IPL 2024: ಚಿನ್ನಸ್ವಾಮಿಯಲ್ಲೇ ಆರ್‌ಸಿಬಿ ಪಂದ್ಯಗಳು; ನೀರಿನ ಆತಂಕ ದೂರ ಮಾಡಿದ BWSSB
ಬಹು ನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಕೇವಲ ಒಂದು ದಿನವಷ್ಟೇ ಬಾಕಿ ಉಳಿದಿದೆ. ಶ್ರೀಮಂತ ಕ್ರಿಕೆಟ್ ಲೀಗ್‌ಗಾಗಿ ಭಾರತೀಯ ಅಭಿಮಾನಿಗಳು ಕಾತರರಾಗಿದ್ದಾರೆ.
ಶುಕ್ರವಾರ, ಮಾರ್ಚ್ 22ರಂದು ಐಪಿಎಲ್ ಟೂರ್ನಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳ ನಡುವೆ ಸೆಣಸಾಟ ನಡೆಯಲಿದೆ.

ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಕಾದಾಟ ನಡೆಸಲಿದ್ದು, ಈ 'ಸೌಥ್ ಡರ್ಬಿ' ಕಾಳಗ ವೀಕ್ಷಿಸಲು ಎರಡು ತಂಡಗಳ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಇನ್ನು ಈ ಬಾರಿಯ ಬೇಸಿಗೆಯ ಬಿಸಿ ಮತ್ತು ಬೆಂಗಳೂರಿನ ನೀರಿನ ಬಿಕ್ಕಟ್ಟು ಐಪಿಎಲ್ ಟೂರ್ನಿಗೂ ತಟ್ಟಿದ್ದು, ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಪಂದ್ಯಗಳು ನಡೆಯುವುದು ಅನುಮಾನವೆನಿಸಿತ್ತು. ಆದರೆ, ಇದೀಗ ಐಪಿಎಲ್ ಪಂದ್ಯದ ವೇಳೆ ಮೈದಾನ ಹದಗೊಳಿಸಲು ಸಂಸ್ಕರಿಸಿದ ನೀರನ್ನು ಬಳಸಿಕೊಳ್ಳಲು ಕೆಎಸ್‌ಸಿಎ ಮುಂದಾಗಿದೆ.

"ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಕ್ರಿಕೆಟ್ ಪಂದ್ಯಗಳಿಗೆ ಸಂಸ್ಕರಿಸಿದ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು," ಎಂದು ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರನ್ನು ಪೂರೈಸುವಂತೆ ಕೆಎಸ್‌ಸಿಎ ಪದಾಧಿಕಾರಿಗಳು ರಾಮ್ ಪ್ರಸಾತ್ ಮನೋಹರ್ ಅವರನ್ನು ಭೇಟಿ ಮಾಡಿ, ಮನವಿಯನ್ನು ಸಲ್ಲಿಸಿದ್ದರು. ಐಪಿಎಲ್ ಪಂದ್ಯಾವಳಿ ಸಂದರ್ಭದಲ್ಲಿ ದಿನಕ್ಕೆ 75,000 ಲೀಟರ್ ನೀರು ಅವಶ್ಯಕತೆಯಿದ್ದು, ಕಬ್ಬನ್ ಪಾರ್ಕ್‌ನ ತ್ಯಾಜದ ನೀರನ್ನು ಸಂಸ್ಕರಿಸಿ ಕ್ರೀಡಾಂಗಣಕ್ಕೆ ಪೂರೈಸುವಂತೆ ಕೋರಿದ್ದರು.
ಇದಕ್ಕೆ ಸಕಾರಾತ್ಮಕವಾಗಿಯೇ ಸ್ಪಂದಿಸಿದ ಡಾ.ರಾಮ್ ಪ್ರಸಾತ್ ಮನೋಹರ್, ಸದ್ಯ ಬೆಂಗಳೂರು ನಗರದಲ್ಲಿ ನೀರಿನ ಸಮಸ್ಯೆಯಿದೆ. ಕಾವೇರಿ ನೀರು ಮತ್ತು ಕೊಳವೆ ಬಾವಿ ನೀರು ಪೂರೈಸಲು ಸಾಧ್ಯವಿಲ್ಲ.
ಹೀಗಾಗಿ ಸಂಸ್ಕೃರಿಸಿದ ನೀರನ್ನು ಪೂರೈಸಲು ಕ್ರಮ ಕೈಗೊಳ್ಳುತ್ತೇವೆ. ಮುಂದಿನ ದಿನಗಳಲ್ಲೂ ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರನ್ನು ಬಳಸುವುದೇ ಒಳ್ಳೆಯದು ಎಂದು ಡಾ.ರಾಮ್ ಪ್ರಸಾತ್ ಮನೋಹರ್ ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯಗಳು ಯಾವಾಗ?
ಮಾರ್ಚ್ 25ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ಆಡಲಿದೆ. ಬಳಿಕ ಮಾರ್ಚ್ 29ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮತ್ತು ಏಪ್ರಿಲ್ 2ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್‌ಸಿಬಿ ತವರು ಅಂಗಳದಲ್ಲಿ ಸೆಣಸಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications