಖರೀದಿಸಿ ಮತ್ತೆ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ವಿಫಲವಾಗಿದೆ.
ಅದರಲ್ಲಿಯೂ ಸುರೇಶ್ ರೈನಾರನ್ನು ಖರೀದಿಸಲು ಯಾವುದೇ ರೀತಿಯ ಪ್ರಯತ್ನವನ್ನು ಪಡದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ವಿರುದ್ಧ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ. ಇಷ್ಟು ವರ್ಷಗಳ ಕಾಲ ತಂಡಕ್ಕಾಗಿ ಶ್ರಮಿಸಿದ ನಿಷ್ಟಾವಂತ ಆಟಗಾರನನ್ನು ಖರೀದಿಸಲು ಮುಂದಾಗದೇ ಇದ್ದದ್ದು ತಪ್ಪು ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ. ಹೀಗೆ ಸುರೇಶ್ ರೈನಾರನ್ನು ಕಡೆಗಣಿಸಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಶ್ರೀಲಂಕಾ ಮೂಲದ ಮಹೀಶ್ ತೀಕ್ಷಣ ಎಂಬ ಆಟಗಾರನನ್ನು ಖರೀದಿಸಿ ಇದೀಗ ದೊಡ್ಡ ಮಟ್ಟದ ವಿರೋಧವನ್ನು ಎದುರಿಸುತ್ತಿದೆ.
ಹೌದು, 2009ರ ಸಮಯದಲ್ಲಿ ಎಲ್‌ಟಿಟಿಇ ಉಗ್ರರ ವಿರುದ್ಧ ಶ್ರೀಲಂಕಾದಲ್ಲಿ ಶ್ರೀಲಂಕಾ ಮಿಲಿಟರಿ ಪಡೆ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಅಲ್ಲಿನ ತಮಿಳು ಜನರನ್ನು ಕ್ರೂರವಾಗಿ ಹಿಂಸಿಸಿತ್ತು ಹಾಗೂ ಹಲವಾರು ತಮಿಳಿಗರ ಜೀವನವನ್ನೇ ಹಾಳು ಮಾಡಿತ್ತು ಎಂಬ ದೊಡ್ಡ ಮಟ್ಟದ ಆರೋಪವಿದೆ. ಹೀಗೆ ತಮ್ಮ ರಾಜ್ಯದ ಜನರ ಜೀವನವನ್ನು ಹಾಳು ಮಾಡಿದಂತಹ ದೇಶದ ಆಟಗಾರನಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಸ್ಥಾನ ನೀಡಿರುವುದು ನೀಚ ಕೆಲಸ ಎಂದು ತಮಿಳುನಾಡು ಜನತೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ವಿರುದ್ಧ ತಿರುಗಿ ಬಿದ್ದಿದ್ದು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಹಿಷ್ಕರಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ 'ಬಾಯ್ಕಟ್ ಚೆನ್ನೈ ಸೂಪರ್ ಕಿಂಗ್ಸ್' ಎಂದು ಟ್ರೆಂಡ್ ಮಾಡುತ್ತಿದ್ದಾರೆ.
ಈ ಬಾರಿಯ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮಹೀಶ್ ತೀಕ್ಷ್ಣ ಅವರನ್ನು 70 ಲಕ್ಷ ರೂ ಗೆ ಖರೀದಿ ಮಾಡಿತ್ತು. ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ಈತನನ್ನು ಖರೀದಿ ಮಾಡಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುತ್ತಿದ್ದಂತೆ ಆ ಪೋಸ್ಟಿಗೆ ಹಲವಾರು ತಮಿಳಿಗರು ವಿರೋಧವನ್ನು ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಕೂಡಲೇ ಮಹೀಶ್ ತೀಕ್ಷ್ಣ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಹೊರ ಹಾಕಿ ಇಲ್ಲದಿದ್ದರೆ ನಿಮ್ಮ ತಂಡವನ್ನು ಬಹಿಷ್ಕರಿಸುತ್ತೇವೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.