
ನವದೆಹಲಿ, ಏಪ್ರಿಲ್ 20: ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಕಾಲಿನ್ ಇಂಗ್ರಾಮ್ ಅದ್ಭುತ ಕ್ಯಾಚ್ ಮೂಲಕ ಕಿಂಗ್ಸ್ ಇಲೆವೆನ್ ಪಂಜಾಬ್ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಅವರನ್ನು ಪೆವಿಲಿಯನ್‌ಗೆ ಅಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶನಿವಾರ (ಏಪ್ರಿಲ್ 20) ಡೆಲ್ಲಿ vs ಪಂಜಾಬ್ ನಡುವಿನ ಐಪಿಎಲ್ ಪಂದ್ಯದ ವೇಳೆ ಈ ಆಕರ್ಷಕ ಕ್ಯಾಚ್ ಕಾಣಸಿಕ್ಕಿತು.
ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದಿದ್ದ ಐಪಿಎಲ್ 37ನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕಿಂಗ್ಸ್ XI ಪಂಜಾಬ್ ಪರ ಗೇಲ್ ಭರ್ಜರಿ ಬ್ಯಾಟಿಂಗ್ ನಡೆಸಿದ್ದರು. ಗೇಲ್ ಬ್ಯಾಟ್‌ನಿಂದ 6 ಬೌಂಡರಿ, 5 ಸಿಕ್ಸರ್ ಸೇರಿ ಒಟ್ಟು 69 ರನ್‌ಗಳು (37 ಎಸೆತ) ಸಿಡಿದಿದ್ದವು.
ಆದರೆ ಸಂದೀಪ್ ಲಮಿಚಾನೆ ಅವರ 12.1ನೇ ಓವರ್‌ನಲ್ಲಿ ಗೇಲ್ ಬ್ಯಾಟ್ ತಾಗಿದ ಚೆಂಡು ಬೌಂಡರಿ ರೇಖೆ ದಾಟಿ ಸಿಕ್ಸ್ ಎನಿಸುವುದರಲ್ಲಿತ್ತು. ಆಗ ಜಿಗಿದ ಇಂಗ್ರಾಮ್ ಅದ್ಭುತ ರೀತಿಯಲ್ಲಿ ಚೆಂಡನ್ನು ಕ್ಯಾಚ್ ಮಾಡಿ, ಇನ್ನು ಬ್ಯಾಲನ್ಸ್ ತಪ್ಪೀತು ಅನಿಸಿದ ಕೂಡಲೆ ಚೆಂಡನ್ನು ಅಕ್ಸರ್ ಪಟೇಲ್‌ಗೆ ಹಸ್ತಾಂತರಿಸಿದ್ದರು. ಇಂಗ್ರಾಮ್ ಸಾಹಸದಿಂದಾಗಿ ಗೇಲ್ ಪೆಚ್ಚಾಗಿ ಪೆವಿಲಿಯನ್‌ಗೆ ನಡೆಯುವಂತಾಯ್ತು.