CSK vs SRH: ಪ್ಯಾಟ್ ಕಮಿನ್ಸ್, ಹುಸೇನ್ ದಾಳಿಗೆ ಸಿಎಸ್‌ಕೆ ಕಂಗಾಲು
ಚೆನ್ನೈ: ವೇಗದ ಬೌಲರ್ ಹಾಗೂ ನಾಯಕ ಪ್ಯಾಟ್ ಕಮಿನ್ಸ್ (28ಕ್ಕೆ 3) ಹಾಗೂ ಸಕೀಬ್ ಹುಸೇನ್ (34ಕ್ಕೆ 2) ಇವರ ಭರ್ಜರಿ ಪ್ರದರ್ಶನದ ಬಲದಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ 19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 63ನೇ ಪಂದ್ಯದಲ್ಲಿ 180 ರನ್‌ಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು ಕಟ್ಟಿ ಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸಿಎಸ್‌ಕೆ ತಂಡದ ಆರಂಭ ಸಾಧಾರಣವಾಗಿತ್ತು. ಭರವಸೆಯ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ 27 ರನ್ ಬಾರಿಸಿ ಔಟ್ ಆದರು. ಇವರ ಕ್ಲಾಸ್ ಇನಿಂಗ್ಸ್‌ನಲ್ಲಿ 5 ಬೌಂಡರಿ, 1 ಸಿಕ್ಸರ್‌ಗಳು ಸೇರಿವೆ. ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟರ್ ಉರ್ವಿಲ್ ಪಟೇಲ್ 2 ಸಿಕ್ಸರ್ ನೆರವಿನಿಂದ 13 ರನ್ ಬಾರಿಸಿ ಔಟ್ ಆದರು.

ಕಳೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಯುವ ಆಟಗಾರ ಕಾರ್ತಿಕ್ ಶರ್ಮಾ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಇವರು 19 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 32 ರನ್ ಸಿಡಿಸಿದರು. ನಾಯಕ ರುತುರಾಜ್ ಗಾಯಕ್ವಾಡ್ (15) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಇವರು ಪ್ಯಾಟ್ ಕಮಿನ್ಸ್ ತೋಡಿದ ಖೆಡ್ಡಾಗೆ ಬಲಿಯಾದರು.
5ನೇ ವಿಕೆಟ್‌ಗೆ ಭರ್ಜರಿ ಜೊತೆಯಾಟ
5ನೇ ವಿಕೆಟ್‌ಗೆ ಶಿವಂ ದುಬೆ ಹಾಗೂ ಡೆವಾಲ್ಡ್ ಬ್ರೆವಿಸ್ ಜೋಡಿ ಉತ್ತಮ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ಈ ಜೋಡಿ 38 ಎಸೆತಗಳಲ್ಲಿ 59 ರನ್ ಸೇರಿಸಿತು. ಈ ಜೋಡಿಯ ಉತ್ತಮ ಜೊತೆಯಾಟದ ಪರಿಣಾಮ ಚೆನ್ನೈ ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ನೀಡುವಲ್ಲಿ ಸಫಲವಾಯಿತು. 27 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ನೆರವಿನಿಂದ ಬ್ರೆವಿಸ್ 44 ರನ್ ಸಿಡಿಸಿದರು. ಆಲ್‌ರೌಂಡರ್ ಶಿವಂ ದುಬೆ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 26 ರನ್ ಬಾರಿಸಿ ಔಟ್ ಆದರು.
ಅಂತಿಮವಾಗಿ ಚೆನ್ನೈ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 180 ರನ್ ಸೇರಿಸಿತು. ಎಸ್‌ಆರ್‌ಎಚ್ ತಂಡದ ಪರ ಪ್ಯಾಟ್ ಕಮಿನ್ಸ್ 28 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಸಕೀಬ್ ಹುಸೇನ್ 34 ರನ್ ನೀಡಿ 2 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications