2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆತಿಥ್ಯವು ಪಾಕಿಸ್ತಾನ ರಾಷ್ಟ್ರಕ್ಕೆ ದೊರೆತಿದ್ದು, ಈಗಿನಿಂದಲೇ ಸಿದ್ಧತೆಗಳನ್ನು ಆರಂಭಿಸಿದೆ. ಆದರೆ ಭಾರತ ಕ್ರಿಕೆಟ್ ತಂಡವು ನೆರೆಯ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳುವುದೇ ಎಂಬ ಅನುಮಾನಗಳು ದಟ್ಟವಾಗಿವೆ.
ಇದರ ನಡುವೆಯೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಒಂದು ಹೆಜ್ಜೆ ಮುಂದೆ ಹೋಗಿ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಪಂದ್ಯಗಳಿಗೆ ಏಕೈಕ ಸ್ಥಳವನ್ನು ಮಾತ್ರ ನಿಗದಿಪಡಿಸಿದೆ ಮತ್ತು ಅದು ಲಾಹೋರ್ ಆಗಿದೆ.

ಐಸಿಸಿ ಏಕದಿನ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಮತ್ತು ಫೆಬ್ರವರಿ 2025ರಲ್ಲಿ ಲಾಹೋರ್ ಹೊರತುಪಡಿಸಿ, ಕರಾಚಿ ಮತ್ತು ರಾವಲ್ಪಿಂಡಿ ಇತರ ಎರಡು ಗೊತ್ತುಪಡಿಸಿದ ಸ್ಥಳಗಳಾಗಿವೆ.
ಆದರೆ, ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಗಡಿ ಬಿಕ್ಕಟ್ಟು ಮತ್ತು ರಾಜಕೀಯ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು, ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸುವ ಬಗ್ಗೆ ಕೆಲವು ಆತಂಕಗಳಿವೆ.

2023ರಲ್ಲಿ ನಡೆದ ಏಷ್ಯಾ ಕಪ್‌ಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಬಿಸಿಸಿಐ ನಿರಾಕರಿಸಿತ್ತು. ಹೀಗಾಗಿ ಗಡಿಯಿಂದ ಸ್ಥಳದ ಅಂತರವನ್ನು ಗಮನದಲ್ಲಿಟ್ಟುಕೊಂಡು ಪಿಸಿಬಿ ಭಾರತದ ಪಂದ್ಯಗಳಿಗೆ ಲಾಹೋರ್ ಮಾತ್ರ ಆಯ್ಕೆ ಮಾಡಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಲಾಹೋರ್‌ನಲ್ಲಿ ಭಾರತ ತನ್ನ ಪಂದ್ಯಗಳನ್ನು ಆಡಿದರೆ, ಭಾರತೀಯ ಅಭಿಮಾನಿಗಳು ತಮ್ಮ ತಂಡದ ಪಂದ್ಯಗಳನ್ನು ಹೆಚ್ಚು ತೊಂದರೆಯಿಲ್ಲದೆ ವೀಕ್ಷಿಸಲು ವಾಘಾ ಗಡಿಯನ್ನು ದಾಟಬಹುದು. ಅಲ್ಲದೆ, ಪ್ರಯಾಣದ ತೊಂದರೆಗಳನ್ನು ತಪ್ಪಿಸಲು ಕೇವಲ ಒಂದು ಸ್ಥಳವನ್ನು ಆಯ್ಕೆ ಮಾಡಲಾಗಿದೆ.
ಕುತೂಹಲಕಾರಿ ಅಂಶದಲ್ಲಿ, ಪಾಕಿಸ್ತಾನವು ಚಾಂಪಿಯನ್ಸ್ ಟ್ರೋಫಿಯ ಹಾಲಿ ಚಾಂಪಿಯನ್ ಆಗಿದ್ದು, 2017ರಲ್ಲಿ ನಡೆದ ಫೈನಲ್‌ನಲ್ಲಿ ಭಾರತ ತಂಡವನ್ನು ಸೋಲಿಸಿದ ನಂತರ ಪಂದ್ಯಾವಳಿಯನ್ನು ಗೆದ್ದುಕೊಂಡಿತ್ತು.
ಈ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯು ಪಾಕಿಸ್ತಾನದಲ್ಲಿ ನಡೆದರೆ, ಆ ದೇಶವು ಇದನ್ನು ಆಯೋಜಿಸುತ್ತಿರುವುದು ಇದೇ ಮೊದಲ ಬಾರಿಯಾಗಲಿದೆ. ಇದನ್ನು 2008ರಲ್ಲಿಯೇ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಹಕ್ಕನ್ನು ನೀಡಲಾಗಿತ್ತು. ಆದರೆ ನಂತರದ ವರ್ಷದಲ್ಲಿ ಭದ್ರತಾ ಕಾರಣಗಳಿಂದ ಅದನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಲಾಯಿತು.
ಇದೇ ವೇಳೆ ಭಾರತ ತಂಡವು 2008ರಲ್ಲಿ ನಡೆದ ಏಷ್ಯಾ ಕಪ್ ನಂತರ ಭದ್ರತಾ ಕಾರಣಗಳಿಂದಾಗಿ ಮತ್ತು ನಂತರ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ಕಾರಣಕ್ಕಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಿಲ್ಲ. 2012ರಲ್ಲಿ ಪಾಕಿಸ್ತಾನ ತಂಡ ಭಾರತದಲ್ಲಿ ದ್ವಿಪಕ್ಷೀಯ ಸರಣಿ ಆಡಿದ ನಂತರ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ.
ಇದೇ ರೀತಿಯ ಘಟನೆ 2023ರ ಏಷ್ಯಾ ಕಪ್‌ನಲ್ಲಿ ಸಂಭವಿಸಿತು. ಭಾರತ ತಂಡವು ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ನಿರಾಕರಿಸಿದ ನಂತರ, ಪಂದ್ಯಾವಳಿಯನ್ನು ಎರಡು ದೇಶಗಳ ಹೈಬ್ರಿಡ್ ಮಾದರಿಗೆ ಬದಲಾಯಿಸಿತು. ಭಾರತ ತಂಡವು ಶ್ರೀಲಂಕಾದಲ್ಲಿ ತಮ್ಮ ಎಲ್ಲ ಪಂದ್ಯಗಳನ್ನು ಆಡಿತು ಮತ್ತು ಪಂದ್ಯಾವಳಿಯನ್ನು ಗೆದ್ದುಕೊಂಡಿತು.
2025ರ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯು 2023ರ ಐಸಿಸಿ ಏಕದಿನ ವಿಶ್ವಕಪ್ ಅಂಕಪಟ್ಟಿಯ ಅಗ್ರ ಎಂಟು ತಂಡಗಳನ್ನು ಒಳಗೊಂಡಿದೆ. ಒಂದು ಗುಂಪಿನಲ್ಲಿ ತಲಾ ನಾಲ್ಕು ತಂಡಗಳನ್ನು ಹೊಂದಿರುವ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಸೆಮಿಫೈನಲ್ ವಿಜೇತ ಎರಡು ತಂಡಗಳು ಪ್ರಶಸ್ತಿಗಾಗಿ ಫೈನಲ್ ಪಂದ್ಯವನ್ನು ಆಡುತ್ತವೆ. "ಪಂದ್ಯಾವಳಿಯು ಚಿಕ್ಕದಾಗಿದೆ, ತೀಕ್ಷ್ಣವಾಗಿದೆ ಮತ್ತು ಹೆಚ್ಚು ಸ್ಪರ್ಧಾತ್ಮಕವಾಗಿದೆ," ಎಂದು ಐಸಿಸಿ ಹೇಳಿಕೆಯನ್ನು ಕ್ರಿಕ್‌ಬಜ್ ಉಲ್ಲೇಖಿಸಿದೆ.