Champions Trophy 2025: ಐಸಿಸಿ ಖಡಕ್ ಎಚ್ಚರಿಕೆಗೆ ಮಂಡಿಯೂರಿದ ಬಿಸಿಸಿಐ
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಆರಂಭದಿಂದಲೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಡುವೆ ಒಂದಲ್ಲ ಒಂದು ವಿವಾದಗಳು ನಡೆಯುತ್ತಲೇ ಇವೆ. ಇದೀಗ ಈ ಮೆಗಾ ಟೂರ್ನಿಯಲ್ಲಿ ಹೊಸ ವಿವಾದ ಹುಟ್ಟಿಕೊಂಡಿದೆ. ಮತ್ತೊಮ್ಮೆ ಬಿಸಿಸಿಐ ಮತ್ತು ಪಿಸಿಬಿ ನಡುವೆ ವಿವಾದ ಶುರುವಾಗಿದೆ. ಟೀಮ್ ಇಂಡಿಯಾ ಜೆರ್ಸಿ ಮೇಲೆ 'ಪಾಕಿಸ್ತಾನ' ಹೆಸರನ್ನು ಬರೆಯಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಿಂದೇಟು ಹಾಕುತ್ತಿದೆ ಎಂದು ವರದಿಗಳಾಗಿವೆ.
ಟೀಮ್ ಇಂಡಿಯಾದ ಜೆರ್ಸಿ ಮೇಲೆ ಆತಿಥೇಯ ದೇಶ ಪಾಕಿಸ್ತಾನದ ಹೆಸರನ್ನು ಬಿಸಿಸಿಐ ಏಕೆ ಬಳಸುವುದಿಲ್ಲ? ಎಂಬ ಪ್ರಶ್ನೆಗಳು ಪಿಸಿಬಿ ಕಡೆಯಿಂದ ಕೇಳಿಬಂದಿವೆ. ಇದಾದ ನಂತರ ಕ್ರಿಕೆಟ್ ಗಲ್ಲಿಗಳಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ನಡೆಸುತ್ತಿವೆ. ಇದರ ನಡುವೆ ಟೀಮ್ ಇಂಡಿಯಾ ಡ್ರೆಸ್ ಕೋಡ್ ಬಗ್ಗೆ ಬಿಸಿಸಿಐ ತುಟಿ ಬಿಚ್ಚಿದೆ.

ಚಾಂಪಿಯನ್ ಟ್ರೋಫಿ ಲೋಗೋ ಆತಿಥೇಯ ದೇಶದ ಹೆಸರಿನಲ್ಲಿರಲಿದೆ. ಹೀಗಾಗಿ ಚಾಂಪಿಯನ್ ಟ್ರೋಫಿ ಲೋಗೋದಲ್ಲಿ ಪಾಕಿಸ್ತಾನದ ಹೆಸರಿದೆ. ಆದರೆ ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ತನ್ನ ತಂಡದ ಜೆರ್ಸಿ ಮೇಲೆ ಪಾಕಿಸ್ತಾನ ಎಂದು ಬರೆಯಲು ಬಿಸಿಸಿಐ ಅಕ್ಷೇಪಿಸಿದೆ ಎಂದು ವರದಿಗಳು ಹೇಳಿದ್ದವು.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಯಮಗಳ ಪ್ರಕಾರ, ಯಾವುದೇ ಐಸಿಸಿ ಟೂರ್ನಿಯ ಅಧಿಕೃತ ಲೋಗೋ ಆತಿಥೇಯ ದೇಶದ ಹೆಸರನ್ನು ಹೊಂದಿರುತ್ತದೆ. ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಪಾಕಿಸ್ತಾನದಲ್ಲಿ ಮಾತ್ರ ನಡೆಯಬೇಕಿತ್ತು. ಆದರೆ ಭಾರತ ತಂಡವು ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದ ನಂತರ, ಐಸಿಸಿ ಈ ಮೆಗಾ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ನಿರ್ಧರಿಸಿತು.
ಬಿಸಿಸಿಐ ಕಾರ್ಯದರ್ಶಿ ಹೇಳಿದ್ದೇನು?
ಟೀಮ್ ಇಂಡಿಯಾದ ಜೆರ್ಸಿಯಲ್ಲಿ ಪಾಕಿಸ್ತಾನ ಹೆಸರನ್ನು ಬಳಸುವುದರ ಬಗ್ಗೆ ಉಂಟಾಗಿರುವ ಗೊಂದಲಕ್ಕೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪಷ್ಟನೆ ನೀಡಿದ್ದಾರೆ. ಟೀಮ್ ಇಂಡಿಯಾದ ಅಧಿಕೃತ ಜೆರ್ಸಿಯಲ್ಲಿ ಪಾಕಿಸ್ತಾನದ ಹೆಸರನ್ನು ಇಡಲು ಮಂಡಳಿಯು ಆಕ್ಷೇಪಿಸಿದೆ ಎಂಬ ವದಂತಿಗಳನ್ನು ದೇವಜಿತ್ ಸೈಕಿಯಾ ತಳ್ಳಿಹಾಕಿದ್ದಾರೆ. ಮಾಧ್ಯಮಗಳಿಗೆ ಈ ಕುರಿತು ಮಾತನಾಡಿರುವ ಅವರು, 'ಚಾಂಪಿಯನ್ಸ್ ಟ್ರೋಫಿ ಸಮಯದಲ್ಲಿ ಜೆರ್ಸಿಗೆ ಸಂಬಂಧಿಸಿದ ಐಸಿಸಿಯ ಪ್ರತಿಯೊಂದು ನಿಯಮವನ್ನು ಬಿಸಿಸಿಐ ಅನುಸರಿಸುತ್ತದೆ. ಲೋಗೋ ಮತ್ತು ಡ್ರೆಸ್ ಕೋಡ್ ಬಗ್ಗೆ ಇತರ ತಂಡಗಳು ಏನೇ ಮಾಡಿದರೂ, ನಾವು ಐಸಿಸಿ ನಿಯಮಗಳನ್ನು ಅಕ್ಷರಶಃ ಅನುಸರಿಸುತ್ತೇವೆ ಎಂದಿದ್ದಾರೆ.
ಫೆಬ್ರವರಿ 19 ರಿಂದ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲಾಗಿದೆ. ಪಾಕಿಸ್ತಾನ ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 19 ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಟೀಮ್ ಇಂಡಿಯಾ ಫೆಬ್ರವರಿ 20 ರಿಂದ ಬಾಂಗ್ಲಾದೇಶ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಹೈಲ್ಟೋಜ್ ಪಂದ್ಯವು ದುಬೈನಲ್ಲಿ ಫೆಬ್ರವರಿ 23 ರಂದು ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications