CSK vs KKR: ಸಿಎಸ್‌ಕೆ ಗೆಲುವಿಗೆ ಕಾರಣವಾಗಿದ್ದೇ ಒಂದು ಓವರ್‌ನಲ್ಲಿ ಬಿದ್ದ 2 ವಿಕೆಟ್
ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ನಡುವಣ ಹೈ-ವೋಲ್ಟೇಜ್ ಪಂದ್ಯ ಚೆನ್ನೈನ ಚೆಪಾಕ್ ಮೈದಾನದಲ್ಲಿ ಮಂಗಳವಾರ ನಡೆಯಿತು. ಈ ಪಂದ್ಯದಲ್ಲಿ ಉಭಯ ತಂಡಗಳು ಎರಡು ಅಂಕಗಳಿಗೆ ಕಾದಟ ನಡೆಸಿದ್ದವು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಮೊದಲು ಬೌಲಿಂಗ್ ಮಾಡಲು ಮುಂದಾಯಿತು. ನಾಯಕ ರುತುರಾಜ್ ಗಾಯಕ್ವಾಡ್ ಬೇಗನೆ ಔಟ್ ಆದರು. ಚೆನ್ನೈ ತಂಡದ ಆರಂಭಿಕ ಸಂಜು ಸ್ಯಾಮ್ಸನ್ 32 ಎಸೆತಗಳಲ್ಲಿ 48 ರನ್ ಸಿಡಿಸಿದರು. ಇನ್ನು ಮಿಡ್ಲ್ ಓವರ್‌ಗಳಲ್ಲಿ ಪವರ್ ಹಿಟರ್ ಡೆವಾಲ್ಡ್ ಬ್ರೆವಿಸ್ 29 ಎಸೆತಗಳಲ್ಲಿ 41 ರನ್ ಸಿಡಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಆಯುಷ್ ಮಾತ್ರೆ 17 ಎಸೆತಗಳಲ್ಲಿ 38 ರನ್ ಸಿಡಿಸಿ ತಂಡಕ್ಕೆ ನೆರವಾದರು. ಈ ಆಟಗಾರರ ಬ್ಯಾಟಿಂಗ್ ನೆರವಿನಿಂದ ಚೆನ್ನೈ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 192 ರನ್ ಸೇರಿಸಿತು.

ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ಕೆಕೆಆರ್ ತಂಡ ಆಕ್ರಮಣಕಾರಿ ಶೈಲಿಯಿಂದ ಆರಂಭಿಸಿತು. ಆದರೆ ಆರಂಭಿಕರ ಆಟಕ್ಕೆ ಬ್ರೇಕ್ ಹಾಕುವಲ್ಲಿ ಚೆನ್ನೈ ಬೌಲರ್‌ಗಳು ಆರಂಭದಲ್ಲಿ ಯಶ ಕಂಡರು. ತಂಡ ಪವರ್ ಪ್ಲೇನಲ್ಲಿ 2 ವಿಕೆಟ್ ಕಳೆದುಕೊಂಡಿತ್ತು. ಅಲ್ಲದೆ ರನ್ ಗತಿ ಸಹ ನಿಧಾನವಾಗಿತ್ತು. ಯುವ ಬ್ಯಾಟರ್ ಅಂಗ್‌ಕ್ರಿಷ್ ರಘುವಂಶಿ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 27 ರನ್ ಸಿಡಿಸಿ ಅಕೇಲ್ ಹೊಸೈನ್ ಅವರಿಗೆ ವಿಕೆಟ್ ಒಪ್ಪಿಸಿದರು.
ಒಂದೇ ಓವರ್‌ನಲ್ಲಿ ಕ್ಷೀಣಿಸಿದ ಗೆಲುವಿನ ಆಸೆ
ಕೆಕೆಆರ್ ತಂಡಕ್ಕೆ ಮೊದಲ ಗೆಲುವಿನ ಮಾಲೆ ತೊಡಿಸಲೇ ಬೇಕು ಎಂಬ ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಮಾಡುತ್ತಿದ್ದ ಅಜಿಂಕ್ಯ ರಹಾನೆ ಅವರ ತಾಳ್ಮೆಗೆ ಅಫ್ಘಾನಿಸ್ತಾನದ ಸ್ಪಿನ್ ಬೌಲರ್ ನೂರ್ ಅಹ್ಮದ್ ಬ್ರೇಕ್ ಹಾಕಿದರು. ರಹಾನೆ ಅವರು ನೂರ್ ಅಹ್ಮದ್ ಅವರ ಗೂಗ್ಲಿಯನ್ನು ತಪ್ಪಾಗಿ ಗ್ರಹಿಸಿದರು. ಎಕ್ಸ್‌ಟ್ರಾ ಕವರ್ ಮೇಲೆ ಬಾರಿಸಲು ಹೋಗಿ ಅಲ್ಲಿಯೇ ನಿಂತಿದ್ದ ರುತುರಾಜ್ ಗಾಯಕ್ವಾಡ್ ಅವರಿಗೆ ಕ್ಯಾಚ್ ನೀಡಿದರು.

ಅಜಿಂಕ್ಯ ರಹಾನೆ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ಕ್ಯಾಮರೂನ್ ಗ್ರೀನ್ ಅವರನ್ನು ಔಟ್ ಮಾಡಲು ನೂರ್ ಅಹ್ಮದ್ ಬ್ಯಾಕ್ ಆಫ್ ಲೆಂಥ್ ಔಟ್ ಸೈಡ್ ಆಫ್ ಸ್ಟಂಪ್‌ಗೆ ಎಸೆದರು. ಕ್ಯಾಮರೂನ್ ಗ್ರೀನ್ ಈ ಎಸೆತವನ್ನು ಸ್ಕ್ವೇರ್ ಕಡೆ ಕಟ್ ಮಾಡಲು ಹೋಗಿ ಮಿಸ್ ಆದರು. ಚೆಂಡು ನೆರವಾಗಿ ಮಿಡ್ಲ್ ಸ್ಟಂಪ್‌ಗೆ ಮುತ್ತಿಟ್ಟಿತು. ಇಲ್ಲಿಂದ ಕೆಕೆಆರ್ ಚೇತರಿಸಿಕೊಳ್ಳಲು ಹೆಣಗಾಟ ನಡೆಸಿತು.
ಕೆಳ ಮಧ್ಯಮ ಕ್ರಮಾಂಕದಲ್ಲಿ ರೋವನ್ ಪೊವೆಲ್ (ಅಜೇಯ 31) ಹಾಗೂ ರಮಣದೀಪ್ ಸಿಂಗ್ 35 ರನ್ ಸಿಡಿಸಿ ಸೋಲಿನ ಅಂತರವನ್ನು ಕಡಿಮೆ ಮಾಡುವಲ್ಲಿ ಸಫಲರಾದರು. ಚೆನ್ನೈ ತಂಡದ ಪರ ನೂರ್ ಅಹ್ಮದ್ 3 ವಿಕೆಟ್ ಪಡೆದರು. ಇವರ ಭರ್ಜರಿ ಬೌಲಿಂಗ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications