ಹಂದಿ ಎಂದು ಅಪಮಾನಿಸಿದವರ ಬಗ್ಗೆ ಮಾತನಾಡಿದ ಸರ್ಫರಾಝ್!

ಲಂಡನ್, ಜೂನ್ 26: ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ಪರದಾಡುತ್ತಿರುವ ಪಾಕಿಸ್ತಾನ ತಂಡ ತನ್ನ ಅಭಿಮಾನಿಗಳಿಂದ ಹಿಗ್ಗಾಮಗ್ಗ ಟೀಕೆಗೆ ಗುರಿಯಾಗಿದೆ. ಅದರಲ್ಲೂ ಸೋಷಿಯಲ್ ಮೀಡಿಯಾಗಳಲ್ಲಿ ಪಾಕಿಸ್ತಾನ ತಂಡದ ಆಟಗಾರರನ್ನು ತರಹೇವಾರಿ ರೂಪಗಳಲ್ಲಿ ಲೇವಡಿ ಮಾಡಲಾಗುತ್ತದೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಈ ಕುರಿತಾಗಿ ಮಾತನಾಡಿರುವ ಪಾಕಿಸ್ತಾನ ತಂಡದ ನಾಯಕ ಸರ್ಫರಾಝ್ ಅಹ್ಮದ್, ತಮ್ಮ ತಂಡವನ್ನು ಮತ್ತು ಆಟಗಾರರನ್ನು ಟೀಕಿಸುವುದರಿಂದ ಅಭಿಮಾನಿಗಳು ದೂರ ಉಳಿಯಬೇಕು ಎಂದು ಮನವಿ ಮಾಡಿದ್ದಾರೆ. ಪಾಕಿಸ್ತಾನ ತಂಡ ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧ ಸೋತ ಬಳಿಕವಂತೂ ಪಾಕ್ ಅಭಿಮಾನಿಗಳ ವೈಯಕ್ತಿಕ ನಿಂದನೆ ತಾರಕಕ್ಕೇರಿತ್ತು.
ಇದೇ ವೇಳೆ ಪಾಕಿಸ್ತಾನ ತಂಡದ ಅನುಭವಿ ಆಟಗಾರ ಶೊಯೇಬ್ ಮಲಿಕ್ ಮತ್ತು ವೇಗದ ಬೌಲರ್ ಮೊಹಮ್ಮದ್ ಆಮಿರ್ ಕೂಡ ಪಾಕ್ ಅಭಿಮಾನಿಗಳಿಗೆ ದಯವಿಟ್ಟು ವೈಯಕ್ತಿಕ ನಿಂದನೆ ನಡೆಸದಿರಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅದರಲ್ಲೂ ಪಾಕ್ ತಂಡದ ನಾಯಕ ಸರ್ಫರಾಝ್ ಅಹ್ಮದ್ ವಿರುದ್ಧ ಸೋಷಿಯಲ್ ಮೀಡಿಯಾಗಳಲ್ಲಿ ಹಲವು ಜೋಕ್‌ಗಳು ಮತ್ತೆ ಮೆಮೆಗಳು ಹರಿದಾಡಿದ್ದವು.
ಇನ್ನು ಟೀಕೆಗಳಿಗೆ ಆಟದ ಮೂಲಕವೇ ಉತ್ತರ ನೀಡಿದ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ದಾಖಲಿಸಿ ಸೆಮಿಫೈನಲ್ ರೇಸ್‌ನಲ್ಲಿ ಜೀವಂತವಾಗಿ ಉಳಿದಿದೆ. ಈ ಸಂದರ್ಭದಲ್ಲಿ ನಿಂದನೆ ಮತ್ತು ಟೀಕೆಗಳ ಕುರಿತಾಗಿ ಪಾಕ್ ನಾಯಕ ಸರ್ಫರಾಝ್ ಅಹ್ಮದ್ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಅದರಲ್ಲೂ ಭಾರತ ವಿರುದ್ಧದ ಸೋಲಿನ ಬಳಿಕ ತಮ್ಮನ್ನು ಅಭಿಮಾನಿಯೊಬ್ಬ "ಹಂದಿ" ಎಂದು ಕಡೆದುದ್ದರ ಬಗ್ಗೆಯೂ ಮಾತನಾಡಿದ್ದಾರೆ.
"ಈ ವಿಚಾರವಾಗಿ ನಾನು ಏನನ್ನೂ ಹೇಳಲು ಆಗುವುದಿಲ್ಲ. ಜನರು ಏನೆಂದು ಹೇಳುತ್ತಾರೆ ಎಂಬುದನ್ನು ನಿಯಂತ್ರಿಸುವುದು ನಮ್ಮ ಕೈಲಿಲ್ಲ. ಆಟದಲ್ಲಿ ಸೋಲು ಗೆಲುವು ಒಂದು ಭಾಗ. ಟೂರ್ನಿಯಲ್ಲಿ ಸೋತಿರುವುದು ನಮ್ಮ ತಂಡವೊಂದೇ ಅಲ್ಲ. ಬೇರೆ ತಂಡಗಳು ಕೂಡ ಸೋಲುಂಡಿವೆ,'' ಎಂದು ಹೇಳಿದ್ದಾರೆ.
"ಈ ಹಿಂದೆಯೂ ಹಲವು ಬಾರಿ ಇಂಥದ್ದೇ ಟೀಕೆಗಳನ್ನು ಎದುರಿಸಿದ್ದೇವೆ. ಇವುಗಳಿಂದ ನಮಗೆ ಎಷ್ಟು ನೋವಾಗುತ್ತದೆ ಎಂಬುದನ್ನು ಅವರೇ ತಿಳಿದುಕೊಳ್ಳಬೇಕು. ಜನ ತಮಗೆ ಬೇಕಾದ್ದನ್ನು ಬರೆಯುತ್ತಾರೆ, ಕಾಮೆಂಟ್ ಮಾಡುತ್ತಾರೆ. ಇದು ಆಟಗಾರ ಮಾನಸಿಕ ಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ,'' ಎಂದು ಸರ್ಫರಾಝ್ ಹೇಳಿದ್ದಾರೆ.
ಜೂನ್ 16ರಂದು ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಡಕ್ವತ್ ಲೂಯಿಸ್ ನಿಯಮದನ್ವಯ ಭಾರತದ ವಿರುದ್ಧ 89 ರನ್‌ಗಳ ಸೋಲನುಭವಿಸಿತ್ತು. ಇದು ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಅನುಭವಿಸಿದ ಸತತ 7ನೇ ಸೋಲಾಗಿದೆ.
ಈ ಪಂದ್ಯದ ಬಳಿಕ ಪಾಕಿಸ್ತಾನದ ಅಭಿಮಾನಿಯೊಬ್ಬ ಮಾಡಿದ್ದ ವಿಡಿಯೊ ವೈರಲ್ ಆಗಿತ್ತು. ಸರ್ಫರಾಝ್ ತಮ್ಮ ಪುತ್ರನನ್ನು ಹೊತ್ತು ನಡೆಯುತ್ತಿರುವಾಗ ಅಭಿಮಾನಿಯೊಬ್ಬ ಸೆಲ್ಫಿಗೆ ಪ್ರಯತ್ನಿಸಿ, ಸರ್ಫರಾಝ್ ಅದಕ್ಕೆ ನಿರಾಕರಿಸಿದ ಸಂದರ್ಭದಲ್ಲಿ ವಿಡಿಯೊ ಮಾಡುವ ಮೂಲಕ, 'ಸರ್ಫರಾಝ್ ಭಾಯ್ ನೀವು ಹಂದಿಯಂತೆ ದಪ್ಪ ಇದ್ದೀರ. ಸ್ವಲ್ಪ ಕಡಿಮೆ ಡಯೆಟ್ ಮಾಡಿ' ಎಂದೆಲ್ಲಾ ಹೇಳಿದ್ದ. ಅಭಿಮಾನಿಯ ಈ ವರ್ತನೆಗೆ ಭಾರತದಲ್ಲೂ ಹಲವಾರು ಸೆಲೆಬ್ರಿಟಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ರೀತಿಯ ವರ್ತನೆ ನಿಜಕ್ಕೂ ಸರಿಯಲ್ಲ ಎಂದು ಟೀಕಿಸಿದ್ದರು.
ಸಾಕಷ್ಟು ಟೀಕೆಗಳು ಹರಿದು ಬಂದ ಬಳಿಕ ವಿಡಿಯೊ ಅಪ್‌ಲೋಡ್ ಮಾಡಿದ್ದ ಅಭಿಮಾನಿ ಮತ್ತೊಂದು ವಿಡಿಯೊ ಬಿಡುಗಡೆ ಮಾಡಿ ಕ್ಷಮೆಯಾಚಿಸಿದ್ದಾನೆ. "ಈ ವಿಡಿಯೊ ಹೇಗೆ ಅಪ್‌ಲೋಡ್ ಆಯಿತೆಂಬುದು ನನಗೆ ತಿಳಿದಿಲ್ಲ. ಇದಕ್ಕಾಗಿ ಕ್ಷಮೆಯಾಚಿಸುತ್ತೇನೆ. ನಾನೊಬ್ಬ ಪಾಕಿಸ್ತಾನಿ ಈ ವಿಡಿಯೊದಿಂದ ಆಗುವ ಪರಿಣಾಮದ ಕುರಿತಾಗಿ ನನಗೆ ತಿಳಿದಿರಲಿಲ್ಲ. ಎಲ್ಲರಿಗೂ ನನ್ನ ಮೇಲೆ ಕೋಪವಿದೆ ಎಂಬುದನ್ನು ತಿಳಿದಿದ್ದೇನೆ. ಇದು ಇಷ್ಟು ದೊಡ್ಡ ಸಂಗತಿಯಾಗುತ್ತದೆ ಎಂಬುದನ್ನು ನಾನು ಅಂದಾಜಿಸಿರಲಿಲ್ಲ. ವಿಡೊಯೊ ಡಿಲೀಟ್ ಮಾಡಿದ್ದೇನೆ. ಅವರು ಮಗನೊಂದಿಗೆ ಇದ್ದರು ಎಂಬುದು ನನಗೆ ಗೊತ್ತಿರಲಿಲ್ಲ. ಸಾಧ್ಯವಾದರೆ ದಯವಿಟ್ಟು ಕ್ಷಮಿಸಿಬಿಡಿ,'' ಎಂದು ಅಂಗಲಾಚಿದ್ದಾನೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications