ಮುಂದಿನ ವರ್ಷದ ಆರಂಭದಲ್ಲಿ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಈ ವೇಳೆ ಭಾರತ, ಪಾಕಿಸ್ತಾನ ಪ್ರವಾಸ ಬೆಳೆಸುತ್ತದೋ ಇಲ್ಲವೋ ಎನ್ನುವ ಬಗ್ಗೆ ಇನ್ನು ಯಾವುದೇ ಸ್ಪಷ್ಟ ಚಿತ್ರಣವಿಲ್ಲ. ಅಲ್ಲದೆ ಈ ಮೆಗಾ ಟೂರ್ನಿಗೆ ಇನ್ನು ನೂರುಕ್ಕು ಕಡಿಮೆ ದಿನಗಳು ಮಾತ್ರ ಬಾಕಿ ಇದ್ದು, ಈ ಅವಧಿಯಲ್ಲಿ ಐಸಿಸಿ ಟೂರ್ನಿಯ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಬೇಕಿತ್ತು. ಆದರೆ ಕೆಲವು ಗೊಂದಲಗಳ ಕಾರಣದಿಂದ ಬಿಡುಗಡೆ ಮಾಡಿಲ್ಲ. ಈಗ ಈ ಸಂಬಂಧ ಮಹತ್ವದ ಮೀಟಿಂಗ್ ನಡೆಸಲು ಮುಂದಾಗಲಿದೆ.
ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಐಸಿಸಿ ಮಹತ್ವದ ಸಭೆಯನ್ನು ಇದೇ ಶುಕ್ರವಾರ (ನ.29) ರಂದು ಕರೆದಿದೆ ಎಂದು ತಿಳಿದು ಬಂದಿದೆ. ಈ ಸಭೆಯಲ್ಲಿ ಚಾಂಪಿಯನ್ಸ್ ಟ್ರೋಫಿಯ ವೇಳಾ ಪಟ್ಟಿಯನ್ನು ಸಹ ಚರ್ಚಿಸಲಾಗುವುದು. ಐಸಿಸಿಯ ಮಹತ್ವದ ಟೂರ್ನಿ ಮುಂದಿನ ವರ್ಷ ಫೆಬ್ರವಾರಿಯಲ್ಲಿ ನಡೆಯಲಿದೆ. ಆದರೆ ಈ ಟೂರ್ನಿಯ ಅಧಿಕೃತ ವೇಳಾ ಪಟ್ಟಿ ಮಾತ್ರ ಇನ್ನು ಬಿಡುಗಡೆ ಆಗಿಲ್ಲ.

ಶುಕ್ರವಾರ ನಡೆಯುವ ಮಹತ್ವದ ಸಭೆಯಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಗ್ಗೆ ಸದಸ್ಯರ ಅಭಿಪ್ರಾಯವನ್ನು ಕೇಳಲಿದೆ. ಅಲ್ಲದೆ ಈ ಸಮಸ್ಯೆಯ ಪರಿಹಾರಕ್ಕಾಗಿ ಮತಯಾಚನೆ ಸಹ ನಡೆಸಬಹುದು ಎಂದು ತಿಳಿದು ಬಂದಿದೆ. ಸಭೆಯಲ್ಲಿ 12 ಪೂರ್ಣ ರಾಷ್ಟ್ರಗಳು, ಮೂರು ಅಸೋಸಿಯೇಟ್ಸ್ ಪ್ರತಿನಿಧಿಗಳು ಹಾಜರಿರಲಿದ್ದಾರೆ. ಜೊತೆಗೆ ಐಸಿಸಿ ಸಿಇಒ ಹಾಗೂ ಅಧ್ಯಕ್ಷರು ಸಹ ಉಪಸ್ಥಿತರಿರುವ ಸಾಧ್ಯತೆ ಇದೆ.
ಭಾರತದ ಕೇಂದ್ರ ಸರ್ಕಾರ ತನ್ನ ತಂಡವನ್ನು ಪಾಕ್‌ಗೆ ಕಳುಹಿಸಲು ಅನುಮತಿ ನೀಡಲು ನಿರಾಕರಿಸಿದೆ ಎಂದು ವರದಿಗಳಿಂದ ತಿಳಿದು ಬಂದಿದೆ. ಇತ್ತ ಪಾಕ್ ಸಹ ತನ್ನ ಕೈಯಲ್ಲಿರುವ ಚಿನ್ನದಂತಹ ಅವಕಾಶವನ್ನು ಬಿಟ್ಟುಕೊಡಲು ತಯಾರಿಲ್ಲ. ಭಾರತ ಈ ಟೂರ್ನಿಯನ್ನು ಏಷ್ಯಾ ಕಪ್ ರೀತಿ ಹೈ ಬ್ರೀಡ್ ಮಾದರಿಯಲ್ಲಿ ನಡೆಸಲು ತಿಳಿಸಿದೆ. ಭಾರತ ಕೊನೆಯ ಬಾರಿಗೆ 2008ರಲ್ಲಿ ಪಾಕಿಸ್ತಾನ ಪ್ರವಾಸವನ್ನು ಕೈಗೊಂಡಿತ್ತು. ಇದಾದ ಬಳಿಕ ಕ್ರಮೇಣ ಉಭಯ ತಂಡಗಳ ನಡುವಿನ ದ್ವಿಪಕ್ಷೀಯ ಸರಣಿಯೂ ನಿಂತು ಹೋಗಿವೆ.
ಪಾಕಿಸ್ತಾನ ಮಾತ್ರ ಭಾರತಕ್ಕೆ 2008ರ ಬಳಿಕ ಹಲವು ಬಾರಿ ಪ್ರವಾಸವನ್ನು ಮಾಡಿದೆ. ಭಾರತದಲ್ಲಿ ನಡೆದಿದ್ದ 2011 ಏಕದಿನ ವಿಶ್ವಕಪ್ ವೇಳೆ, 2016 ಟಿ20 ವಿಶ್ವಕಪ್ ವೇಳೆ, ಇತ್ತೀಚಿಗೆ ನಡೆದಿದ್ದ 2023ರ ಏಕದಿನ ವಿಶ್ವಕಪ್ ವೇಳೆಯೂ ಪಾಕ್ ತಂಡ ಭಾರತದ ಪ್ರವಾಸವನ್ನು ಬೆಳಿಸಿತ್ತು. ಚಾಂಪಿಯನ್ಸ್ ಟ್ರೋಫಿ ಮೆಗಾ ಟೂರ್ನಿಯನ್ನು ಹೈ ಬ್ರಿಡ್ ಮಾದರಿಯಲ್ಲಿ ನಡೆಸುವಂತೆ ಬಿಸಿಸಿಐ ಪಟ್ಟು ಹಿಡಿದಿದೆ. ಒಂದು ವೇಳೆ ಈ ನಿರ್ಧಾರಕ್ಕೆ ಸೈ ಎಂದಿದ್ದೇ ಆದಲ್ಲಿ ಟುರ್ನಿಯನ್ನು, ಯುಎಇ, ದಕ್ಷಿಣ ಆಫ್ರಿಕಾ, ಶ್ರೀಲಂಕಾದಲ್ಲಿ ನಡೆಸುವ ಸಾಧ್ಯತೆ ಇದೆ.
ಒಂದು ವೇಳೆ ಭಾರತ ಪಾಕಿಸ್ತಾನ ಪ್ರವಾಸವನ್ನು ಬೆಳೆಸುವಲ್ಲಿ ವಿಫಲವಾದಲ್ಲಿ ಪಾಕಿಸ್ಥಾನ ಕ್ರಿಕೆಟ್ ಬೋರ್ಡ್‌ಗೆ ನಷ್ಟವಾಗಲಿದೆ ಎಂದು ಮಾಜಿ ವೇಗಿ ಶೋಯಿಬ್ ಅಖ್ತರ್ ಹೇಳಿದ್ದಾರೆ. ಅಲ್ಲದೆ ಇದರಿಂದ 100 ಮಿಲಿಯನ್ ಡಾಲರ್ ನಷ್ಟು ನಷ್ಟವನ್ನು ಎದುರಿಸಬೇಕಾಗಬಹುದು ಎಂದು ತಿಳಿಸಿದ್ದಾರೆ.