ಬಹು ನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ಮುಖಾಮುಖಿ ಆಗಿವೆ. ಕರಾಚಿಯ ಅಂಗಳದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಫೀಲ್ಡಿಂಗ್ ಮಾಡಲು ಮುಂದಾಗಿದೆ. ಮೊದಲು ಬ್ಯಾಟ್ ಮಾಡಿದ ಕಿವೀಸ್ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿದೆ. ಭರವಸೆಯ ಆಟಗಾರರಾದ ವಿಲ್ ಯಂಗ್ ಹಾಗೂ ಟಾಮ್ ಲಾಥಮ್ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಕಿವೀಸ್ 321 ರನ್‌ಗಳ ಗುರಿಯನ್ನು ಪಾಕಿಸ್ತಾನಕ್ಕೆ ನೀಡಿದೆ.
ಮೊದಲು ಬ್ಯಾಟ್ ಮಾಡಿದ ಕಿವೀಸ್ ತಂಡದ ಆರಂಭ ಕಳಪೆಯಾಗಿತ್ತು. ಡ್ವೇನ್ ಕಾನ್ವೇ ತಮ್ಮ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರು. ಇನ್ನು ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಕೇನ್ ವಿಲಿಯಮ್ಸನ್ ನಿರಾಸೆ ಅನುಭವಿಸಿದರು. ಕೇನ್ ಅವರಿಗೆ ನಾಸೀಮ್ ಶಾ ಖೆಡ್ಡ ತೋಡಿದರು. ಸ್ಟಂಪ್ ಮೇಲೆ ಇದ್ದ ಎಸೆತವನ್ನು ತಪ್ಪಾಗಿ ಗ್ರಹಿಸಿದ ಕೇನ್ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿದರು. ಇನ್ನೋರ್ವ ಮಧ್ಯಮ ಕ್ರಮಾಂದ ಸ್ಫೋಟಕ ಆಟಗಾರ ಡೇರೆಲ್ ಮಿಚೆಲ್ ಅವರಿಗೆ ಹ್ಯಾರಿಸ್ ರೌಫ್ ಪೆವಿಲಿಯನ್ ಹಾದಿ ತೋರಿಸಿದರು. ಪರಿಣಾಮ ನ್ಯೂಜಿಲೆಂಡ್ 73 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ವಿಲ್ ಯಂಗ್ ಹಾಗೂ ಟಾಮ್ ಲಾಥಮ್ ಜೋಡಿ ಆಧಾರವಾದರು. ಈ ಜೋಡಿ ಮಿಡ್ಲ್ ಓವರ್‌ಗಳಲ್ಲಿ ವಿಕೆಟ್ ಬೀಳದಂತೆ ತಡೆಯಿತು. ಪಾಕ್ ಬೌಲರ್‌ಗಳ ರಣ ತಂತ್ರವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದ ಈ ಜೋಡಿ ಆರ್ಭಟಿಸಿತು. ಲಾಥಮ್-ಯಂಗ್ ಜೋಡಿ 126 ಓವರ್‌ಗಳಲ್ಲಿ 118 ರನ್ ಸೇರಿಸಿತು.
ಆರಂಭಿಕ ಆಟಗಾರ ವಿಲ್ ಯಂಗ್ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 113 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಸಹಾಯದಿಂದ 107 ರನ್ ಸಿಡಿಸಿ ಆರ್ಭಟಿಸಿದರು.
ಇನ್ನು ನ್ಯೂಜಿಲೆಂಡ್ ತಂಡದ ಅನುಭವಿ ಆಟಗಾರರು ಮೊದಲ ಪಂದ್ಯದಲ್ಲಿ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು. ಅನುಭವಿ ಆಟಗಾರ ಟಾಮ್ ಲಾಥಮ್ ಹಾಗೂ ಆಲ್ ರೌಂಡರ್ ಗ್ಲೇನ್ ಫಿಲಿಪ್ಸ್ ಜೋಡಿ ಪಾಕ್ ಬೌಲರ್‌ಗಳ ತಂತ್ರವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಿದರು. ಟಾಮ್ ಲಾಥಮ್ 32 ಇನಿಂಗ್ಸ್ ಬಳಿಕ ಶತಕ ಬಾರಿಸಿದರು. ಈ ಮೂಲಕ ತಮ್ಮ ವೃತ್ತಿ ಜೀವನದ ಎಂಟನೇ ಏಕದಿನ ಶತಕವನ್ನು ಬಾರಿಸಿ ಟಾಮ್ ಮಿಂಚಿದರು.

ಐದನೇ ವಿಕೆಟ್ ಟಾಮ್ ಲಾಥಮ್ ಹಾಗೂ ಗ್ಲೇನ್ ಫಿಲಿಪ್ಸ್ ಜೋಡಿ 74 ಎಸೆತಗಳಲ್ಲಿ 125 ರನ್ ಸಿಡಿಸಿ ತಂಡಕ್ಕೆ ಆಧಾರವಾಯಿತು. ಗ್ಲೇನ್ ಫಿಲಿಪ್ಸ್ 39 ಎಸೆತಗಳಲ್ಲಿ 156 ಸ್ಟ್ರೈಕ್ ರೇಟ್‌ನಲ್ಲಿ 61 ರನ್ ಬಾರಿಸಿ ಔಟ್ ಆದರು. ಟಾಮ್ ಲಾಥಮ್ 104 ಎಸೆತಗಳಲ್ಲಿ ಅಜೇಯ 118 ರನ್ ಸಿಡಿಸಿದರು. ಈ ವೇಳೆ 10 ಬೌಂಡರಿ, 3 ಸಿಕ್ಸರ್‌ಗಳು ಸೇರಿವೆ. ಅಂತಿಮವಾಗಿ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 320 ರನ್ ಸಿಡಿಸಿತು.
ಪಾಕಿಸ್ತಾನದ ಪರ ಹ್ಯಾರಿಸ್ ರೌಫ್ ಹಾಗೂ ನಾಸೀಮ್ ಶಾ ತಲಾ ಎರಡು ವಿಕೆಟ್ ಉರುಳಿಸಿದರು.