IPL 2023: CSK ಚಾಂಪಿಯನ್ ಪಟ್ಟಕ್ಕೇರಿದರೂ ಈ 4 ಆಟಗಾರರಿಗೆ ಮುಂದಿನ ಆವೃತ್ತಿಯಲ್ಲಿ ಇಲ್ಲ ಅವಕಾಶ!!
ಎಂಎಸ್ ಧೋನಿ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. 2023ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ರೋಚಕವಾಗಿ ನಡೆದ ಕಾದಾಟದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡವನ್ನು ಕೊನೆಯ ಎಸೆತದಲ್ಲಿ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ಬಳಿಕ ಐದು ಬಾರಿ ಐಪಿಎಲ್ ಚಾಂಪಿಯನ್ ಎನಿಸಿಕೊಂಡ ಎರಡನೇ ತಂಡವಾಗಿದೆ ಸಿಎಸ್‌ಕೆ.
ಇನ್ನು ಈ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಮುಂದಿನ ಐಪಿಎಲ್ ಆವೃತ್ತಿಯಲ್ಲಿಯೂ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದು ಫಿಟ್‌ನೆಸ್ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟಕ್ಕೇರಿದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಈ ನಾಲ್ವರು ಆಟಗಾರರು ಮುಂದಿನ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಆಡುವುದು ಅನುಮಾನ. ಈ ಬಾರಿಯ ಐಪಿಎಲ್‌ನ ಪ್ರದರ್ಶನದ ಆಧಾರದಲ್ಲಿ ಸಿಎಸ್‌ಕೆ ಫ್ರಾಂಚೈಸಿ ಕೆಲ ಆಟಗಾರರನ್ನು ಕೈಬಿಡುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಹಾಗಾದರೆ ಸಿಎಸ್‌ಕೆ ತಂಡದಲ್ಲಿ ಮುಂದಿನ ಆವೃತ್ತಿಯಲ್ಲಿ ಕಾಣಿಸಿಕೊಳ್ಳದಿರುವ ಸಾಧ್ಯತೆಯಿರುವ ನಾಲ್ಕು ಆಟಗಾರರು ಯಾರು? ಮುಂದೆ ಓದಿ..
ಖಂಡಿತಾ ಆಡಲ್ಲ ಅಂಬಾಟಿ ರಾಯುಡು
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಆಟಗಾರ ಅಂಬಾಟಿ ರಾಯುಡು ಈ ಬಾರಿಯ ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನವೇ ತಮ್ಮ ನಿವೃತ್ತಿಯನ್ನು ಖಚಿತಪಡಿಸಿದ್ದಾರೆ. 2023ರ ಆವೃತ್ತಿ ತನ್ನ ಕಟ್ಟ ಕಡೆಯ ಐಪಿಎಲ್ ಟೂರ್ನಿ ಎಂದಿದ್ದಾರೆ ರಾಯುಡು. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಸಿಎಸ್‌ಕೆ ತಂಡ ಅನಿವಾರ್ಯವಾಗಿ ಅಂಬಾಟಿ ರಾಯುಡು ಅವರ ಸೇವೆಯನ್ನು ಕಳೆದುಕೊಳ್ಳಲಿದೆ. ಮುಂದಿನ ಆವೃತ್ತಿಗೂ ಮುನ್ನ ಸಿಎಸ್‌ಕೆ ತಂಡದಿಂದ ಬಿಡುಗಡೆಗೊಳಿಸುವ ಪಟ್ಟಿಯಲ್ಲಿ ರಾಯುಡು ಹೆಸರು ಕೂಡ ಇರುವುದು ಖಚಿತ.
ನಿರೀಕ್ಷೆ ಮೂಡಿಸಿದ್ದ ಸಿಸಂಡ ಮಗಲ
ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದು ದಕ್ಷಿಣ ಆಫ್ರಿಕಾದ ಬೌಲರ್ ಸಿಸಂಡ ಮಗಲ ಮೇಲೆ. ನ್ಯೂಜಿಲೆಂಡ್ ಆಲ್‌ರೌಂಡರ್ ಕೇಲ್ ಜೇಮಿಸನ್ ಬದಲಿಗೆ ಈ ಆವೃತ್ತಿಯಲ್ಲಿ ಸಿಎಸ್‌ಕೆ ತಂಡವನ್ನು ಸೇರಿಕೊಂಡಿದ್ದರು. ಆದರೆ ಮಗಲ ಈ ಟೂರ್ನಿಯಲ್ಲಿ ಕೇವಲ ಎರಡು ಪಂದ್ಯಗಳನ್ನು ಮಾತ್ರವೇ ಆಡಿದ್ದು ಬಳಿಕ ಗಾಯಗೊಂಡರು. ಮುಂದಿನ ಐಪಿಎಲ್ ಆವೃತ್ತಿಗೆ ಸಿಎಸ್‌ಕೆ ಜೆಮಿಸನ್ ಅಥವಾ ಮಗಲ ಈ ಇಬ್ಬರ ಪೈಕಿ ಒಬ್ಬರನ್ನು ಮಾತ್ರವೇ ಆಯ್ಕೆ ಮಾಡಿಕೊಳ್ಳಬೇಕಿದೆ. ಹೀಗಾಗಿ ಜೇಮಿಸನ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್
ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ವಿಶ್ವದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಗಾಯದ ಗಾರಣದಿಂದಾಗಿ ಬೆನ್ ಸ್ಟೋಕ್ಸ್ ಈ ಬಾರಿಯ ಐಪಿಎಲ್‌ನಲ್ಲಿ ಹೆಚ್ಚಿನ ಪಂದ್ಯಗಳಲ್ಲಿ ಆಡುವ ಅವಕಾಶ ಕಳೆದುಕೊಂಡರು. ಬೆನ್ ಸ್ಟೋಕ್ಸ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಸಿಎಸ್‌ಕೆ ತಂಡ ಬರೊಬ್ಬರಿ 16.25 ಕೋಟಿ ಮೊತ್ತವನ್ನು ಖರ್ಚು ಮಾಡಿತ್ತು. ಆದರೆ ನಿರ್ಣಾಯಕ ಘಟ್ಟಕ್ಕೆ ಸ್ಟೋಕ್ಸ್ ಟೂರ್ನಿಯಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದರು. ಹೀಗಾಗಿ ಮುಂದಿನ ಆವೃತ್ತಿಗೆ ರೀಟೈನ್ ಮಾಡಿಕೊಳ್ಳುವ ಮುನ್ನ ಸಿಎಸ್‌ಕೆ ಖಮಡಿತಾ ಎರಡೆರಡು ಬಾರಿ ಯೋಚಿಸಲಿದೆ.
ಯುವ ವೇಗಿ ಆಕಾಶ್ ಸಿಂಗ್
ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಮುಖೇಶ್ ಚೌಧರಿಗೆ ಬದಲಿ ಆಟಗಾರನಾಗಿ ಸಿಎಸ್‌ಕೆ ತಂಡದಲಿ ಸ್ಥಾನ ಪಡೆದುಕೊಂಡಿದ್ದು ಆಕಾಶ್ ಸಿಂಗ್. ಈ ಇಬ್ಬರು ಆಟಗಾರರಲ್ಲಿ ಒಬ್ಬರನ್ನು ಉಳಿಸಿಕೊಳ್ಳಬೇಕಾ ಅಥವಾ ಇಬ್ಬರನ್ನು ಕೂಡ ಉಳಿಸಿಕೊಳ್ಳಬೇಕಾ ಎಂಬುದು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ತೀರ್ಮಾನಕ್ಕೆ ಬಿಟ್ಟಿರುವುದು. ಆದರೆ 2024ರ ಐಪಿಎಲ್ ಆವೃತ್ತಿಗೆ ಮುಖೇಶ್ ಚೌಧರಿ ಫಿಟ್ ಆಗಿದ್ದರೆ ಆಕಾಶ್ ಸಿಂಗ್ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಹೆಚ್ಚಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications