CWG 2022: ಅಬ್ಬರಿಸಿದ ಸ್ಮೃತಿ ಮಂಧಾನ; ಕಾಮನ್‍ವೆಲ್ತ್ ಕ್ರಿಕೆಟ್‍ನಲ್ಲಿ ಫೈನಲ್ ಪ್ರವೇಶಿಸಿದ ಭಾರತ ವನಿತೆಯರು

ಪ್ರಸ್ತುತ ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದ ಕ್ರಿಕೆಟ್ ವಿಭಾಗದಲ್ಲಿ ಭಾರತ ವನಿತೆಯರು ಒಂದನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವನಿತೆಯರನ್ನು ಸೋಲಿಸುವುದರ ಮೂಲಕ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿದ್ದಾರೆ.
ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತೆಯರು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಕಲೆ ಹಾಕುವುದರ ಮೂಲಕ ಬಲಿಷ್ಠ ಇಂಗ್ಲೆಂಡ್ ವನಿತೆಯರಿಗೆ 165 ರನ್‌ಗಳ ಪೈಪೋಟಿಯುತ ಗುರಿಯನ್ನು ನೀಡಿತ್ತು. ಅತ್ತ ಟೀಂ ಇಂಡಿಯಾ ನೀಡಿದ ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಇಂಗ್ಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಕಲೆಹಾಕಿತು. ಈ ಮೂಲಕ ಭಾರತ 4 ರನ್‌ಗಳ ರೋಚಕ ಜಯ ಸಾಧಿಸಿದ್ದು ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದ ಚೊಚ್ಚಲ ಕ್ರಿಕೆಟ್ ಆವೃತ್ತಿಯಲ್ಲಿಯೇ ಫೈನಲ್ ಪಂದ್ಯಕ್ಕೆ ಲಗ್ಗೆಯಿಟ್ಟಿದೆ.

ಭಾರತದ ಇನ್ನಿಂಗ್ಸ್
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಆರಂಭಿಕ ಆಟಗಾರ್ತಿಯರಾಗಿ ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ಕಣಕ್ಕಿಳಿದರು. ಈ ಪೈಕಿ ಶೆಫಾಲಿ ವರ್ಮಾ 15 ರನ್ ಕಲೆಹಾಕಿ ಔಟ್ ಆದರೆ, ಸ್ಮೃತಿ ಮಂಧಾನಾ 32 ಎಸೆತಗಳಲ್ಲಿ ಬರೋಬ್ಬರಿ 61 ರನ್ ಚಚ್ಚುವುದರ ಮೂಲಕ ಅಕ್ಷರಶಃ ಅಬ್ಬರಿಸಿದರು. 8 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿದ ಸ್ಮೃತಿ ಮಂಧಾನಾ 190.62 ಸ್ಟ್ರೈಕ್ ರೇಟ್ ನೊಂದಿಗೆ ಬ್ಯಾಟ್ ಬೀಸಿದರು. ಸ್ಮೃತಿ ಮಂಧಾನ ಔಟ್ ಆದ ಬಳಿಕ ಟೀಮ್ ಇಂಡಿಯಾದ ರನ್ ವೇಗ ತಗ್ಗಿತು. ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ 20 ಎಸೆತಗಳಲ್ಲಿ 20 ರನ್ ಕಲೆಹಾಕಿದರೆ, ದೀಪ್ತಿ ಶರ್ಮಾ 20 ಎಸೆತಗಳಲ್ಲಿ 22 ರನ್ ಬಾರಿಸಿದರು, ಪೂಜಾ ವಸ್ತ್ರಾಕರ್ ಡೈಮಂಡ್ ಡಕ್ ಔಟ್ ಆದರು ಹಾಗೂ ಜೆಮಿಮಾ ರೊಡ್ರಿಗಸ್ ಅಜೇಯ 44 ರನ್ ಮತ್ತು ಸ್ನೇಹ್ ರಾಣಾ ಯಾವುದೇ ರನ್ ಕಲೆಹಾಕದೇ ಅಜೇಯರಾಗಿ ಉಳಿದರು.

ಇಂಗ್ಲೆಂಡ್ ಇನ್ನಿಂಗ್ಸ್
ಟೀಮ್ ಇಂಡಿಯಾ ನೀಡಿದ ಪೈಪೋಟಿಯುತ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಪರ ಸೋಫಿಯಾ ಡಂಕ್ಲಿ 19, ಡೇನಿಯಲ್ ವ್ಯಾಟ್ 35, ಆಲಿಸ್ ಕ್ಯಾಪ್ಸಿ 13, ನಾಯಕಿ ನಟಾಲಿ ಸ್ಕೀವರ್ 41, ಆ್ಯಮಿ ಜೋನ್ಸ್ 31, ಕ್ಯಾಥರಿನ್ ಬ್ರಂಟ್ ಡಕ್ ಔಟ್, ಮಿಯಾ ಬೌಷರ್ ಅಜೇಯ 4 ಮತ್ತು ಸೋಫಿ ಎಕ್ಸ್ಲೆಸ್ಟೋನ್ ಅಜೇಯ 7 ರನ್ ಕಲೆ ಹಾಕಿದರು.
ಭಾರತದ ಪರ ಸ್ನೇಹ್ ರಾಣಾ 2 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ 1 ವಿಕೆಟ್ ಪಡೆದರು.

ಭಾರತಕ್ಕೆ ಮತ್ತೊಂದು ಪದಕ ಖಚಿತ
ಇನ್ನು ಇಂಗ್ಲೆಂಡ್ ತಂಡವನ್ನು ಮಣಿಸಿ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿರುವ ಭಾರತ ವನಿತೆಯರ ತಂಡ ನಾಳೆ ( ಆಗಸ್ಟ್ 7 ) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಎರಡನೇ ಸೆಮಿಫೈನಲ್ ಗೆದ್ದು ಬರುವ ತಂಡದ ಜತೆ ಸೆಣಸಾಟ ನಡೆಸಲಿದೆ. ಹೀಗೆ ಫೈನಲ್ ಪ್ರವೇಶ ಮಾಡಿ ಐತಿಹಾಸಿಕ ಸಾಧನೆ ಮಾಡಿರುವ ಭಾರತ ವನಿತೆಯರು ಫೈನಲ್ ಪಂದ್ಯದಲ್ಲಿ ಗೆದ್ದರೆ ಚಿನ್ನ ಅಥವಾ ಸೋತರೆ ಬೆಳ್ಳಿ ಪದಕವನ್ನು ಗೆಲ್ಲಲಿದ್ದಾರೆ. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ಬರುವುದು ಖಚಿತವಾಗಿದ್ದು, ಭಾರತ ಕ್ರಿಕೆಟ್ ತಂಡ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಆಯೋಜನೆಯಾದ ಮೊದಲನೇ ಆವೃತ್ತಿಯಲ್ಲಿಯೇ ಪದಕ ಪಡೆದ ಐತಿಹಾಸಿಕ ದಾಖಲೆ ಬರೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications