CCL 2023: ಕೇರಳ ಸ್ಟ್ರೈಕರ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಕರ್ನಾಟಕ ಬುಲ್ಡೋಜರ್ಸ್

ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಕೇರಳ ಸ್ಟ್ರೈಕರ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಆಡಿದ ಎರಡೂ ಪಂದ್ಯಗಳನ್ನು ಗೆದ್ದ ಕರ್ನಾಟಕ ಬುಲ್ಡೋಜರ್ಸ್ ಪಾಯಿಂಟ್ ಪಟ್ಟಿಯಲ್ಲಿ ಭರ್ಜರಿ ಏರಿಕೆ ಕಂಡಿದೆ.
ಸಿಸಿಎಲ್ 20 ಪಂದ್ಯಾವಳಿಯಲ್ಲಿ 4 ಇನ್ನಿಂಗ್ಸ್‌ಗಳಲ್ಲಿ ಆಡಲಾಗುತ್ತದೆ. ಪ್ರತಿ 10 ಓವರ್ ಗಳಿಗೆ ಒಂದು ಇನ್ನಿಂಗ್ಸ್ ಎಂದು ಪರಿಗಣಿಸಲಾಗುತ್ತದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೇರಳ ಸ್ಟ್ರೈಕರ್ಸ್ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಳೆದುಕೊಂಡು 101 ರನ್ ಗಳಿಸಿತು.
ವಿಕೆಟ್ ಕೀಪರ್ ಬ್ಯಾಟರ್ ರಾಜೀವ್ ಪಿಳ್ಳೈ 32 ಎಸೆತಗಳಲ್ಲಿ 4 ಬೌಂಡರಿ 3 ಸಿಕ್ಸರ್ ಸಹಿತ 54 ರನ್ ಸಿಡಿಸುವ ಮೂಲಕ ತಂಡ ಉತ್ತಮ ರನ್ ಗಳಿಸಲು ಸಹಕಾರಿಯಾದರು. ನಾಯಕ ಉನ್ನಿ ಮುಕುಂದನ್ 10 ಎಸೆತಗಳಲ್ಲಿ 19 ರನ್ ಗಳಿಸಿದರು.
ಕರಣ್ ಅರ್ಯಾನ್ 2 ಓವರ್ ಗಳಲ್ಲಿ 20 ರನ್ ನೀಡಿ 2 ವಿಕೆಟ್ ಪಡೆದರು. ಜಯರಾಮ್ ಕಾರ್ತಿಕ್, ಪ್ರದೀಪ್ ಬೋಗಾದಿ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ಕರ್ನಾಟಕ 5 ವಿಕೆಟ್ ಕಳೆದುಕೊಂಡು 124 ರನ್ ಗಳಿಸುವ ಮೂಲಕ 23 ರನ್‌ಗಳ ಮುನ್ನಡೆ ಪಡೆದುಕೊಂಡರು.

ಪ್ರದೀಪ್ ಅರ್ಧಶತಕ
ಕರ್ನಾಟಕ ತಂಡಕ್ಕೆ ಪ್ರದೀಪ್ ಬೋಗಾದಿ ಮತ್ತು ಡಾರ್ಲಿಂಗ್ ಕೃಷ್ಣ ಉತ್ತಮ ಆರಂಭ ಒದಗಿಸಿದರು. ಕೃಷ್ಣ 13 ಎಸೆತಗಳಲ್ಲಿ 20 ರನ್ ಗಳಿಸಿದರೆ, ಪ್ರದೀಪ್ 29 ಎಸೆತಗಳಲ್ಲಿ 7 ಬೌಂಡರಿ 2 ಭರ್ಜರಿ ಸಿಕ್ಸರ್ ಸಹಿತ 59 ರನ್ ಗಳಿಸಿ ಮಿಂಚಿದರು. ರಾಜೀವ್ ಹನು 13, ಕರಣ್ ಅರ್ಯಾನ್ 13 ರನ್ ಗಳಿಸಿದರು.
ನಂತರ ಮೂರನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಕೇರಳ ಸ್ಟ್ರೈಕರ್ಸ್ ತಂಡ 5 ವಿಕೆಟ್ ಕಳೆದುಕೊಂಡು 105 ರನ್ ಗಳಿಸಿತು. ರಾಜೀವ್ ಪಿಳ್ಳೈ 18 ಎಸೆತಗಳಲ್ಲಿ 3 ಬೌಂಡರಿ 3 ಸಿಕ್ಸರ್ ಸಹಿತ 43 ರನ್ ಗಳಿಸಿ ಕೇರಳ ತಂಡಕ್ಕೆ ನೆರವಾದರು.

ರಾಜೀವ್, ಜೆಕೆ ಸ್ಫೋಟಕ ಬ್ಯಾಟಿಂಗ್
23 ರನ್‌ಗಳ ಮುನ್ನಡೆ ಪಡೆದುಕೊಂಡಿದ್ದ ಕರ್ನಾಟಕ ತಂಡಕ್ಕೆ 4ನೇ ಇನ್ನಿಂಗ್ಸ್‌ನಲ್ಲಿ ಗೆಲುವಿಗಾಗಿ 83 ರನ್ ಗಳಿಸಬೇಕಾಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಆರಂಭಿಕರಾಗಿ ಕಣಕ್ಕಿಳಿದ ರಾಜೀವ್ ಹನು ಮತ್ತು ಜಯರಾಮ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ಮಾಡಿದರು.
ರಾಜೀವ್ ಹನು 14 ಎಸೆತಗಳಲ್ಲಿ 3 ಬೌಂಡರಿ 3 ಬೌಂಡರಿ 2 ಸಿಕ್ಸರ್ ಸಹಿತ 34 ರನ್ ಗಳಿಸಿದರು, ಜಯರಾಮ್ ಕಾರ್ತಿಕ್ 13 ಎಸೆತಗಳಲ್ಲಿ 5 ಬೌಂಡರಿ 1 ಸಿಕ್ಸರ್ ಸಹಿತ 31 ರನ್ ಗಳಿಸಿದರು. 6.4 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 86 ರನ್ ಗಳಿಸಿದ ಕರ್ನಾಟಕ ಬುಲ್ಡೋಜರ್ಸ್ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

ಎರಡು ತಂಡಗಳ ಪ್ಲೇಯಿಂಗ್ ಇಲೆವೆನ್
ಕರ್ನಾಟಕ ಬುಲ್ಡೋಜರ್ಸ್: ಪ್ರದೀಪ್ ಬೋಗಾದಿ(ನಾಯಕ), ರಾಜೀವ್ ಹನು, ಕಿಚ್ಚ ಸುದೀಪ್(ವಿಕೆಟ್ ಕೀಪರ್), ಗಣೇಶ್, ಕೃಷ್ಣ, ಜಯರಾಮ್ ಕಾರ್ತಿಕ್, ಕರಣ್ ಆರ್ಯಾನ್, ಚಂದನ್ ಕುಮಾರ್, ನಿರೂಪ್ ಭಂಡಾರಿ, ಪೆಟ್ರೋಲ್ ಪ್ರಸನ್ನ, ಬಚ್ಚನ್.
ಕೇರಳ ಸ್ಟ್ರೈಕರ್ಸ್: ರಾಜೀವ್ ಪಿಳ್ಳೈ(ವಿಕೆಟ್ ಕೀಪರ್), ಉನ್ನಿ ಮುಕುಂದನ್(ನಾಯಕ), ಅರ್ಜುನ್ ನಂದಕುಮಾರ್, ಸಿದ್ಧಾರ್ಥ್ ಮೆನನ್, ಮಣಿಕುಟ್ಟನ್, ವಿಜಯ್ ಯೇಸುದಾಸ್, ಶಫೀಕ್ ರೆಹಮಾನ್, ವಿವೇಕ್ ಗೋಪನ್, ವಿನು ಮೋಹನ್, ಪ್ರಜೋದ್ ಕಲಾಭವನ, ಜೀನ್ ಪಾಲ್ ಲಾಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications