
ಬೆಂಗಳೂರು, ಜೂನ್ 16: ದುರ್ಬಲ ಆಫ್ಘನ್ನರ ವಿರುದ್ಧ ಪಂದ್ಯ ಗೆದ್ದ ಭಾರತ ತಂಡದ ನಾಯಕ ಅಜಿಂಕ್ಯ ರಹಾನೆ ಕ್ರಿಕೆಟ್ ಜಗತ್ತಿನ ಮನಸ್ಸನ್ನೂ ಗೆದ್ದರು.
ಇದೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟಿದ್ದ ಅಫ್ಘಾನಿಸ್ತಾನ ತಂಡದ ವಿರುದ್ಧ ಅನುಭವಿ ಆಟಗಾರ ಭಾರತ ತಂಡ ಸುಲಭವಾಗಿ ಗೆಲುವು ಸಾಧಿಸಿತು. ಐದು ದಿನಗಳ ಪಂದ್ಯ ಎರಡೇ ದಿನಕ್ಕೆ ಮುಕ್ತಾಯವಾಯಿತು.
ಈಗಿನ್ನೂ ಮನೆಯಂಗಳದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡಾಡುತ್ತಾ ಆಡಲು ಕಲಿಯುತ್ತಿರುವ ಮಗು ಬಿದ್ದಾಗ ಅದರ ನೋವು ಮರೆಸುವಂತೆ ರಮಿಸುವ ಪೋಷಕರ ಹಾಗೆ, ಅಜಿಂಕ್ಯ ರಹಾನೆ ಆಫ್ಘನ್ನರಲ್ಲಿ ಖುಷಿ ಮೂಡಿಸಿದರು.
ಪಂದ್ಯ ಗೆದ್ದ ಬಳಿಕ ಟ್ರೋಫಿ ಎತ್ತಿ ಹಿಡಿದು ಸಂಭ್ರಮ ಪಡುವಷ್ಟು ಎದುರಾಳಿ ಪಡೆ ಸಶಕ್ತವಾಗಿರಲಿಲ್ಲ. ಕ್ರಿಕೆಟ್ ಶಿಶು ಎದುರು ಬಲಿಷ್ಠ ತಂಡ ಗೆಲ್ಲುವುದು ಹೊಸತಲ್ಲ. ಭಾರತದ ಗೆಲುವು ಇಲ್ಲಿ ನಿರೀಕ್ಷಿತವಾಗಿತ್ತು.
ಆದರೆ, ಅದರ ಮಧ್ಯೆ ಅಜಿಂಕ್ಯ ರಹಾನೆ ತೋರಿದ ಮನೋಭಾವ ಎಲ್ಲರ ಗಮನ ಸೆಳೆಯಿತು. ಇದು ಭಾರತ-ಅಫ್ಘಾನಿಸ್ತಾನದ ಬಾಂಧವ್ಯದ ಮತ್ತೊಂದು ಅವಿಸ್ಮರಣೀಯ ಕ್ಷಣವಾಗಿಯೂ ದಾಖಲಾಯಿತು.
ಪಂದ್ಯ ಮುಗಿದ ಬಳಿಕ ಟ್ರೋಫಿ ವಿತರಣೆ ಸಮಯದಲ್ಲಿ ರಹಾನೆ, ತಮ್ಮ ತಂಡದೊಂದಿಗೆ ಟ್ರೋಪಿ ಎತ್ತಿ ಹಿಡಿದು ಸಂಭ್ರಮಿಸುವ ಬದಲು, ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತು ಬೇಸರಗೊಂಡಿದ್ದ ಆಫ್ಘನ್ ಕ್ರಿಕೆಟಿಗರನ್ನೂ ಕರೆದರು. ಅವರ ಕೈಗೇ ಟ್ರೋಫಿ ಕೊಟ್ಟು ಫೋಟೊಕ್ಕೆ ಪೋಸ್ ನೋಡಿದರು.
ಆಫ್ಘನ್ ಆಟಗಾರರೂ ಸೋಲಿನ ನೋವು ಮರೆತು ಭಾರತದ ಆಟಗಾರರ ಜತೆ ಕುಳಿತು ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು. ರಹಾನೆ ಅವರ ಈ ನಡೆ ಎಲ್ಲೆಡೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಇಲ್ಲಿ ಕ್ರಿಕೆಟ್ ಎಂಬ ಸ್ಪರ್ಧೆಗೂ ಮಿಗಿಲಾಗಿ, ಮಗುವಿಗೆ ಕಲಿಕೆಯ ಪಾಠ ಹೇಳಿಕೊಟ್ಟು ಸಮಾಧಾನ ಮಾಡುವ ಹಿರಿಯರಂತೆ ಭಾರತ ತಂಡ ನಡೆದುಕೊಂಡಿತು. ಇದು ಆಫ್ಘನ್ನರಿಗೆ ನೈತಿಕ ಸ್ಥೈರ್ಯ ತುಂಬ ಪ್ರಯತ್ನವೂ ಆಗಿತ್ತು.
ರಹಾನೆ ಅವರ ಈ ನಡೆಯನ್ನು ಶ್ಲಾಘಿಸಿ ವಿಡಿಯೋವನ್ನು ಬಿಸಿಸಿಐ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿತ್ತು. ಇದನ್ನು ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್‌ಸನ್ ಮತ್ತು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ ಸಿಂಗ್ ರಾಥೋರ್ ರೀಟ್ವೀಟ್ ಮಾಡಿ ರಹಾನೆ ಅವರನ್ನು ಹೊಗಳಿದ್ದಾರೆ.
ಸೋತರೂ ಉತ್ತಮವಾಗಿ ಆಡಿದ ಅಫ್ಘಾನಿಸ್ತಾನ ತಂಡದ ಕುರಿತು ರಹಾನೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ಅವರು ಉತ್ತಮವಾಗಿ ಆಡಿದರು. ಇಲ್ಲಿಂದ ಅವರ ಮುಂದೆ ಸಾಗುವ ಪಯಣ ಆರಂಭವಾಗಲಿದೆ. ಅವರ ವೇಗದ ಬೌಲರ್‌ಗಳು ಚೆನ್ನಾಗಿ ಬೌಲ್ ಮಾಡಿದರು. ಅದರಲ್ಲೂ ಮೂರನೇ ಅವಧಿಯಲ್ಲಿ ಉತ್ತಮವಾಗಿ ಬೌಲಿಂಗ್ ಸಂಘಟಿಸಿದರು. ಮುಂದಿನ ದಿನಗಳಲ್ಲಿ ಎದುರಾಳಿಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ರಹಾನೆ ಹೇಳಿದರು.
ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಶಿಖರ್ ಧವನ್ ಕೂಡ ಆಫ್ಘನ್ನರ ಆಟವನ್ನು ಪ್ರಶಂಸಿಸಿದ್ದಾರೆ.
ಕ್ರೀಡೆ ಯಾವಾಗಲೂ ಕಲಿಯುವ ಪ್ರಕ್ರಿಯೆ. ಒಮ್ಮೆ ಅವರು ಗೆಲ್ಲಲು ಆರಂಭಿಸಿದರೆ ಅವರು ಇನ್ನಷ್ಟು ಚೆನ್ನಾಗಿ ಆಡುತ್ತಾರೆ. ಈಗಾಗಲೇ ಆ ದೇಶದಲ್ಲಿ ದೊಡ್ಡ ಕ್ರಿಕೆಟಿಗರ ಹೆಸರುಗಳು ಕೇಳಿಬರುತ್ತಿವೆ. ಜತೆಗೆ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮವಾಗಿ ಆಡುತ್ತಿದ್ದಾರೆ ಎಂದು ಧವನ್ ಹೇಳಿದರು.