CSK Vs SRH: ಮೈದಾನದಲ್ಲೇ ಸಂಜು ಸ್ಯಾಮ್ಸನ್-ಕ್ಲಾಸೆನ್ ಜಟಾಪಟಿ, ಭಾರಿ ವೈರಲ್
CSK Vs SRH IPL 2026: ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಮೇ 18ರಂದು ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೋಲೊಪ್ಪಿಕೊಂಡಿದೆ. ಆದರೆ ಪಂದ್ಯದ ಫಲಿತಾಂಶಕ್ಕಿಂತ ಹೆಚ್ಚಾಗಿ ಮೈದಾನದಲ್ಲಿ ನಡೆದ ಸಂಜು ಸ್ಯಾಮ್ಸನ್ ಮತ್ತು ಹೆನ್ರಿಚ್ ಕ್ಲಾಸನ್ ನಡುವಿನ ಮಾತಿನ ಚಕಮಕಿ ಈಗ ಕ್ರೀಡಾ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಸನ್ ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ 15ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿತು. ನೂರ್ ಅಹ್ಮದ್ ಎಸೆತದಲ್ಲಿ ಕ್ರೀಸ್ ಬಿಟ್ಟು ಆಡಲು ಯತ್ನಿಸಿದ ಕ್ಲಾಸನ್ ಅವರನ್ನು ಸಂಜು ಸ್ಯಾಮ್ಸನ್ ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಸ್ಟಂಪ್ ಔಟ್ ಮಾಡಿದರು. ಸಂಜು ಅವರ ಈ ವೇಗವು ಅಭಿಮಾನಿಗಳಿಗೆ ದಿಗ್ಗಜ ಕೀಪರ್ ಎಂ.ಎಸ್. ಧೋನಿ ಅವರ ಕೌಶಲವನ್ನು ನೆನಪಿಸಿತು.

ಸಂಜು ಹಾಗೂ ಕ್ಲಾಸೆನ್ ಜಗಳಕ್ಕೆ ಕಾರಣವೇನು?
ಸಿಎಸ್‌ಕೆ ಬೌಲರ್‌ಗಳನ್ನು ದಂಡಿಸುತ್ತಿದ್ದ ಕ್ಲಾಸನ್ 47 ರನ್ ಗಳಿಸಿ ಔಟ್ ಆದ ನಂತರ ತೀವ್ರ ಅಸಮಾಧಾನಗೊಂಡರು. ಪೆವಿಲಿಯನ್‌ಗೆ ಮರಳುವ ವೇಳೆ ಸಂಜು ಸ್ಯಾಮ್ಸನ್ ಅವರತ್ತ ತಿರುಗಿ ಏನೋ ಹೇಳಿದ್ದು ವಾಗ್ವಾದಕ್ಕೆ ಕಾರಣವಾಯಿತು. ಸಾಮಾನ್ಯವಾಗಿ ಮೈದಾನದಲ್ಲಿ ಕೂಲ್ ಆಗಿರುವ ಸಂಜು ಕೂಡ ಅಷ್ಟೇ ಆಕ್ರಮಣಕಾರಿಯಾಗಿ ತಿರುಗೇಟು ನೀಡಿದರು. ಕೊನೆಗೆ ಶಿವಂ ದುಬೆ, ನೂರ್ ಅಹ್ಮದ್ ಮತ್ತು ಅಂಪೈರ್‌ಗಳು ಮಧ್ಯಪ್ರವೇಶ ಮಾಡಿ ಇಬ್ಬರನ್ನೂ ಸಮಾಧಾನಪಡಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.
ಪ್ಲೇ ಆಫ್‌ಗೆ ಲಗ್ಗೆ ಇಟ್ಟ ಎಸ್‌ಆರ್‌ಎಚ್, ಜಿಟಿ
ಈ ಗೆಲುವಿನೊಂದಿಗೆ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ಪ್ಲೇಆಫ್‌ಗೆ ಅಧಿಕೃತವಾಗಿ ಲಗ್ಗೆ ಇಟ್ಟಿವೆ. ಈಗಾಗಲೇ ಅಂಕಪಟ್ಟಿಯ ಅಗ್ರಸ್ಥಾನಲ್ಲಿ ಆರ್‌ಸಿಬಿ ತನ್ನ ಸ್ಥಾನ ಖಚಿತಪಡಿಸಿಕೊಂಡಿದೆ. ಇನ್ನೂ ನಿನ್ನೆ 180 ರನ್ ಗಳಿಸಿದರೂ ಆ ರನ್‌ಗಳನ್ನ ರಕ್ಷಿಸಿಕೊಳ್ಳುವಲ್ಲಿ ವಿಫಲವಾದ ಚೆನ್ನೈಗೆ ಈಗ ಕೊನೆಯ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಜೊತೆಗೆ ಇತರ ತಂಡಗಳ ಸೋಲು-ಗೆಲುವಿನ ಮೇಲೆ ಅವರ ಭವಿಷ್ಯ ನಿರ್ಧಾರವಾಗಲಿದೆ. ಗೆಲುವಿನ ನಂತರ ಮಾತನಾಡಿದ ಎಸ್‌ಆರ್‌ಹೆಚ್ ಕ್ಯಾಪ್ಟನ್ ಪ್ಯಾಟ್ ಕಮ್ಮಿನ್ಸ್, "ಪಿಚ್ ಬ್ಯಾಟಿಂಗ್‌ಗೆ ಕಠಿಣವಾಗಿದ್ದರೂ ಇಶಾನ್ ಮತ್ತು ಕ್ಲಾಸನ್ ತೋರಿದ ಧೈರ್ಯ ಮೆಚ್ಚುವಂತದ್ದು," ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಸಿಎಸ್‌ಕೆ ವಿರುದ್ಧ ಎಸ್‌ಆರ್‌ಎಚ್ ಭರ್ಜರಿ ಗೆಲುವು
ಟಾಸ್ ಗೆದ್ದ ಸಿಎಸ್‌ಕೆ ನಾಯಕ ಋತುರಾಜ್ ಗಾಯಕ್ವಾಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಡೆವಾಲ್ಡ್ ಬ್ರೆವಿಸ್ ಅವರ ಸ್ಫೋಟಕ 44 ರನ್ ಹಾಗೂ ಕಾರ್ತಿಕ್ ಶರ್ಮಾ (32) ಅವರ ಹೋರಾಟದ ನೆರವಿನಿಂದ ಸಿಎಸ್‌ಕೆ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿತು. ಸಂಜು ಸ್ಯಾಮ್ಸನ್ ಮತ್ತು ಶಿವಂ ದುಬೆ ತಲಾ 26 ರನ್ ಗಳಿಸಿದರೂ ತಂಡಕ್ಕೆ ಬೃಹತ್ ಮೊತ್ತ ತಂದುಕೊಡಲು ಸಾಧ್ಯವಾಗಲಿಲ್ಲ.
ಹೈದರಾಬಾದ್ ಪರ ನಾಯಕ ಪ್ಯಾಟ್ ಕಮ್ಮಿನ್ಸ್ ಕೇವಲ 28 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆಯುವ ಮೂಲಕ ಚೆನ್ನೈ ಓಟಕ್ಕೆ ಬ್ರೇಕ್ ಹಾಕಿದರು. ಸಾಕಿಬ್ ಹುಸೇನ್ 2 ವಿಕೆಟ್ ಪಡೆದು ಉತ್ತಮ ಸಾಥ್ ನೀಡಿದರು. ಇನ್ನೂ 181 ರನ್‌ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ ಆರಂಭದಲ್ಲಿ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅವರ ವಿಕೆಟ್ ಕಳೆದುಕೊಂಡಿತು. ಆದರೆ ಆರಂಭಿಕ ಇಶಾನ್ ಕಿಶನ್ (70 ರನ್, 47 ಎಸೆತ) ಜವಾಬ್ದಾರಿಯುತ ಆಟವಾಡಿದರು. ಅವರಿಗೆ ಹೆನ್ರಿಚ್ ಕ್ಲಾಸನ್ (47 ರನ್, 26 ಎಸೆತ) ಉತ್ತಮ ಸಾಥ್ ನೀಡಿದ್ದರಿಂದ ಎಸ್‌ಆರ್‌ಹೆಚ್ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications