CCL 2023: ಕರ್ನಾಟಕದ ಆರ್ಭಟಕ್ಕೆ ಪಂಜಾಬ್ ದಿ ಶೇರ್ ಧೂಳಿಪಟ: ಸೆಮಿಫೈನಲ್ ಪ್ರವೇಶಿಸಿದ ಬುಲ್ಡೋಜರ್ಸ್

ಶನಿವಾರ ನಡೆದ ಸೆಲಿಬ್ರಿಟಿ ಕ್ರಿಕೆಟ್ ಲೀಗ್ 2023ರ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಪಂಜಾಬ್ ದಿ ಶೇರ್ ತಂಡದ ವಿರುದ್ಧ8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಲೀಗ್ ಹಂತದಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದ ಕರ್ನಾಟಕ ಬುಲ್ಡೋಜರ್ಸ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್‌ಗೆ ಪ್ರವೇಶಿಸಿದೆ.
ಜೋಧ್‌ಪುರದ ಬರ್ಖಾತುಲ್ಲಾಖಾನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ದಿ ಶೇರ್ 10 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಸಾಧಾರಣ 80 ರನ್‌ಗಳನ್ನು ಕಲೆಹಾಕಿತು. ದೇವ್ ಖರೋದ್ 20 ರನ್‌ಗಳಿಸಿದ್ದು ತಂಡದ ಆಟಗಾರನ ಅತ್ಯಧಿಕ ಸ್ಕೋರ್ ಆಗಿತ್ತು. ಅಮಿತ್ ಭಲ್ಲ 19 ರನ್ ಗಳಿಸಿದರೆ, ಹಾರ್ಡಿ ಸಂತು 15 ರನ್ ಗಳಿಸಿದರು.
ಕರಣ್ ಆರ್ಯಾನ್ 2 ಓವರ್ ಬೌಲಿಂಗ್ 10 ರನ್ ನೀಡಿ 2 ವಿಕೆಟ್ ಪಡೆದರು. ಸುನಿಲ್ ರಾವ್, ನಾಯಕ ಪ್ರದೀಪ್ ಬೋಗಾದಿ ಮತ್ತು ಜಯರಾಮ್ ಕಾರ್ತಿಕ್ ತಲಾ ಒಂದು ವಿಕೆಟ್ ಪಡೆದರು. ಕರ್ನಾಟಕದ ಶಿಸ್ತಿನ ಬೌಲಿಂಗ್ ದಾಳಿ ವಿರುದ್ಧ ಪಂಜಾಬ್ ತಂಡದ ಆಟಗಾರರು ಆಡಲು ಪರದಾಡಿದರು.

ಪ್ರದೀಪ್, ಕೃಷ್ಣ, ರಾಜೀವ್ ಅಮೋಘ ಆಟ
ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ಕರ್ನಾಟಕ ಬುಲ್ಡೋಜರ್ಸ್ ಅಮೋಘ ಬ್ಯಾಟಿಂಗ್ ಮಾಡಿತು. ಡಾಲಿಂಗ್ ಕೃಷ್ಣ 16 ಎಸೆತಗಳಲ್ಲಿ 5 ಬೌಂಡರಿ 2 ಭರ್ಜರಿ ಸಿಕ್ಸರ್ ಸಹಿತ 39 ರನ್ ಗಳಿಸಿ ರನೌಟ್ ಆದರು. ನಾಯಕ ಪ್ರದೀಪ್ ಬೋಗಾದಿ ಅಮೋಘ ಅರ್ಧಶತಕ ಗಳಿಸಿ ಮಿಂಚಿದರು. 29 ಎಸೆತಗಳಲ್ಲಿ 5 ಬೌಂಡರಿ 2 ಭರ್ಜರಿ ಸಿಕ್ಸರ್ ಸಹಿತ 172.41 ಸ್ಟ್ರೈಕ್‌ರೇಟ್‌ನಲ್ಲಿ 50 ರನ್ ಗಳಿಸಿ ಔಟಾದರು.
ನಂತರ ಬಂದ ನಿರೂಪ್ ಭಂಡಾರಿ ಅಜೇಯ 10 ರನ್ ಗಳಿಸಿದರೆ, ರಾಜೀವ್ ಹನು ಸ್ಫೋಟಕ ಬ್ಯಾಟಿಂಗ್ ಮಾಡಿದರು. ಕೇವಲ 9 ಎಸೆತಗಳಲ್ಲಿ 366.66 ಸ್ಟ್ರೈಕ್‌ರೇಟ್‌ನಲ್ಲಿ 1 ಬೌಂಡರಿ ಮತ್ತು 4 ಸಿಕ್ಸರ್ ಸಹಿತ ಅಜೇಯ 33 ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿದ ಕರ್ನಾಟಕ ಬುಲ್ಡೋಜರ್ಸ್ 60 ರನ್‌ಗಳ ಮುನ್ನಡೆ ಪಡೆದುಕೊಂಡಿತು.

ಪಂಜಾಬ್‌ಗೆ ಕೇವಲ 40 ರನ್‌ಗಳ ಮುನ್ನಡೆ
ಮೂರನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ಪಂಜಾಬ್ ದಿ ಶೇರ್ 10 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 100 ರನ್ ಗಳಿಸಿತು. ಹಾರ್ಡಿ ಸಂತು 25 ಎಸೆತಗಳಲ್ಲಿ 1 ಬೌಂಡರಿ 3 ಸಿಕ್ಸರ್ ಸಹಿತ 43 ರನ್ ಗಳಿಸಿದರು. ಅನುಜ್ ಖುರಾನ 11 ಎಸೆತಗಳಲ್ಲಿ 21 ರನ್ ಗಳಿಸಿದರು. ಈ ಮೂಲಕ ಕೇವಲ 40 ರನ್‌ಗಳ ಮುನ್ನಡೆ ಪಡೆದುಕೊಂಡಿತು.
ಸುನಿಲ್ ರಾವ್ 2 ಓವರ್ ಗಳಲ್ಲಿ ಕೇವಲ 5 ರನ್ ನೀಡಿ 2 ವಿಕೆಟ್ ಪಡೆದರು. ನಿರೂಪ್ ಭಂಡಾರಿ ಕೂಡ 2 ವಿಕೆಟ್ ಪಡೆದರು. ಚಂದನ್ ಕುಮಾರ್, ಜಯರಾಮ್ ಕಾರ್ತಿಕ್, ಡಾರ್ಲಿಂಗ್ ಕೃಷ್ಣ ತಲಾ ಒಂದು ವಿಕೆಟ್ ಪಡೆದರು.
41 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಕರ್ನಾಟಕ ಬುಲ್ಡೋಜರ್ಸ್ ಕೇವಲ 2.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ರಾಜೀವ್ ಹನು 8 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಮತ್ತು ಒಂದು ಬೌಂಡರಿ ಸಹಿತ 28 ರನ್ ಗಳಿಸಿದರು. ಈ ಗೆಲುವಿನೊಂದಿಗೆ ಕರ್ನಾಟಕ ಅಜೇಯವಾಗಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಎರಡೂ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ಕರ್ನಾಟಕ ಬುಲ್ಡೋಜರ್ಸ್ : ಕೃಷ್ಣ, ಪ್ರದೀಪ್ ಬೋಗಾದಿ (ನಾಯಕ), ರಾಜೀವ್ ಹನು, ಕಿಚ್ಚ ಸುದೀಪ್ (ವಿಕೆಟ್ ಕೀಪರ್), ಗಣೇಶ್, ಸುನೀಲ್ ರಾವ್, ಜಯರಾಮ್ ಕಾರ್ತಿಕ್, ಕರಣ್ ಅರ್ಯಾನ್, ಚಂದನ್ ಕುಮಾರ್, ನಿರೂಪ್ ಭಂಡಾರಿ, ಅರುಣ್ ಬಚ್ಚನ್.
ಪಂಜಾಬ್ ದಿ ಶೇರ್: ಯುವರಾಜ್ ಹನ್ಸ್, ಅಮಿತ್ ಭಲ್ಲಾ, ದೇವ್ ಖರೋಡ್, ಬಿನ್ನು ಧಿಲ್ಲೋನ್ (ನಾಯಕ), ಬಬ್ಬಲ್ ರಾಯ್, ಗವಿ ಚಾಹಲ್, ಹಾರ್ಡಿ ಸಂಧು, ಅನುಜ್ ಖುರಾನಾ (ವಿಕೆಟ್ ಕೀಪರ್), ಸುಯ್ಯಾಂಶ್ ರಾಯ್, ಮಯೂರ್ ಮೆಹ್ತಾ, ದಕ್ಷ್ ಅಜಿತ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications