ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತನ್ನ ತಾತ್ಕಾಲಿಕ ತಂಡವನ್ನು ಪ್ರಕಟಿಸಿದೆ. ಪಾಕಿಸ್ತಾನ ತಾತ್ಕಾಲಿಕ ತಂಡದಲ್ಲಿ ಸ್ಥಾನ ಪಡೆದಿರುವ ಆಟಗಾರರ ಪಟ್ಟಿಯನ್ನು ಪಿಸಿಬಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ಗೆ (ಐಸಿಸಿ) ಸಲ್ಲಿಸಿದೆ. ಮುಂದಿನ ಫೆಬ್ರವರಿ 13 ರವರೆಗೆ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಪ್ರಕಟಿಸಿರುವ ತಂಡಗಳಲ್ಲಿ ಬದಲಾವಣೆಗಳನ್ನು ಮಾಡಲು ಪ್ರತಿ ತಂಡಕ್ಕೂ ಅವಕಾಶವಿದೆ. ಇದಕ್ಕೂ ಮೊದಲು, ಎಲ್ಲಾ 8 ತಂಡಗಳು ತಮ್ಮ ತಂಡದಲ್ಲಿ ಬದಲಾವಣೆಗಳನ್ನು ಮಾಡಬಹುದು.
ಪಾಕಿಸ್ತಾನ ಕೂಡ ತನ್ನ ತಂಡದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ. ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡದ ನಾಯಕರಾಗಿದ್ದಾರೆ. ಇದಲ್ಲದೆ, ಬಾಬರ್ ಅಜಮ್ ಹಾಗು ತಂಡದಿಂದ ಹೊರಗಿದ್ದ ಫಖರ್ ಜಮಾನ್ ಕೂಡ ವಾಪಸಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಾಯಗೊಂಡಿದ್ದ ಸೈಮ್ ಅಯೂಬ್ ಅವರನ್ನೂ ತಂಡದಲ್ಲಿ ಇರಿಸಲಾಗಿದೆ.

ಪಾಕಿಸ್ತಾನ ತನ್ನ ತಾತ್ಕಾಲಿಕ ಪಟ್ಟಿಯಲ್ಲಿ 19 ಆಟಗಾರರ ಹೆಸರನ್ನು ಐಸಿಸಿಗೆ ಸಲ್ಲಿಸಿದೆ. ಪಾಕಿಸ್ತಾನ ಅಂತಿಮ ತಂಡಕ್ಕೆ ಒಟ್ಟು 15 ಆಟಗಾರರನ್ನು ಆಯ್ಕೆ ಮಾಡಬೇಕಾಗುತ್ತದೆ. ಪಾಕಿಸ್ತಾನದ ಈ ಪಟ್ಟಿಯಲ್ಲಿ ವೇಗದ ಬೌಲರ್‌ಗಳಾದ ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ನಸೀಮ್ ಶಾ ಸ್ಥಾನ ಪಡೆದಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೆ ಅಧಿಕೃತ ತಂಡವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇನ್ನೂ ಪ್ರಕಟಿಸಿಲ್ಲ. ಗಾಯದ ಸಮಸ್ಯೆಯಿಂದ ಸಾಯಿಮ್ ಅಯೂಬ್ ತಂಡದಿಂದ ಹೊರಗುಳಿಯಬಹುದು. ಆದರೆ ಅವರ ಬದಲಿಗೆ ತಂಡಕ್ಕೆ ಸೇರ್ಪಡೆಗೊಂಡಿರುವ ಎಡಗೈ ಆರಂಭಿಕ ಬ್ಯಾಟರ್ ಫಖರ್ ಜಮಾನ್ ಫಿಟ್‌ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ. ತಂಡದ ಸ್ಥಾನವನ್ನು ಪಡೆಯಲು ಅವರು ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕಾಗಿದೆ.
ಮೊಹಮ್ಮದ್ ರಿಜ್ವಾನ್ (ನಾಯಕ ಮತ್ತು ವಿಕೆಟ್ ಕೀಪರ್), ಬಾಬರ್ ಅಜಮ್, ಸಯೀಮ್ ಅಯೂಬ್, ತಯ್ಯಬ್ ತಾಹಿರ್, ಇರ್ಫಾನ್ ಖಾನ್ ನಿಯಾಜಿ, ಸುಫಿಯಾನ್ ಮಕಿಮ್, ಮೊಹಮ್ಮದ್ ಹಸ್ನೇನ್, ಅಬ್ದುಲ್ಲಾ ಶಫೀಕ್, ನಸೀಮ್ ಶಾ, ಉಸ್ಮಾನ್ ಖಾನ್, ಶಾಹೀನ್ ಶಾ ಅಫ್ರಿದಿ, ಹ್ಯಾರಿಸ್ ರೌಫ್, ಕಮ್ರಾನ್ ಅಹ್ಮದ್, ಕಮ್ರಾನ್ ಅಹ್ಮದ್ ಅಲಿ ಅಗಾ, ಇಮಾಮ್-ಉಲ್-ಹಕ್, ಫಖರ್ ಜಮಾನ್, ಹಸಿಬುಲ್ಲಾ ಮತ್ತು ಅಬ್ಬಾಸ್ ಅಫ್ರಿದಿ.
ವರದಿಗಳ ಪ್ರಕಾರ, ಪಾಕಿಸ್ತಾನದ ಚಾಂಪಿಯನ್ಸ್ ಟ್ರೋಫಿಗೆ ಅಂತಿಮ ತಂಡವನ್ನು ಫೆಬ್ರವರಿ 10 ರಂದು ಪ್ರಕಟಿಸುವ ನಿರೀಕ್ಷೆಯಿದೆ. ಅಂತಿಮ ತಂಡದಲ್ಲಿ ಹಲವು ಬದಲಾವಣೆಗಳಿರಬಹುದು. ಅಬ್ದುಲ್ಲಾ ಶಫೀಕ್ ಮತ್ತು ಉಸ್ಮಾನ್ ಖಾನ್ ಅಂತಿಮ ತಂಡದ ಭಾಗವಾಗಿರುವ ಸಾಧ್ಯತೆ ಕಡಿಮೆಯಿದೆ.