
ಮಾರ್ಚ್ 4ರ ಶುಕ್ರವಾರ ಕ್ರಿಕೆಟ್ ಜಗತ್ತಿನ ಪಾಲಿಗೆ ಅರ್ಧ ಸಿಹಿಯಾಗಿದ್ದರೆ, ಇನ್ನರ್ಧ ಕಹಿಯಾಗಿ ಪರಿಣಮಿಸಿದೆ. ಹೌದು, ವಿರಾಟ್ ಕೊಹ್ಲಿ ನೂರನೇ ಟೆಸ್ಟ್ ಪಂದ್ಯವನ್ನಾಡಲಿರುವ ದಿನ ಎಂದು ವಿಶೇಷತೆಯನ್ನು ಪಡೆದುಕೊಂಡಿದ್ದ ಇಂದಿನ ದಿನ ಸದ್ಯ ಕ್ರಿಕೆಟ್ ಜಗತ್ತಿಗೆ ಕರಾಳ ಶುಕ್ರವಾರವಾಗಿಯೂ ಕೂಡ ಪರಿಣಮಿಸಿದೆ. ಒಂದೆಡೆ ಹಲವಾರು ಕ್ರಿಕೆಟ್ ಪಂದ್ಯಗಳು ಈ ದಿನ ಜರುಗಿದ್ದರೆ, ಮತ್ತೊಂದೆಡೆ ಆಸ್ಟ್ರೇಲಿಯದ ಹಿರಿಯ ಕ್ರಿಕೆಟಿಗರಾದ ರಾಡ್ ಮಾರ್ಷ್ ಮತ್ತು ಶೇನ್ ವಾರ್ನ್ ಇದೇ ದಿನದಂದು ಇಹಲೋಕವನ್ನು ತ್ಯಜಿಸಿದ್ದಾರೆ. ಹೀಗೆ ಮಾರ್ಚ್ 4ರಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದಿರುವ ವಿವಿಧ ಘಟನೆ ಹಾಗೂ ಪಂದ್ಯಗಳ ರೌಂಡ್ಅಪ್ ಈ ಕೆಳಕಂಡಂತಿದೆ.
* ವಿರಾಟ್ ಕೊಹ್ಲಿಯ ನೂರನೇ ಟೆಸ್ಟ್ ಪಂದ್ಯ ಎಂದೇ ಖ್ಯಾತಿಯನ್ನು ಪಡೆದಿರುವ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಮೊಹಾಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಮೊದಲನೇ ದಿನದಾಟವನ್ನು ಮುಗಿಸಿರುವ ಟೀಮ್ ಇಂಡಿಯಾ 6 ವಿಕೆಟ್ ನಷ್ಟಕ್ಕೆ 357 ರನ್ ಬಾರಿಸಿ ಮೇಲುಗೈ ಸಾಧಿಸಿದೆ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹನುಮ ವಿಹಾರಿ 58 ರನ್ ಬಾರಿಸಿ ಜವಬ್ದಾರಿಯುತ ಆಟವನ್ನಾಡಿದರೆ, ರಿಷಭ್ ಪಂತ್ 96 ರನ್ ಚಚ್ಚಿ ಶತಕ ವಂಚಿತರಾದರು.
* ಮೊಹಾಲಿಯಲ್ಲಿ ನಡೆಯುತ್ತಿರುವ ತನ್ನ ನೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ 45 ರನ್ ಗಳಿಸಿ ಔಟ್ ಆಗಿದ್ದು, 8000 ಟೆಸ್ಟ್ ರನ್ ಪೂರೈಸಿದ ಮೈಲಿಗಲ್ಲನ್ನು ಮುಟ್ಟಿದ್ದಾರೆ. 169 ಇನ್ನಿಂಗ್ಸ್‌ನಲ್ಲಿ 8000 ರನ್ ಬಾರಿಸಿರುವ ವಿರಾಟ್ ಕೊಹ್ಲಿ ಈ ಮೈಲಿಗಲ್ಲನ್ನು ದಾಟಿದ ಆರನೇ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಇನ್ನು ಇದೇ ಇನ್ನಿಂಗ್ಸ್ ಮೂಲಕ ವಿರಾಟ್ ಕೊಹ್ಲಿ 900 ಟೆಸ್ಟ್ ಬೌಂಡರಿಗಳನ್ನು ಪೂರೈಸಿದ್ದು, ಈ ಮೈಲಿಗಲ್ಲನ್ನು ದಾಟಿದ ಏಳನೇ ಭಾರತೀಯ ಎನಿಸಿಕೊಂಡಿದ್ದಾರೆ.
* ಕ್ರಿಕೆಟ್ ಅಭಿಮಾನಿಗಳು ಇಂದು ವಿರಾಟ್ ಕೊಹ್ಲಿ ಆಡುತ್ತಿರುವ ನೂರನೇ ಟೆಸ್ಟ್ ಪಂದ್ಯದ ಖುಷಿಯಲ್ಲಿದ್ದಾಗ ಬಂದ ಶೇನ್ ವಾರ್ನ್ ನಿಧನರಾಗಿದ್ದಾರೆ ಎಂಬ ಅನಿರೀಕ್ಷಿತ ಸುದ್ದಿ ಅಭಿಮಾನಿಗಳನ್ನು ತೀರಾ ಬೇಸರಕ್ಕೆ ದೂಡಿದೆ. ಹೌದು, ಕ್ರಿಕೆಟ್ ದಿಗ್ಗಜ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಥೈಲೆಂಡ್ ದೇಶದಲ್ಲಿನ ತಮ್ಮಾ ವಿಲ್ಲಾದಲ್ಲಿ ಶನಿವಾರ ಬೆಳಿಗ್ಗೆ ( ಆಸ್ಟ್ರೇಲಿಯಾದ ಕಾಲಮಾನ ) ಹೃದಯಾಘಾತದಿಂದ ಮೃತಪಟ್ಟಿದ್ದು, 52 ವರ್ಷಕ್ಕೆ ಇಹಲೋಕವನ್ನು ತ್ಯಜಿಸಿದ್ದಾರೆ.
* ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಆಸ್ಟ್ರೇಲಿಯಾ ಪಾಕ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದ್ದು, ಮೊದಲನೇ ಟೆಸ್ಟ್ ಪಂದ್ಯ ಇಂದಿನಿಂದ ಆರಂಭಗೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಮೊದಲನೇ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 245 ರನ್ ಕಲೆಹಾಕಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಮೇಲುಗೈ ಸಾಧಿಸಿದೆ. ಪಾಕಿಸ್ತಾನದ ಪರ ಇಮಾಮ್ ಉಲ್ ಹಕ್ ಶತಕ ಬಾರಿಸಿ ಮಿಂಚಿ ಅಜೇಯರಾಗಿ ಉಳಿದಿದ್ದಾರೆ.
* ರಣಜಿ ಟ್ರೋಫಿಯಲ್ಲಿ ಪುದುಚೇರಿ ವಿರುದ್ಧದ ಪಂದ್ಯದ ಮೊದಲನೇ ದಿನ ಕಡಿಮೆ ವಿಕೆಟ್ ಕಳೆದುಕೊಂಡು ಉತ್ತಮ ರನ್ ಕಲೆ ಹಾಕುವುದರ ಮೂಲಕ ಮೇಲುಗೈ ಸಾಧಿಸಿದ್ದ ಕರ್ನಾಟಕ ತಂಡ ಎರಡನೇ ದಿನವೂ ಕೂಡ ಉತ್ತಮ ಆಟವನ್ನು ಆಡುವುದರ ಮೂಲಕ ಮೇಲುಗೈ ಸಾಧಿಸಿದೆ. ಮೊದಲನೇ ದಿನದಾಟದಂದು ಅಜೇಯ 161 ರನ್ ಕಲೆಹಾಕಿದ್ದ ದೇವದತ್ ಪಡಿಕ್ಕಲ್ ಇಂದು 178 ರನ್ ಗಳಿಸಿ ಔಟ್ ಆದರೆ, ಅಜೇಯ 21 ರನ್ ಗಳಿಸಿದ್ದ ಮನೀಷ್ ಪಾಂಡೆ ಎರಡನೇ ದಿನ ಅಜೇಯ ಶತಕ ಸಿಡಿಸುವುದರ ಮೂಲಕ ಕರ್ನಾಟಕ ತಂಡದ ಮೊತ್ತ 453 ಆಗುವಂತೆ ಮಾಡಿದ್ದಾರೆ. ಅತ್ತ ಎರಡನೇ ದಿನ ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಪುದುಚೆರಿ ದಿನದಾಟದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿದ್ದು, 401 ರನ್‌ಗಳ ಹಿನ್ನಡೆಯಲ್ಲಿದೆ.