ಚಾಂಪಿಯನ್ಸ್ ಟ್ರೋಫಿ 2025 ರ 8 ನೇ ಪಂದ್ಯವು ಫೆಬ್ರವರಿ 26 ರಂದು ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 8 ರನ್‌ಗಳಿಂದ ಸೋಲಿಸುವ ಮೂಲಕ ಅಫ್ಘಾನಿಸ್ತಾನ ದಾಖಲೆ ಸೃಷ್ಟಿಸಿದೆ. ಈ ಸೋಲಿನೊಂದಿಗೆ ಇಂಗ್ಲೆಂಡ್ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಅಫ್ಘಾನಿಸ್ತಾನ ತಂಡದ ಗೆಲುವಿನಲ್ಲಿ ಯುವ ಬ್ಯಾಟರ್ ಇಬ್ರಾಹಿಂ ಜದ್ರಾನ್ ಪ್ರಮುಖ ಪಾತ್ರವಹಿಸಿದರು. ಇಬ್ರಾಹಿಂ ಜದ್ರಾನ್ ಭರ್ಜರಿ ಶತಕ ಬಾರಿಸಿ ಮಿಂಚಿದರು.
ಇಬ್ರಾಹಿಂ ಜದ್ರಾನ್ 177 ರನ್ ಗಳಿಸುವ ಮೂಲಕ ಅಫ್ಘಾನಿಸ್ತಾನ ತಂಡದ ಗೆಲುವಿಗೆ ಅಡಿಪಾಯ ಹಾಕಿದರು. ಗಡಾಫಿ ಸ್ಟೇಡಿಯಂನಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಅಫ್ಘಾನಿಸ್ತಾನ ಮೊದಲು ಬ್ಯಾಟ್ ಮಾಡಿ ಜದ್ರಾನ್ ಅವರ ಬಿರುಸಿನ ಇನ್ನಿಂಗ್ಸ್ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 325 ರನ್ ಗಳಿಸಿತು.

ಅಫ್ಘಾನಿಸ್ತಾನ ನೀಡಿದ ಗುರಿಯನ್ನು ಬೆನ್ನಟ್ಟಿದ ಜೋ ರೂಟ್ ಅವರ ಶತಕ (120) ಇಂಗ್ಲೆಂಡ್‌ಗೆ ಗೆಲುವಿನ ಭರವಸೆಯನ್ನು ನೀಡಿತು. ಆದರೆ ಅಫ್ಘಾನಿಸ್ತಾನ ಬೌಲರ್‌ಗಳು ಕೊನೆಯ ಓವರ್‌ಗಳಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಇಂಗ್ಲೆಂಡ್ ತಂಡ ಕೇವಲ 317 ರನ್‌ಗಳಿಗೆ ಆಲೌಟ್ ಆಗಿತ್ತು. ಚಾಂಪಿಯನ್ಸ್ ಟ್ರೋಫಿಯಲ್ಲಿ ಅಫ್ಘಾನಿಸ್ತಾನಕ್ಕೆ ಇದು ಮೊದಲ ಗೆಲುವು.
ಐಸಿಸಿ ಏಕದಿನ ಟೂರ್ನಿಯಲ್ಲಿ ಅಫ್ಘಾನಿಸ್ತಾನ ಮೊದಲ ಬಾರಿಗೆ ಅತ್ಯಧಿಕ 325 ರನ್‌ಗಳನ್ನು ಗಳಿಸಿತು. ಇದಕ್ಕೆ ಬಹುಮುಖ್ಯ ಕಾರಣ ಇಬ್ರಾಹಿಂ ಜದ್ರಾನ್. ಇಂಗ್ಲೆಂಡ್ ಬೌಲರ್‌ಗಳಿಗೆ ಬೆವರಿಳಿಸಿದ ಜದ್ರಾನ್ ಗಡಾಫಿ ಸ್ಟೇಡಿಯಂನಲ್ಲಿ ಅಬ್ಬರಿಸಿದರು. ಇದೇ ವೇಳೆ ಜದ್ರಾನ್ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಶತಕ ಗಳಿಸಿದ ನಂತರ ಮಾಡಿದ ಆಚರಣೆ ಎಲ್ಲರ ಚಿತ್ತ ಕದ್ದಿದೆ. ಶತಕ ಗಳಿಸಿದ ನಂತರ ಜದ್ರಾನ್ ನಮಸ್ತೆ ಮಾಡುವ ಮೂಲಕ ಆಚರಣೆ ಮಾಡಿದರು. ಜದ್ರಾನ್ ನಮಸ್ತೆ ಆಚರಣೆ ಮಾಡಲು ಕಾರಣ ಇಲ್ಲಿದೆ.
ಇಬ್ರಾಹಿಂ ಜದ್ರಾನ್ ಆರಂಭದಲ್ಲಿ ನಿಧನವಾಗಿ ಬ್ಯಾಟಿಂಗ್ ಮಾಡಿದರು. ಪಿಚ್ ಅರ್ಧ ಮಾಡಿಕೊಂಡು ಕ್ರೀಸ್‌ಗೆ ಕಚ್ಚಿ ನಿಂತ ಜದ್ರಾನ್ ಅಫ್ಘಾನಿಸ್ತಾನ ತಂಡಕ್ಕೆ ಉತ್ತಮ ರನ್ ಕಲೆ ಹಾಕಿದರು. ಈ ಮೂಲಕ ಅವರು ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಶತಕ ಗಳಿಸಿದ ಮೊದಲ ಅಫ್ಘಾನ್ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಈ ಸಾಧನೆ ಮಾಡುತ್ತಿದ್ದಂತೆ ಅವರು ಪ್ರೇಕ್ಷಕರು ಮತ್ತು ತಮ್ಮ ತಂಡದ ಆಟಗಾರರಿಗೆ ಕೈಜೋಡಿಸಿ ಧನ್ಯವಾದ ಅರ್ಪಿಸಿದರು.
ಪಂದ್ಯದ ನಂತರ ನಮಸ್ತೆ ಸಂಭ್ರಮಾಚರಣೆಯ ಹಿಂದಿನ ಕಾರಣವೇನೆಂದು ಜದ್ರಾನ್ ಅವರನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿ ಅವರು, ಪಂದ್ಯದ ಮೊದಲು ನಾನು ರಶೀದ್ ಜೊತೆ ಮಾತನಾಡಿದ್ದೆ, ರಶೀದ್ ಜೊತೆ ಮಾತನಾಡಿದಾಗಲೆಲ್ಲಾ ನಾನು ಸ್ಕೋರ್ ಮಾಡುತ್ತೇನೆ ಎಂದು ಹೇಳಿದರು. ಹಾಗಾಗಿ ನನ್ನ ಶತಕವನ್ನು ಪೂರ್ಣಗೊಳಿಸಿದಾಗ, ರಶೀದ್‌ಗೆ ಧನ್ಯವಾದ ಹೇಳಿದೆ ಎಂದು ನಮಸ್ತೆ ಸಂಭ್ರಮಾಚರಣೆಯ ಹಿಂದಿನ ಕಾರಣವನ್ನು ತಿಳಿಸಿದರು.
ಇಬ್ರಾಹಿಂ ಜದ್ರಾನ್ ಗಾಯದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವುದು ಸುಲಭವಲ್ಲ ಎಂದು ಒತ್ತಿ ಹೇಳಿದರು. ನಾನು 7 ತಿಂಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದೇನೆ. ಆದರೆ ಕಳೆದ 1 ವರ್ಷದಿಂದ ನಾನು ಏಕದಿನ ಕ್ರಿಕೆಟ್ ಆಡಿಲ್ಲ. ನನ್ನ ಪ್ರದರ್ಶನದ ಬಗ್ಗೆ ನನಗೆ ಸಂತೋಷವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.