ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ 2025 ರಲ್ಲಿ ಸೋಲಿನ ಸುಳಿಯಿಂದ ಹೊರಬರಲು ಹೆಣಗಾಡುತ್ತಿದೆ. ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಐಪಿಎಲ್ 2025 ರ 43ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ದಾಖಲೆಯ ಗೆಲುವು ಸಾಧಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸನ್‌ರೈಸರ್ಸ್ ಹೈದರಾಬಾದ್ 5 ವಿಕೆಟ್‌ಗಳಿಂದ ಸೋಲಿಸಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 19.5 ಓವರ್‍ಗಳಲ್ಲಿ 154 ರನ್‌ಗಳಿಗೆ ಆಲೌಟ್ ಆಯಿತು. ಚೆನ್ನೈ ನೀಡಿದ 155 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಹೈದರಾಬಾದ್ 18.4 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿ ಗೆಲುವು ನಗೆ ಬೀರಿತು.

ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 155 ರನ್‌ಗಳ ಸಾಧಾರಣ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಖಾತೆ ತೆರೆಯುವ ಮುನ್ನವೇ ಅಭಿಷೇಕ್ ಶರ್ಮಾ ಔಟಾದರು. ಬಳಿಕ ಬಂದ ಇಶಾನ್ ಕಿಶನ್ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರು. ಟ್ರಾವಿಸ್ ಹೆಡ್ 19 ರನ್ ಗಳಿಸಿ ಔಟಾದರೆ, ಇಶಾನ್ ಕಿಶನ್ 44 ರನ್ ಗಳಿಸುವ ಮೂಲಕ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದರು.
ಮಧ್ಯಮ ಕ್ರಮಾಂಕದಲ್ಲಿ ಅನಿಕೇತ್ ವರ್ಮಾ 19 ರನ್ ಮತ್ತು ಹೆನ್ರಿಚ್ ಕ್ಲಾಸೆನ್ 7 ರನ್ ಗಳಿಸಿದರು. ಕಮಿಂದು ಮೆಂಡಿಸ್ 22 ಎಸೆತಗಳಲ್ಲಿ ಅಜೇಯ 33 ರನ್ ಗಳಿಸಿದರೆ, ನಿತೀಶ್ ಕುಮಾರ್ ರೆಡ್ಡಿ 13 ಎಸೆತಗಳಲ್ಲಿ 19 ರನ್ ಗಳಿಸುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಚೆಪಾಕ್ ಅಂಗಳದಲ್ಲಿ ದಾಖಲೆಯ ಗೆಲುವು ತಂದು ಕೊಟ್ಟರು. ಈ ಗೆಲುವಿನೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ 6 ಅಂಕಗಳೊಂದಿಗೆ 8ನೇ ಸ್ಥಾನಕ್ಕೇರಿದೆ. ಉಳಿದ ಐದೂ ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಪ್ಲೇಆಫ್ ತಲುಪುವ ಅವಕಾಶ ಸಾಧ್ಯತೆ ಇದೆ. ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇ ಆಫ್ ರೇಸ್‌ಯಿಂದ ಹೊರ ಬಿದ್ದಿದೆ.
ಚೆಪಾಕ್ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆಲೌಟ್ ಮಾಡುವಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್ ಪ್ರಮುಖ ಪಾತ್ರ ವಹಿಸಿದರು. ಬಿಗಿ ಬೌಲಿಂಗ್ ದಾಳಿ ನಡೆಸಿ ಹರ್ಷಲ್ ಪಟೇಲ್ ಚೆನ್ನೈ ಬ್ಯಾಟರ್ಸ್ ತವರಿನಲ್ಲಿ ಬಾಲವನ್ನು ಬಿಚ್ಚಲು ಬಿಡಲಿಲ್ಲ. ಹರ್ಷಲ್ ಪಟೇಲ್ ಚೆನ್ನೈ ತಂಡದ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದರು. ಈ ಮೂಲಕ ಬೌಲಿಂಗ್‌ನಲ್ಲಿ ಹೈದರಬಾದ್ ತಂಡದ ಗೆಲುವಿಗೆ ಕಾರಣವಾದರು. ಹರ್ಷಲ್ ಪಟೇಲ್ ತಮ್ಮ 4 ಓವರ್‍ಗಳ ಕೋಟಾದಲ್ಲಿ 28 ರನ್ ನೀಡಿ ಸ್ಯಾಮ್ ಕುರಾನ್, ಡೆವಾಲ್ಡ್ ಬ್ರೆವಿಸ್, ಎಂಎಸ್ ಧೋನಿ ಮತ್ತು ನೂರ್ ಅಹ್ಮದ್ ಅವರ ವಿಕೆಟ್‌ಗಳನ್ನು ಕಬಳಿಸಿದರು. ಈ ಅದ್ಭುತ ಬೌಲಿಂಗ್ ಪ್ರದರ್ಶನಕ್ಕೆ ಅವರಿಗೆ "ಅತ್ಯುತ್ತಮ ಮೌಲ್ಯಯುತ ಆಟಗಾರ' ಪ್ರಶಸ್ತಿ ಸಿಕ್ಕಿತು.
ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮ್ಮಿನ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ತವರಿನಲ್ಲಿ ಬಿಗ್ ಸ್ಕೋರ್ ಕಲೆ ಹಾಕುವ ನಿರೀಕ್ಷೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕಣಕ್ಕಿಳಿಯಿತು. ಆದರೆ, ಸಿಎಸ್‌ಕೆ ಅಂದುಕೊಂಡಂತೆ ಉತ್ತಮ ಆರಂಭ ನಡೆಯಲಿಲ್ಲ. ಆರಂಭದಲ್ಲೇ ಸಿಎಸ್‌ಕೆ 74 ರನ್‌ಗಳಿಗೆ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡಿತು.
ಶೇಕ್ ರಶೀದ್ ಮೊದಲ ಎಸೆತದಲ್ಲಿ ಶೂನ್ಯಕ್ಕೆ ಔಟಾದರೆ, ಸ್ಯಾಮ್ ಕುರಾನ್ ಕೇವಲ 9 ರನ್‌ಗಳಿಗೆ ಔಟಾದರು. ಅದ್ಭುತವಾಗಿ ಆಡುತ್ತಿದ್ದ ಆಯುಷ್ ಮ್ಹಾತ್ರೆ 30 ರನ್‌ಗಳಿಗೆ ತಮ್ಮ ಇನ್ನಿಂಗ್ಸ್ ಅನ್ನು ನಿಲ್ಲಿಸಿದರು. ಮತ್ತೊಂದೆಡೆ ರವೀಂದ್ರ ಜಡೇಜಾ ಕೂಡ 21 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು. ಇಲ್ಲಿಂದ ಸತತವಾಗಿ ಚೆನ್ನೈ ತಂಡ ವಿಕೆಟ್ ಕಳೆದುಕೊಂಡಿತು.
ಚೆನ್ನೈ ಸೂಪರ್ ಕಿಂಗ್ಸ್ ಸತತವಾಗಿ ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ಡೆವಾಲ್ಡ್ ಬ್ರೆವಿಸ್ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದರು. ಡೆವಾಲ್ಡ್ ಬ್ರೆವಿಸ್ ಕೇವಲ 25 ಎಸೆತಗಳಲ್ಲಿ 1 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ನೆರವಿನಿಂದ 42 ರನ್‌ಗಳನ್ನು ಕಲೆ ಹಾಕಿದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ 150 ರನ್‌ಗಳ ಗಡಿ ದಾಟಲು ನೆರವಾದರು. ಆದರೆ ಕಮಿಂದು ಮೆಂಡಿಸ್ ಹಿಡಿದ ಅದ್ಭುತ ಕ್ಯಾಚ್‌ಗೆ ಡೆವಾಲ್ಡ್ ಬ್ರೆವಿಸ್ ಔಟಾದರು.
ಡೆವಾಲ್ಡ್ ಬ್ರೆವಿಸ್ ವಿಕೆಟ್ ಕಳೆದುಕೊಂಡ ನಂತರ ಬಂದ ಶಿವಂ ದುಬೆ 12, ಎಂಎಸ್ ಧೋನಿ 6, ಅನ್ಶುಲ್ ಕಾಂಬೋಜ್ 2, ನೂರ್ ಅಹ್ಮದ್ 2, ಖಲೀಲ್ ಅಹ್ಮದ್ 1, ದೀಪಕ್ ಹೂಡಾ 22 ರನ್ ಗಳಿಸಿದರು. ಪರಿಣಾಮ ಚೆನ್ನೈ 154 ರನ್‌ಗಳನ್ನು ಗಳಿಸಿತು.
ಹೈದರಾಬಾದ್ ಪರ ಹರ್ಷಲ್ ಪಟೇಲ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ 4 ವಿಕೆಟ್ ಕಬಳಿಸಿದರೆ, ಜಯದೇವ್ ಉನದ್ಕತ್ ಮತ್ತು ಪ್ಯಾಟ್ ಕಮ್ಮಿನ್ಸ್ ತಲಾ 2 ವಿಕೆಟ್ ಉರುಳಿಸಿದರು. ಕಮಿಂದು ಮೆಂಡಿಸ್ ಹಾಗು ಮೊಹಮ್ಮದ್ ಶಮಿ ಕೂಡ ತಲಾ ಒಂದೊಂದು ವಿಕೆಟ್ ಪಡೆದರು.
ಚೆನ್ನೈ ಸೂಪರ್ ಕಿಂಗ್ಸ್: ಶೇಕ್ ರಶೀದ್, ಆಯುಷ್ ಮ್ಹಾತ್ರೆ, ದೀಪಕ್ ಹೂಡಾ, ಸ್ಯಾಮ್ ಕುರಾನ್, ರವೀಂದ್ರ ಜಡೇಜಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಎಂಎಸ್ ಧೋನಿ (ನಾಯಕ ಮತ್ತು ವಿಕೆಟ್‌ಕೀಪರ್), ನೂರ್ ಅಹ್ಮದ್, ಖಲೀಲ್ ಅಹ್ಮದ್, ಮಥೀಶ ಪತಿರಾಣ.
ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್‌ಕೀಪರ್), ಅನಿಕೇತ್ ವರ್ಮಾ, ಕಮಿಂದು ಮೆಂಡಿಸ್, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಜಯದೇವ್ ಉನಾದ್ಕತ್, ಜೀಶನ್ ಅನ್ಸಾರಿ, ಮೊಹಮ್ಮದ್ ಶಮಿ.