
ಮುಂಬೈ, ಮೇ 29: ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು ಸೋಮವಾರ ನೀಡಲಾದ 'ಸಿಇಎಟಿ ರೇಟಿಂಗ್ ಅವಾರ್ಡ್ಸ್'ನಲ್ಲಿ ವರ್ಷದ ಅಂತಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
29ರ ಹರೆಯದ ವಿರಾಟ್ ಕಳೆದ ಸೀಸನ್ ನಲ್ಲಿ ಉತ್ತಮ ಬ್ಯಾಟಿಂಗ್ ಸಾಧನೆ ತೋರಿದ್ದಕ್ಕಾಗಿ ಈ ಪ್ರಶಸ್ತಿ ಜಯಿಸಿದ್ದಾರೆ. ಸಮಾರಂಭದಲ್ಲಿ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮ ಪ್ರಶಸ್ತಿ ಸ್ವೀಕರಿಸಿದರು.
ಇನ್ನು ಭಾರತದ ಮತ್ತೊಬ್ಬ ಆಟಗಾರ ಶಿಖರ್ ಧವನ್ ವರ್ಷದ ಅಂತಾರಾಷ್ಟ್ರೀಯ ಬ್ಯಾಟ್ಸ್ಮನ್ ಪ್ರಶಸ್ತಿ ಪಡೆದರೆ, ನ್ಯೂಜಿಲ್ಯಾಂಡ್ ವೇಗಿ ಟ್ರೆಂಟ್ ಬೌಲ್ಟ್ ಅಂತಾರಾಷ್ಟ್ರೀಯ ಬೌಲರ್ ಪ್ರಶಸ್ತಿ ತನ್ನದಾಗಿಸಿಕೊಂಡರು.
ಭಾನುವಾರಷ್ಟೇ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಒಟ್ಟು 21 ವಿಕೆಟ್ ಸಾಧನೆ ಮೂಲಕ ಎಲ್ಲರ ಆಕರ್ಷಿಸಿದ್ದ ಲೆಗ್ ಸ್ಪಿನ್ನರ್ ಅಫ್ಘಾನಿಸ್ತಾನ್ ರಶೀದ್ ಖಾನ್ ಅವರು ವರ್ಷದ ಟಿ20 ಬೌಲರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ನ್ಯೂಜಿಲ್ಯಾಂಡ್ ನ ಆರಂಭಿಕ ಬ್ಯಾಟ್ಸ್ಮನ್ ಕಾಲಿನ್ ಮುನ್ರೋ ವರ್ಷದ ಟಿ20 ಬ್ಯಾಟ್ಸ್ಮನ್, ಐಸಿಸಿ ವನಿತಾ ವರ್ಲ್ಡ್ ಕಪ್ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 171 ರನ್ ಸಿಡಿಸಿ ಭಾರತವನ್ನು ಗೆಲ್ಲಿಸಿ, ಫೈನಲ್ ಗೆ ಪ್ರವೇಶ ದೊರಕಿಸಿದ್ದ ಹರ್ಮನ್ ಪ್ರೀತ್ ಕೌರ್ ವರ್ಷದ ಅತ್ಯುತ್ತಮ ಇನ್ನಿಂಗ್ಸ್ ಸಾಧಕಿ ಪ್ರಶಸ್ತಿ ಪಡೆದುಕೊಂಡರು.
ಕನ್ನಡಿಗ ಮಾಯಾಂಕ್ ಅಗರ್ವಾಲ್ ಅವರು ವರ್ಷದ ರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿ ಗೆದ್ದುಕೊಂಡರೆ, 18ರ ಹರೆಯದ ಶುಭ್ ಮಾನ್ ಗಿಲ್ ಅವರು 19ರ ವಯೋಮಾನದವರಲ್ಲಿನ ವರ್ಷದ ಆಟಗಾರ ಪ್ರಶಸ್ತಿ ತನ್ನದಾಗಿಸಿಕೊಂಡರು.