CCL 2023: ಸೆಮಿಫೈನಲ್, ಫೈನಲ್ ಪಂದ್ಯಗಳ ದಿನಾಂಕ ಬದಲಾವಣೆ: ಕರ್ನಾಟಕ - ತೆಲುಗು ವಾರಿಯರ್ಸ್ ಪಂದ್ಯ ಯಾವಾಗ

ಸೆಲಿಬ್ರಿಟಿ ಕ್ರಿಕೆಟ್ ಲೀಗ್‌ನ 2023 ಆವೃತ್ತಿಯ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳ ದಿನಾಂಕ ಮತ್ತು ಸ್ಥಳ ಬದಲಾವಣೆ ಮಾಡಲಾಗಿದೆ. ಮೊದಲೇ ನಿರ್ಧರಿಸಿದಂತೆ ಮಾರ್ಚ್ 18ರಂದು ಸೆಮಿಫೈನಲ್ ಪಂದ್ಯಗಳು ಮತ್ತು ಮಾರ್ಚ್ 19ರಂದು ಫೈನಲ್ ಪಂದ್ಯ ನಡೆಯಬೇಕಿತ್ತು.
ಆದರೆ ಈಗ ಸಿಸಿಎಲ್ ಸೆಮಿಫೈನಲ್ ಪಂದ್ಯಗಳನ್ನು ಮಾರ್ಚ್ 24ರಂದು ನಡೆಯಲಿದ್ದು, ಫೈನಲ್ ಪಂದ್ಯ ಮಾರ್ಚ್ 25ರಂದು ನಡೆಯಲಿದೆ. ಎಲ್ಲಾ ಪಂದ್ಯಗಳು ವಿಶಾಖಪಟ್ಟಣದಲ್ಲಿ ನಡೆಯಲಿದೆ. ಈ ಮೊದಲು ಹೈದರಾಬಾದ್‌ನಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿತ್ತು.
ಹೈದರಾಬಾದ್‌ನಿಂದ ವಿಶಾಖಪಟ್ಟಣಕ್ಕೆ ಪಂದ್ಯಗಳನ್ನು ಸ್ಥಳಾಂತರ ಮಾಡಿದ್ದೇ ಪಂದ್ಯದ ದಿನಾಂಕ ಬದಲಾವಣೆ ಮಾಡಲು ಕಾರಣ ಎನ್ನಲಾಗಿದೆ. ಹೈದರಾಬಾದ್ ಕ್ರೀಡಾಂಗಣ ಐಪಿಎಲ್‌ಗೆ ಸಜ್ಜಾಗುತ್ತಿರುವುದರಿಂದ ಅನಿವಾರ್ಯವಾಗಿ ಸಿಸಿಎಲ್ ಪಂದ್ಯಗಳನ್ನು ವಿಶಾಖಪಟ್ಟಣಕ್ಕೆ ಸ್ಥಳಾಂತರ ಮಾಡಲಾಗಿದೆ, ಮಾರ್ಚ್ 19ರಂದು ವಿಶಾಖಪಟ್ಟಣದಲ್ಲಿ ಭಾರತ-ಆಸ್ಟ್ರೇಲಿಯಾ ಪಂದ್ಯ ನಡೆದ ಕಾರಣ, ಪಂದ್ಯಗಳ ದಿನಾಂಕದಲ್ಲಿ ಕೂಡ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.
ಕರ್ನಾಟಕ ಬುಲ್ಡೋಜರ್ಸ್ ಮೊದಲ ಸ್ಥಾನದಲ್ಲಿದ್ದು ಸೆಮಿಫೈನಲ್‌ಗೆ ಪ್ರವೇಶಿಸಿದರೆ, ಭೋಜ್‌ಪುರಿ ದಬಾಂಗ್ಸ್ 2ನೇ ಸ್ಥಾನದೊಂದಿಗೆ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿತು. ಮುಂಬೈ ಹೀರೋಸ್ ಮತ್ತು ತೆಲುಗು ವಾರಿಯರ್ಸ್ ಮೂರು ನಾಲ್ಕನೇ ಸ್ಥಾನ ಪಡೆಯುವ ಮೂಲಕ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿವೆ.

ಕರ್ನಾಟಕ ಬುಲ್ಡೋಜರ್ಸ್ ಮತ್ತು ತೆಲುಗು ವಾರಿಯರ್ಸ್ ಮುಖಾಮುಖಿ
ಸೆಮಿಫೈನಲ್‌ನ ಎರಡನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತೆಲುಗು ವಾರಿಯರ್ಸ್ ವಿರುದ್ಧ ಸೆಣೆಸಲಿದೆ. ಲೀಗ್ ಹಂತದಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಗೆದ್ದಿರುವ ಕರ್ನಾಟಕ ಬುಲ್ಡೋಜರ್ಸ್ ಈ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದಿರುವ ತೆಲುಗು ವಾರಿಯರ್ಸ್ ಸ್ಥಿರವಾದ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಈ ಪಂದ್ಯ ಮಾರ್ಚ್ 25ರಂದು ಸಂಜೆ 7.00ಕ್ಕೆ ಆರಂಭವಾಗಲಿದೆ.
ಸೆಮಿಫೈನಲ್‌ನ ಮೊದಲ ಪಂದ್ಯದಲ್ಲಿ ಮುಂಬೈ ಹೀರೋಸ್ ಮತ್ತು ಭೋಜ್‌ಪುರಿ ದಬಾಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಆಡಿದ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಭೋಜ್‌ಪುರಿ ದಬಾಂಗ್ಸ್ ಮುಂಬೈ ಹೀರೋಸ್ ತಂಡಕ್ಕಿಂತ ಬಲಿಷ್ಠವಾಗಿದೆ. ಮೊದಲ ಪಂದ್ಯ ಮಧ್ಯಾಹ್ನ 2.30ಕ್ಕೆ ಪಂದ್ಯ ಆರಂಭವಾಗಲಿದೆ.

ಕರ್ನಾಟಕ ತಂಡಕ್ಕೆ ಗೆಲ್ಲುವ ಅವಕಾಶ
ಕರ್ನಾಟಕ ಬುಲ್ಡೋಜರ್ಸ್ ಅತ್ಯುತ್ತಮ ಫಾರ್ಮ್‌ನಲ್ಲಿದೆ. ಸ್ಫೋಟಕ ಬ್ಯಾಟಿಂಗ್ ಮತ್ತು ಆಲ್‌ರೌಂಡರ್ ಗಳ ದಂಡನ್ನೇ ಹೊಂದಿರುವುದು ತಂಡದ ಪ್ರಮುಖ ಶಕ್ತಿಯಾಗಿದೆ. ರಾಜೀವ್ ಹನು, ಡಾರ್ಲಿಂಗ್ ಕೃಷ್ಣ, ಅರುಣ್ ಬಚ್ಚನ್, ಜಯರಾಮ್ ಕಾರ್ತಿಕ್ ಪ್ರಮುಖ ಆಟಗಾರರಾಗಿದ್ದಾರೆ. ನಾಯಕ ಪ್ರದೀಪ್ ಬೊಗಾದಿ ಉತ್ತಮವಾಗಿ ನಾಯಕತ್ವ ವಹಿಸಿಕೊಂಡಿದ್ದರೆ. ಕಿಚ್ಚ ಸುದೀಪ್ ತಂಡಕ್ಕೆ ದೊಡ್ಡ ಶಕ್ತಿಯಾಗಿದ್ದಾರೆ.
ತವರಿನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ತೆಲುಗು ವಾರಿಯರ್ಸ್ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ವಿಶಾಖಪಟ್ಟಣದಲ್ಲಿ ಪಂದ್ಯ ನಡೆಯುವುದರಿಂದ ತೆಲುಗು ವಾರಿಯರ್ಸ್ ತಂಡಕ್ಕೆ ಹೆಚ್ಚಿನ ಬೆಂಬಲ ಸಿಗಲಿದೆ. ಅಕಿಲ್ ಅಕ್ಕಿನೇನಿ, ಪ್ರಿನ್ಸ್ ತಂಡದ ಪ್ರಮುಖ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ.

ಪಂದ್ಯದ ದಿನಾಂಕ, ಸಮಯ, ನೇರಪ್ರಸಾರ ವಿವರ
ಸೆಮಿಫೈನಲ್ ಪಂದ್ಯಗಳು ಮಾರ್ಚ್ 24ರಂದು ಶನಿವಾರ ನಡೆಯಲಿವೆ. ಮೊದಲ ಪಂದ್ಯದಲ್ಲಿ ಮುಂಬೈ ಹೀರೋಸ್ ಮತ್ತು ಭೋಜ್‌ಪುರಿ ದಬಾಂಗ್ಸ್ ಮುಖಾಮುಖಿಯಾಗಲಿದ್ದು ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದೆ. ಎರಡನೇ ಪಂದ್ಯ ಕರ್ನಾಟಕ ಬುಲ್ಡೋಜರ್ಸ್ ಮತ್ತು ತೆಲುಗು ವಾರಿಯರ್ಸ್ ನಡುವೆ ನಡೆಯಲಿದ್ದು, ಸಂಜೆ 7 ಗಂಟೆಗೆ ಆರಂಭವಾಗಲಿದೆ.
ವಿಶಾಖಪಟ್ಟಣ ಕ್ರೀಡಾಂಗಣ ಬ್ಯಾಟಿಂಗ್‌ಗೆ ಹೆಚ್ಚಿನ ಸಹಕಾರಿ ಆಗಿರುವುದರಿಂದ, ಹೈಸ್ಕೋರಿಂಗ್ ಪಂದ್ಯವನ್ನು ನಿರೀಕ್ಷೆ ಮಾಡಬಹುದು. ಸಿಸಿಎಲ್ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಯೂಟ್ಯೂಬ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ. ಕನ್ನಡದಲ್ಲಿ ಪಂದ್ಯದ ನೇರಪ್ರಸಾರವನ್ನು ಜೀ ಪಿಚ್ಚರ್ ವಾಹಿನಿಯಲ್ಲಿ ವೀಕ್ಷಿಸಬಹುದಾಗಿದೆ. ಜೀ5 ಆಪ್ ಚಂದಾದಾರರು ಸಹ ಮೊಬೈಲ್ ಆಪ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications