ಭಾರತದ ಗೆಲುವಿಗೆ ಕಾರಣವಾದ 5 ಅಂಶಗಳು
ಬರ್ಮಿಂಗ್ ಹ್ಯಾಮ್, ಜೂನ್ 5: ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಭಾರೀ ಕಾತುರದಿಂದ ನಿರೀಕ್ಷಿಸುತ್ತಿದ್ದ ಕದನಕ್ಕೆ ತಾರ್ಕಿಕ ತೆರೆಬಿದ್ದಿದೆ. ಮಿಲಿಯನ್ ಗಟ್ಟಲೆ ಇರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಈ ಅಂತ್ಯ ಖುಷಿ ಕೊಟ್ಟಿದೆ.
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಹಿನ್ನೆಲೆಯಲ್ಲಿ ಬರ್ಮಿಂಗ್ ಹ್ಯಾಮ್ ನ ಜೂನ್ 4ರಂದು ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ, 124 ರನ್ ಗಳ ಭರ್ಜರಿ ಜಯ ಗಳಿಸಿತು.
ಈ ಮೂಲಕ, ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಗೆಲುವಿನ ಶುಭಾರಂಭ (ಇದು ಭಾರತದ ಮೊದಲ ಪಂದ್ಯ) ಮಾಡಿದಂತಾಗಿದೆ. ಇದಲ್ಲದೆ, ಟೂರ್ನಿಯಲ್ಲಿನ ಇತರ ತಂಡಗಳಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ ಟೀಂ ಇಂಡಿಯಾ.[In Pics : ಪಾಕ್ ವಿರುದ್ಧ ಜಯದ ನಗೆ ಬೀರಿದ ಭಾರತ]
ಪಾಕಿಸ್ತಾನ ತಂಡಕ್ಕೆ ತಲೆನೋವಾಗುವ ಸ್ಪಿನ್ನರ್ ಆರ್. ಅಶ್ವಿನ್ ಈ ಪಂದ್ಯದಲ್ಲಿ ಇಲ್ಲದಿರುವುದು ಪಂದ್ಯ ಶುರುವಾಗಲು ಇನ್ನು ಕೆಲವೇ ನಿಮಿಷಗಳಿದ್ದಾಗ ಬಹಿರಂಗಗೊಂಡಿತ್ತು. ಇದು, ಕೆಲ ಭಾರತೀಯ ಅಭಿಮಾನಿಗಳಲ್ಲಿ ಆತಂಕವನ್ನೂ ಸೃಷ್ಟಿಸಿತ್ತು. ಆದರೆ, ಆ ತಂಡದ ಒಟ್ಟಾರೆ ಪ್ರದರ್ಶನ ಆ ಆತಂಕವನ್ನು ದೂರಾಗಿಸಿ, ತಂಡಕ್ಕೆ ಅರ್ಹ ಗೆಲುವನ್ನು ತಂದುಕೊಟ್ಟಿತು.
ಹಾಗಾದರೆ, ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ಎಡವಿದ್ದೆಲ್ಲಿ? ಭಾರತ ಗೆದ್ದಿದ್ದೆಲ್ಲಿ ? ಈ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಐದು ಅಂಶಗಳು ಇಲ್ಲಿ ನೀಡಲಾಗಿದೆ.

ಮೊದಲು ಬ್ಯಾಟ್ ಮಾಡುವ ಅವಕಾಶದಿಂದ ಅನುಕೂಲ
ಬಹುತೇಕ ಪಂದ್ಯಗಳಲ್ಲಿ ಟಾಸ್ ಎನ್ನುವುದು ಭಾರೀ ಪ್ರಧಾನ ಪಾತ್ರ ವಹಿಸುತ್ತದೆ. ಇದನ್ನು ಅವಲಂಬಿಸಿದಂತೆ ಪಂದ್ಯದ ಫಲಿತಾಂಶವೂ ಲಭ್ಯವಾದ ಸಾಕಷ್ಟು ಉದಾಹರಣೆಗಳಿವೆ. ಹಾಗೆ ನೋಡಿದರೆ, ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದು ಪಾಕಿಸ್ತಾನ. ಟಾಸ್ ಗೆದ್ದ ಕೂಡಲೇ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ಅವರು, ಫೀಲ್ಡಿಂಗ್ ಆಯ್ದುಕೊಂಡರು. ಆದರೆ, ಅವರಿಗೆ ಅದು ತಿರುಗುಬಾಣವಾಯಿತು. ತಕ್ಷಣ ಪ್ರತಿಕ್ರಿಯಿಸಿದ್ದ ಕೊಹ್ಲಿ ''ಪಾಕಿಸ್ತಾನ ತಂಡದ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ನಮಗೆ ಒಳಿತೇ ಆಯಿತು. ಏಕೆಂದರೆ, ಈ ಪಂದ್ಯದಲ್ಲಿ ಯಾರು ಎರಡನೇ ಇನಿಂಗ್ಸ್ ನಲ್ಲಿ ಆಡುತ್ತಾರೋ ಅವರಿಗೆ ಸಹಜವಾಗಿ ಒತ್ತಡ ಇದ್ದೇ ಇರುತ್ತದೆ. ಹಾಗಾಗಿ, ನಾವು ಮೊದಲು ಬ್ಯಾಟ್ ಮಾಡುವುದರಿಂದ ಒತ್ತಡ ರಹಿತವಾಗಿ ಆಡಲು ಅನುಕೂಲವಾಗುತ್ತದೆ'' ಎಂದಿದ್ದರು. ಆ ಮಾತು ನಿಜವಾಯಿತು.

ಮಿಂಚಿದ ರೋಹಿತ್, ಧವನ್
ಯಾವುದೇ ಕ್ರಿಕೆಟ್ ಇನಿಂಗ್ಸ್ ಇರಲಿ, ಅದರಲ್ಲಿ ಆರಂಭಿಕ ಆಟಗಾರರ ಪಾತ್ರ ತೀರಾ ಮಹತ್ವದ್ದಾಗಿರುತ್ತದೆ. ಭಾರತ ತಂಡದ ವಿಚಾರವೂ ಅದೇ ಆಗಿತ್ತು. ಆರಂಭಿಕರಾದ ರೋಹಿತ್ ಶರ್ಮಾ, ಶಿಖರ್ ಧವನ್ ಅವರು ಶತಕದ ಜತೆಯಾಟವಾಡಿದ್ದು (24.3 ಓವರ್ ಗಳಲ್ಲಿ 136 ರನ್) ತಂಡವು ದೊಡ್ಡ ಇನಿಂಗ್ಸ್ ಕಟ್ಟಲು ಉತ್ತಮ ಅಡಿಪಾಯವಾಯಿತು. ಆ ದೊಡ್ಡ ಮೊತ್ತವೇ, ಎದುರಾಳಿ ತಂಡ ಬ್ಯಾಟಿಂಗ್ ಗೆ ಇಳಿದಾಗ ಆ ತಂಡವನ್ನು ಒತ್ತಡಕ್ಕೆ ಸಿಲುಕಿಸಿ ಪಂದ್ಯದಲ್ಲಿ ಭಾರತ ಅನಾಯಾಸವಾಗಿ ಜಯ ಸಾಧಿಸುವಂತಾಗಲು ಮೂಲ ಕಾರಣ.

ಮಿಂಚಿದ ಯುವರಾಜ್
ಇತ್ತೀಚೆಗೆ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದರು. ಈ ಹಿಂದಿನ ಐಪಿಎಲ್ ಗಳಿಗೆ ಕಂಪೇರ್ ಮಾಡಿ ನೋಡಿದರೆ ಕೊಹ್ಲಿಆಟ ಅತ್ಯಂತ ನೀರಸವಾಗಿತ್ತು. ಹಾಗಾಗಿ, ಪಾಕಿಸ್ತಾನದ ವಿರುದ್ಧ ಕೊಹ್ಲಿ ಮಿಂಚುವರೇ ಎಂಬ ಅನುಮಾನಕ್ಕೆ ಅವರೇ ತೆರೆ ಎಳೆದರು. ಹೌದು. ಐಪಿಎಲ್ ಬೇರೆ, ಏಕದಿನ ಪಂದ್ಯ ಬೇರೆ. ಆದರೆ, ಅಲ್ಲೂ ಇಲ್ಲೂ ಆಡುವ ಬ್ಯಾಟ್ಸ್ ಮನ್ ಆತನೇ ಅಲ್ಲವೇ? ಐಪಿಎಲ್ ನ ವೈಫಲ್ಯ ಕೊಹ್ಲಿಗೆ ಮಂಕು ಹಿಡಿಸಿದ್ದರೆ ಹೇಗೆಂಬ ಆತಂಕವನ್ನು ಖುದ್ದು ಕೊಹ್ಲಿಯವರೇ ತಮ್ಮ ಬ್ಯಾಟಿನಿಂದ ತೊಡೆದು ಹಾಕಿದ್ದಾರೆ.

ಆರ್ಭಟಕ್ಕೆ ಪಾಕಿಸ್ತಾನ ಕಂಗಾಲು
ಪದೇ ಪದೇ ಮಳೆ ಅಡ್ಡಿಪಡಿಸುತ್ತಿದ್ದ ಪಂದ್ಯದ ಕೊನೆಯ ಓವರ್ ಗಳಲ್ಲಿ ಕೊಹ್ಲಿ, ಯುವರಾಜ್ ಸಿಂಗ್ ಗಳಿಸಿದ 55 ರನ್ ಗಳು ಭಾರತದ ಮೊತ್ತವು 300 ರನ್ ಗಡಿ ದಾಟಲು ಕಾರಣವಾಯಿತು. 46ನೇ ಓವರ್ ನಲ್ಲಿ 21 ರನ್, 47ನೇ ಓವರ್ ನಲ್ಲಿ 11 ಹಾಗೂ 48ನೇ ಓವರ್ ನಲ್ಲಿ 23 ರನ್ ಹರಿದುಬಂದಿದ್ದು ಭಾರತದ ಮೊತ್ತವನ್ನು ಹಿರಿಹಿರಿ ಹಿಗ್ಗಿಸಿತು. ಇನಿಂಗ್ಸ್ ಮೊತ್ತ ಯಾವಾಗ 300 ರನ್ ಗಡಿ ದಾಟಿತೋ ಆಗಲೇ ಎದುರಾಳಿ ತಂಡ ಒತ್ತಡಕ್ಕೆ ಸಿಲುಕಿತು. ಇದು ಸಹಜವೂ ಹೌದು.

ಬ್ಯಾಟ್ಸ್ ಮನ್ ಗಳ ವೈಫಲ್ಯ
ಭಾರತ ನೀಡಿದ ದೈತ್ಯ ಸವಾಲನ್ನು ಬೆನ್ನತ್ತಿದ ಪಾಕಿಸ್ತಾನಕ್ಕೆ ಆರಂಭಿಕ ಅಜರ್ ಅಲಿ ಬಿಟ್ಟರೆ, ಮಿಕ್ಕವರಾರೂ ಆಸರೆಯಾಗಲಿಲ್ಲ. ಆರಂಭಿಕರಿಂದಾಗಲೀ, ಮಧ್ಯಮ ಕ್ರಮಾಂಕದಿಂದಾಗಲೀ, ಆ ಹೊತ್ತಿಗೆ ತುರ್ತಾಗಿ ಬೇಕಿದ್ದ ಒಂದು ದೊಡ್ಡ ಜತೆಯಾಟವನ್ನು ಯಾರೂ ಕಟ್ಟಿಕೊಡಲಿಲ್ಲ. ಇದೇ ವಿಪರ್ಯಾಸ. ಪಾಕಿಸ್ತಾನದ ಸೋಲಿಗೆ ಇದೇ ಕಾರಣ. ಇದರ ಲಾಭ ಪಡೆದ ಭಾರತೀಯ ಬೌಲರ್ ಗಳು, ಹೆಚ್ಚು ಟೈಂ ವೇಸ್ಟ್ ಮಾಡದೇ ನಿಗದಿತ ಅಂತರಗಳಲ್ಲಿ ಪಾಕಿಸ್ತಾನದ ವಿಕೆಟ್ ಗಳನ್ನು ಉರುಳಿಸುತ್ತಾ ಆ ತಂಡದ ಸೋಲಿಗೆ ತ್ವರಿತ ಟಿಪ್ಪಣಿ ಬರೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications