ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಲೀಗ್‌ನಲ್ಲಿ ಅಬ್ಬರದ ಪ್ರದರ್ಶನ ನೀಡಿ ಟ್ರೋಫಿ ಗೆಲ್ಲುವ ಕನಸನ್ನು ಎಲ್ಲ ತಂಡಗಳು ಹೊಂದಿವೆ. ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಚೆನ್ನೈ ಮತ್ತೊಮ್ಮೆ ಟ್ರೋಫಿಗೆ ಮುತ್ತಿಡುವ ಮಹದಾಸೆಯನ್ನು ಹೊಂದಿದೆ. ಚೆನ್ನೈ ತಂಡವನ್ನು ಇಂಗ್ಲೆಂಡ್ ಕ್ರಿಕೆಟಿಗ ಜೇಮ್ಸ್ ಫೋಸ್ಟರ್ ಸೇರಿದ್ದಾರೆ. ಇವರು ಈ ಆವೃತ್ತಿಯಲ್ಲಿ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಜೇಮ್ಸ್ ಫೋಸ್ಟರ್ ಅವರು, ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್, ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ ಅವರೊಂದಿಗೆ ಕೆಲಸ ಮಾಡಲಿದ್ದಾರೆ.
ಚೆನ್ನೈ ತಂಡ ಜೇಮ್ಸ್ ಫೋಸ್ಟರ್ ತಂಡ ಸೇರಿರುವ ಬಗ್ಗೆ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗ ಪಡಿಸಿದೆ. ಜೇಮ್ಸ್ ಫೋಸ್ಟರ್ ಅವರು ಇಂಗ್ಲೆಂಡ್ ತಂಡದ ಪರ 18 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇವರು ವಿಕೆಟ್ ಕೀಪರ್ ಬ್ಯಾಟರ್ ಆಗಿ ಹೆಸರು ಮಾಡಿದ ಆಟಗಾರ. ಜೇಮ್ಸ್ ಫೋಸ್ಟರ್ 7 ಟೆಸ್ಟ್ ಪಂದ್ಯಗಳಲ್ಲಿ 226 ರನ್ ಸಿಡಿಸಿದ್ದಾರೆ. ಇನ್ನು 11 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಚೆನ್ನೈ ತಂಡದ ಪರ ಫೀಲ್ಡಿಂಗ್ ಕೋಚ್ ಆಗಿ ಜೇಮ್ಸ್ ಫೋಸ್ಟರ್ ಕೆಲಸ ಮಾಡುವ ಮೊದಲೂ, ಐಪಿಎಲ್ 2020 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದರು. ನವೆಂಬರ್ 2022 ರಲ್ಲಿ, ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್‌ನ ಸಹಾಯಕ ಕೋಚ್ ಆಗಿ ನೇಮಿಸಿತ್ತು. ಈಗ ಇವರು ಚೆನ್ನೈ ತಂಡದ ಆಟಗಾರರ ಕ್ಷೇತ್ರ ರಕ್ಷಣೆ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ.
ಜೇಮ್ಸ್ ಫೋಸ್ಟರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಆಟಗಾರ. ಇವರು 289 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯ ಆಡಿದ್ದು, 13,761 ರನ್ ಗಳಿಸಿದ್ದಾರೆ. ಇದರಲ್ಲಿ 23 ಶತಕಗಳು ಮತ್ತು 70 ಅರ್ಧಶತಕ ಸೇರಿವೆ. ವಿಕೆಟ್ ಕೀಪರ್ ಆಗಿ, ಅವರು 839 ಕ್ಯಾಚ್‌ಗಳನ್ನು ಹಿಡಿದಿದ್ದು, ಮತ್ತು 62 ಸ್ಟಂಪ್ಸ್ ಮಾಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಾರ್ಚ್ 30 ರಂದು ತನ್ನ ಮೊದಲ ಪಂದ್ಯವನ್ನು ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಆಡಲಿದೆ. ಈ ಪಂದ್ಯಕ್ಕೆ ಗುವಾಹಟಿ ಮೈದಾನ ಸಾಕ್ಷಿಯಾಗಲಿದೆ. ಎರಡನೇ ಪಂದ್ಯ ಏಪ್ರಿಲ್ 3 ರಂದು ಪಂಜಾಬ್ ಕಿಂಗ್ಸ್ ವಿರುದ್ಧ, ಏಪ್ರಿಲ್ 5 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ, ಏಪ್ರಿಲ್ 11 ರಂದು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಕಣಕ್ಕೆ ಇಳಿಯಲಿದೆ.