
ಐಪಿಎಲ್ 14ನೇ ಆವೃತ್ತಿಯ ಎರಡನೇ ಚರಣದ ಪಂದ್ಯಗಳು ಮುಂದಿನ ತಿಂಗಳಿನಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಚೆನ್ನೈಗೆ ತೆರಳಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಾಹಿ ಅಭ್ಯಾಸವನ್ನು ಆರಂಭಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಧೋನಿ ತಮಿಳು ಕ್ರಿಕೆಟ್ ಪ್ರೇಮಿಗಳ ಜೊತೆಗೆ ತಮಿಳು ಸಿನಿಮಾ ಪ್ರೇಮಿಗಳಿಗೂ ಅಚ್ಚರಿ ಮೂಡಿಸಿದ್ದಾರೆ.
ತಮಿಳು ಸ್ಟಾರ್ ನಟ, ದಳಪತಿ ವಿಜಯ್ ಸದ್ಯ 'ಬೀಸ್ಟ್' ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಫಸ್ಟ್ ಲುಕ್ ಮೂಲಕ ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದ್ದ 'ಬೀಸ್ಟ್' ಚಿತ್ರದ ಚಿತ್ರೀಕರಣ ಸದ್ಯ ಚೆನ್ನೈನಲ್ಲಿ ನಡೆಯುತ್ತಿದೆ. ಚೆನ್ನೈನ ಗೋಕುಲಮ್ ಸ್ಟುಡಿಯೋದಲ್ಲಿ ವಿಜಯ್ ಮತ್ತು ಬೀಸ್ಟ್ ತಂಡ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇಂದು (ಆಗಸ್ಟ್ 12) ಬೆಳಿಗ್ಗೆ ಚಿತ್ರೀಕರಣ ಪ್ರಾರಂಭ ಮಾಡಿದ್ದ ಬೀಸ್ಟ್ ತಂಡ ಚಿತ್ರೀಕರಣ ಸೆಟ್‌ಗೆ ಮಹೇಂದ್ರ ಸಿಂಗ್ ಧೋನಿ ಭೇಟಿ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ದಿಢೀರ್ ಆಗಿ ಸೆಟ್‌ನಲ್ಲಿ ಕಾಣಿಸಿಕೊಂಡ ಮಾಹಿಯನ್ನು ನೋಡಿ ಚಿತ್ರತಂಡ ಅಚ್ಚರಿ ಪಟ್ಟಿದೆ.
ಚಿತ್ರೀಕರಣ ಸೆಟ್‌ಗೆ ಬಂದ ಧೋನಿಯನ್ನು ದಳಪತಿ ವಿಜಯ್ ಆತ್ಮೀಯವಾಗಿ ಸ್ವಾಗತ ಮಾಡಿದ್ದಾರೆ. ಬಳಿಕ ವಿಜಯ್, ಧೋನಿಯನ್ನು ತನ್ನ ವ್ಯಾನಿಟ್ ವ್ಯಾನ್ ಒಳಗೆ ಕರೆದುಕೊಂಡು ಹೋಗಿ ಕೆಲವು ಸಮಯ ಮಾತುಕತೆ ನಡೆಸಿದ್ದಾರೆ. ಧೋನಿ ಸೆಟ್ ಗೆ ಭೇಟಿ ನೀಡಿರುವ ಫೋಟೋ ಮತ್ತು ವಿಜಯ್ ಜೊತೆ ಮಾತುಕತೆ ನಡೆಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಟ್ವಿಟ್ಟರ್ ನಲ್ಲಿ ವಿಜಯ್ ಟ್ರೆಂಡಿಂಗ್‌ನಲ್ಲಿದ್ದಾರೆ.
ಅಂದಹಾಗೆ ಧೋನಿಯನ್ನು ಬೀಸ್ಟ್ ಸೆಟ್ ನಲ್ಲಿ ದಿಢೀರ್ ನೋಡಿದ ಅಭಿಮಾನಿಗಳು ವಿಜಯ್ ಜೊತೆ ಬೀಸ್ಟ್ ನಲ್ಲಿ ಸಿನಿಮಾದಲ್ಲಿ ಏನಾದರೂ ಕಾಣಿಸಿಕೊಳ್ಳುತ್ತಾರಾ ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಮೂಲಗಳ ಪ್ರಕಾರ ಎಂ.ಎಸ್ ಧೋನಿ, ವಿಜಯ್ ನಟನೆಯ ಗೋಕುಲಮ್ ಸ್ಟೋಡಿಯೋಸ್ ಪಕ್ಕದಲ್ಲೇ ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರಂತೆ. ಹಾಗಾಗಿ ಅಲ್ಲೇ ಇದ್ದ ವಿಜಯ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಇಬ್ಬರ ಫೋಟೋಗಳನ್ನು ಅಭಿಮಾನಿಗಳು ಶೇರ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬ ಆಚರಿಸುತ್ತಿದ್ದಾರೆ. ಇಬ್ಬರನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಂದಹಾಗೆ ವಿಜಯ್ ಮತ್ತು ಧೋನಿ ಭೇಟಿಯಾಗುತ್ತಿರುವುದು ಇದೇ ಮೊದಲಲ್ಲ. 2008ರಲ್ಲೇ ಇಬ್ಬರು ಭೇಟಿಯಾಗಿ ಸ್ನೇಹಿತರಾಗಿದ್ದರು. ವಿಜಯ್ ಚೆನ್ನೈ ಸೂಪರ್ ಕಿಂಗ್ಸ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಆಗ ಇಬ್ಬರು ಕಾಣಿಸಿಕೊಂಡಿದ್ದರು. ಇಬ್ಬರು ಸಿ ಎಸ್ ಕೆ ಜೆರ್ಸಿ ತೊಟ್ಟು ಪೋಸ್ ನೀಡಿದ್ದರು. ಇದೀಗ ಅನೇಕ ವರ್ಷಗಳ ಬಳಿಕ ಮತ್ತೆ ಇಬ್ಬರೂ ಭೇಟಿಯಾಗಿದ್ದಾರೆ.
ಎಂ.ಎಸ್ ಧೋನಿ ಇತ್ತೀಚಿಗಷ್ಟೆ ಹೋಸ ಹೇರ್ ಸ್ಟೈಲ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ವಿಭಿನ್ನ ಕೇಶವಿನ್ಯಾಸದ ಮೂಲಕ ದರ್ಶನ ನೀಡಿದ್ದ ಧೋನಿಗೆ ಅಭಿಮಾನಿಗಳು ಮತ್ತು ಸಿನಿಮಾ ಗಣ್ಯರು ಸಹ ಫಿದಾ ಆಗಿದ್ದರು. ಧೋನಿ ಹೊಸ ಹೇರ್ ಸ್ಟೈಲ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದರೆ ಬೆನ್ನಲ್ಲೇ ಬೀಸ್ಟ್ ಸೆಟ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಈ ಬಾರಿಯ ಐಪಿಎಲ್‌ನ ಮೊದಲಾರ್ಧದ ಪಂದ್ಯಗಳು ಸಂಪೂರ್ಣವಾಗುತ್ತಿದ್ದಂತೆಯೇ ಐಪಿಎಲ್ ಬಯೋಬಬಲ್‌ನಲ್ಲಿ ಕೊರೊನಾವೈರಸ್ ಸ್ಪೋಟಗೊಂಡಿತ್ತು. ಇಡೀ ಟೂರ್ನಿಯನ್ನು ಮುಂದೂಡುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಈಗ ಐಪಿಎಲ್‌ನ ಉಳಿದ ಪಂದ್ಯಗಳನ್ನು ಮುಂದಿನ ತಿಂಗಳಿನಿಂದ ಯುಎಇನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಐಪಿಎಲ್‌ನ ಸಿದ್ಧತೆಗಾಗಿ ಒಂದು ತಿಂಗಳು ಮೊದಲು ಚೆನ್ನೈಗೆ ಆಗಮಿಸಿದ್ದಾರೆ. ಶೀಘ್ರದಲ್ಲಿಯೇ ಯುಎಇಗೆ ಚೆನ್ನೈ ತಂಡ ತೆರಳಲು ಸಿದ್ಧತೆಯನ್ನು ನಡೆಸುತ್ತಿದ್ದು ಅದಕ್ಕೆ ಪೂರಕವಾಗಿ ಅನುಮತಿ ಪಡೆಯುವ ಪ್ರಯತ್ನದಲ್ಲಿದೆ.